ದಾವಣಗೆರೆ:ಧರ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಾತಂತ್ರ್ಯ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ದೇಶದಲ್ಲಿ ಅವರದ್ದೇ ಆದ ಧರ್ಮ ಪಾಲನೆ ಮಾಡಲು ಸಂವಿಧಾನ ಅವಕಾಶ ನೀಡಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು ಚಟುವಟಿಕೆಗಳನ್ನು ನಡೆಸಲು ಅನುಮತಿ ಪಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರವಾಗಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಶೆಟ್ಟಿಹಳ್ಳಿಯಲ್ಲಿ ಇಂದು ಶ್ರೀಗಳು ಮಾತನಾಡಿದರು. ಧರ್ಮಕ್ಕೆ ವ್ಯತಿರಿಕ್ತವಾದ ನಿರ್ಧಾರ ಕೈಗೊಂಡಾಗ ಜನರು ವಿರೋಧ ಮಾಡಿದ್ದಾರೆ. ಸರ್ಕಾರ ಈಗ ಅಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ.
ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು. ಅದು ಪೂರ್ಣ ಆಗುವವರೆಗೆ ಧರ್ಮಪೀಠಗಳು ಅದರ ಬಗ್ಗೆ ಏನೂ ಹೇಳುವುದಿಲ್ಲ. ದೇಶದಲ್ಲಿ ಅವರದ್ದೇ ಆದ ಧರ್ಮ ಪಾಲನೆ ಮಾಡಲು ನಮ್ಮ ಸಂವಿಧಾನ ಅವಕಾಶ ಕೊಟ್ಟಿದೆ. ಧರ್ಮದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಾತಂತ್ರ್ಯ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ನಮ್ಮನ್ನು ಆಳುವ ರಾಜಕೀಯ ಪಕ್ಷಗಳು ಜಾತಿ-ಜಾತಿಗಳ ನಡುವೆ ಸಂಘರ್ಷ ತರುವ ಬದಲು ಸಹಬಾಳ್ವೆಯಿಂದ ಇರುವಂತೆ ಅವಕಾಶ ಮಾಡಬೇಕು ಎಂದು ಹೇಳಿದರು.
ಜಾತಿಗಿಂತ ಧರ್ಮ ಪರಂಪರೆ ಮುಖ್ಯ. ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಸಾಮರಸ್ಯದಿಂದ ಎಲ್ಲರೂ ಸೇರಿ ಬಾಳಿ ಬದುಕಬೇಕೆಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಕೆಲವರು ಸರ್ಕಾರದ ಸವಲತ್ತಿಗಾಗಿ ಧರ್ಮದ ಒಡಕಿನ ಮಾತುಗಳನ್ನಾಡುತ್ತಿದ್ದಾರೆ. ಮುಂದುವರೆದ ಜಾತಿಗಳಲ್ಲೂ ಕೂಡ ಬಡವರಿದ್ದಾರೆ.
ಅಂತಹ ಬಡವರ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿತ್ತು. ಆದರೆ, ಅದು ಆಗಿಲ್ಲ. ಜಾತಿ ಅಧರಿಸಿ ಸೌಲಭ್ಯಗಳನ್ನು ಕೊಡುವುದಕ್ಕಿಂತ ಆರ್ಥಿಕವಾಗಿ ದುರ್ಬಲರಿಗೆ ಸೌಲಭ್ಯ ನೀಡಬೇಕೆಂದು ಶ್ರೀಗಳು ಸಲಹೆ ನೀಡಿದರು. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ:ಕಶಟ್ಟಿಹಳ್ಳಿ ಗ್ರಾಮದಲ್ಲಿಂದು ಶ್ರೀಗಳ ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಉತ್ಸವದಲ್ಲಿ ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರೆ, ಗ್ರಾಮಸ್ಥರು ಡೊಳ್ಳು ಕುಣಿತದ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸುಮಾರು ಎರಡು ಕಿಲೋಮೀಟರ್ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಕೆಳಗೆ ನುಸುಳಿದರೆ ಒಳಿತಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಭಕ್ತರು ಅಡ್ಡ ಪಲ್ಲಕ್ಕಿಯ ಕೆಳಗೆ ನುಸುಳಿ ಭಕ್ತಿ ಮೆರೆದರು. ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ: ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು 'ಅಕ್ರಮ ಕೂಟ'ವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ನಿನ್ನೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಟ್ರಸ್ಟ್, ವಿ-ಕೇರ್ ಫೌಂಡೇಷನ್ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ.








