ಏಷ್ಯಾಕಪ್​ನಲ್ಲಿಂದು ಭಾರತ vs ಯುಎಇ: ನೇರಪ್ರಸಾರ​, ಹೆಡ್​ ಟು ಹೆಡ್​, ಸಂಭಾವ್ಯ ತಂಡಗಳು

ಏಷ್ಯಾಕಪ್​ನಲ್ಲಿಂದು ಭಾರತ vs ಯುಎಇ: ನೇರಪ್ರಸಾರ​, ಹೆಡ್​ ಟು ಹೆಡ್​, ಸಂಭಾವ್ಯ ತಂಡಗಳು
By Published : September 10, 2025 at 11:42 AM IST | Updated : September 10, 2025 at 11:49 AM IST

Asia Cup IND vs UAE: ಏಷ್ಯಾಕಪ್​ ಕ್ರಿಕೆಟ್​ ಟೂರ್ನಿ ಮಂಗಳವಾರದಿಂದ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಹಾಂಗ್‌ಕಾಂಗ್​ ವಿರುದ್ಧ ಗೆದ್ದು ಬೀಗಿತು. ಇಂದು ಎರಡನೇ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ಯುಎಇ ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕೆ ದುಬೈ ಅಂತರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿಕೊಳ್ಳುತ್ತಿದೆ. ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಯುಎಇ ವಿರುದ್ಧದ ಈ ಪಂದ್ಯವನ್ನು ಸಲೀಸಾಗಿ ಗೆಲ್ಲುವ ನಿರೀಕ್ಷೆ ಇದೆ. ಆದರೂ, ಟಿ20 ಪಂದ್ಯಗಳಲ್ಲಿ ಯಾವುದೇ ತಂಡವನ್ನು ಕಡಿಮೆ ಅಂದಾಜಿಸಲು ಸಾಧ್ಯವಿಲ್ಲ. ಯುಎಇ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದಿರುವುದು ಈ ನಿಟ್ಟಿನಲ್ಲಿ ಗಮನಾರ್ಹ.

ಇಂದಿನ ಪಂದ್ಯದಲ್ಲಿ ಭಾರತ ಪ್ಲೇಯಿಂಗ್​ 11ರಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಕುತೂಹಲವಿದೆ. ಯುಎಇ ಸಾಮಾನ್ಯ ತಂಡ ಆಗಿರುವುದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವಕರಿಗೆ ಅವಕಾಶ ನೀಡುತ್ತಾರೆಯೇ? ಅಥವಾ ದುಬೈ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಪ್ರಮುಖ ಆಟಗಾರರನ್ನು ಕಣಕ್ಕಿಳಿಸುತ್ತಾರೆಯೇ? ಎಂಬುದು ಪಂದ್ಯದ ಟಾಸ್​ ಬಳಿಕ ತಿಳಿಯಬೇಕು. ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಆಡುವ 11ರ ಬಳಗದಲ್ಲಿ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಮತ್ತು ಮೂವರು ಸೀಮರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಭಾರತದ ಇತ್ತೀಚಿನ ದಾಖಲೆ: 2024ರ ಟಿ20 ವಿಶ್ವಕಪ್‌ನಿಂದ ಟೀಮ್​ ಇಂಡಿಯಾ ಅತ್ಯುತ್ತಮ ಫಾರ್ಮ್​ನಲ್ಲಿ ಮುಂದುವರೆದಿದೆ. ಕಳೆದ 24 ಪಂದ್ಯಗಳಲ್ಲಿ 21ರಲ್ಲಿ ಗೆಲುವು ಸಾಧಿಸಿರುವ ತಂಡ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್​ ಇಂಡಿಯಾ ಈ ಬಾರಿ ಪ್ರಶಸ್ತಿ ಗೆಲ್ಲುವ ಫೆವರೀಟ್​ ತಂಡ.

IND vs UAE- ಹೆಡ್​ ಟು ಹೆಡ್​: ಭಾರತ-ಯುಎಇ ತಂಡಗಳು ಇದುವರೆಗೆ ಟಿ20ಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಅದೂ ಕೂಡ 2016ರ ಏಷ್ಯಾಕಪ್‌ನಲ್ಲಿ. ಈ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ 9 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಉಳಿದಂತೆ ಏಕದಿನ ಮಾದರಿಯಲ್ಲಿ, ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಪ್ರತಿ ಬಾರಿಯೂ ಭಾರತ ಗೆದ್ದಿದೆ. ಈ ಎರಡೂ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು 2015ರ ಏಕದಿನ ವಿಶ್ವಕಪ್‌ನಲ್ಲಿ. ಇದೀಗ 9 ವರ್ಷಗಳ ಬಳಿಕ ಏಷ್ಯಾಕಪ್​ನಲ್ಲಿ ಮತ್ತೆ ಎದುರಾಗುತ್ತಿವೆ.

ಪಿಚ್ ರಿಪೋರ್ಟ್​: ದುಬೈ ಮೈದಾನದಲ್ಲಿ ಇದುವರೆಗೆ ನಡೆದ ಟಿ20 ಪಂದ್ಯಗಳಲ್ಲಿ ಬೌಲರ್‌ ಮತ್ತು ಬ್ಯಾಟ್ಸ್‌ಮನ್‌ಗಳ ನಡುವೆ ಸಮಾನ ಹೋರಾಟ ನಡೆದಿದೆ. ಸ್ಪಿನ್ನರ್‌ಗಳು ಇಲ್ಲಿ ಹೆಚ್ಚು ಲಾಭ ಪಡೆಯಲಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಸ್ಕೋರ್ 140ರಿಂದ 145 ರನ್‌. ಇದಲ್ಲದೆ, ಇಲ್ಲಿಯವರೆಗೆ ನಡೆದ 110 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 51 ಪಂದ್ಯಗಳನ್ನು ಗೆದ್ದರೆ, ಚೇಸಿಂಗ್​ ತಂಡಗಳು 58 ಪಂದ್ಯಗಳನ್ನು ಗೆದ್ದುಕೊಂಡಿವೆ.

ಪಂದ್ಯ ಆರಂಭ, ನೇರಪ್ರಸಾರ: ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟವರ್ಕ್ಸ್​ನಲ್ಲಿ ನೋಡಬಹುದು. ಅಲ್ಲದೆ ಸೋನಿ ಲೀವ್​ನಲ್ಲಿ ಲೈವ್​ ಸ್ಪ್ರೀಮಿಂಗ್​ ಆಗಲಿದೆ.

ಭಾರತ- ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್.

ಯುಎಇ ತಂಡ: ಅಲಿಶನ್ ಷರೀಫ್, ಮೊಹಮ್ಮದ್ ವಾಸಿಮ್, ಮೊಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಮೊಹಮ್ಮದ್ ಫಾರೂಕ್, ಮೊಹಮ್ಮದ್ ರೋಹಿದ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್ ಸಿಂಗ್.

📚 Related News