ಬೆಂಗಳೂರು: ವಿಚ್ಛೇದನ ಪ್ರಕರಣದಲ್ಲಿ ಹೆಂಡತಿ ಉದ್ಯೋಗ ಪಡೆಯಲು ಮುಂದಾಗದೇ ಶಾಶ್ವತವಾಗಿ ಗಂಡನ ಮೇಲೆ ಅವಲಂಬಿತಳಾಗುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮುಂದಿನ ಆರು ತಿಂಗಳಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಪ್ರಕರಣವೊಂದರಲ್ಲಿ ವಿಚ್ಛೇದಿತ ಪತ್ನಿಗೆ ಸಲಹೆ ನೀಡಿದೆ.
ದೂರುದಾರೆ ಪತ್ನಿ ಉನ್ನತಮಟ್ಟದ ಶಿಕ್ಷಣ ಪಡೆದಿದ್ದರೂ ತೀವ್ರ ಒತ್ತಡದಲ್ಲಿದ್ದೇನೆ, ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಗಳನ್ನು ನೀಡಿ ಪತಿಯಿಂದ ಜೀವನಾಂಶ ಪಡೆಯಲು ಆಧಾರವಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಚ್ಚೇದನದ ಬಳಿಕ ಮಾಸಿಕ 20 ಸಾವಿರ ರು.ಗಳ ಜೀವನಾಂಶ ನೀಡಲು ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟ್ಟಿ ಅವರಿದ್ದ ನ್ಯಾಯಪೀಠ ಈ ಮೇಲಿನಂತೆ ಹೇಳಿದೆ.
ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರತಿವಾದಿಯಾಗಿರುವ ಪತ್ನಿ ಜೈವಿಕ ತಂತ್ರಜ್ಞಾನದಲ್ಲಿ ಎಂ.ಟೆಕ್ ಪದವೀಧರೆಯಾಗಿದ್ದು, ಉದ್ಯೋಗ ಪಡೆಯುವುದಕ್ಕೆ ಅರ್ಹರಾಗಿದ್ದಾರೆ. ವಿವಾಹಕ್ಕೂ ಮುನ್ನ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ವಿಚ್ಛೇದನದ ಬಳಿಕ ಮಾನಸಿಕ ಒತ್ತಡದಿಂದ ಉದ್ಯೋಗ ಪಡೆಯಲು ಪ್ರಯತ್ನ ಮಾಡಿಲ್ಲ ಎಂಬ ಅಂಶ ದಾಖಲೆಗಳ ಮೂಲಕ ತಿಳಿದು ಬಂದಿದೆ. ಉದ್ಯೋಗ ಪಡೆದು ದುಡಿಯಲು ಅರ್ಹರಿದ್ದರೂ ಮನೆಯಲ್ಲಿ ಕುಳಿತು ಪತಿಯನ್ನು ಅವಲಂಬಿಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜತೆಗೆ, ವಿಚಾರಣಾ ನ್ಯಾಯಾಲಯದ ಆದೇಶ ಮಾರ್ಪಡಿಸಿರುವ ನ್ಯಾಯಪೀಠ, ಮುಂದಿನ ಆರು ತಿಂಗಳಲ್ಲಿ ಪತ್ನಿ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಅಲ್ಲಿಯವರೆಗೂ ಮಾಸಿಕ 10 ಸಾವಿರ ರು.ಗಳನ್ನು ಪತಿ ಪಾವತಿಸಬೇಕು ಎಂದು ಸೂಚನೆ ನೀಡಿದೆ.
ಅಲ್ಲದೆ, ಆರು ತಿಂಗಳ ಬಳಿಕ (ಪತ್ನಿಗೆ ಕೆಲಸ ಸಿಕ್ಕ ನಂತರ) 10 ಸಾವಿರ ರೂಪಾಯಿ ಪಾವತಿಸಲು ನಿರ್ದೇಶನ ನೀಡಿರುವ ಆದೇಶವನ್ನು ಮರು ಪರಿಶೀಲನೆ ನಡೆಸಲು ಕೌಟುಂಬಿಕ ನ್ಯಾಯಾಲಯಕ್ಕೆ ಪತಿ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿರುತ್ತಾರೆ. ಪತ್ನಿಯು ಉದ್ಯೋಗಕ್ಕಾಗಿ ಪ್ರಯತ್ನ ಮಾಡಿರುವ ಸಂಬಂಧ ಅಗತ್ಯ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ದಂಪತಿಯ ವೈವಾಹಿಕ ಜೀವನ ಕೇವಲ ಎರಡು ತಿಂಗಳು ನಡೆದಿತ್ತು. ಪತಿಯ ದುರ್ಬಲತೆ ಆಧಾರದಲ್ಲಿ ವಿಚ್ಛೇದನ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಪತಿ, ಪತ್ನಿಯೇ ಹಿಂಸೆ ನೀಡುತ್ತಿದ್ದಾರೆ ಎಂಬುದಾಗಿ ಆಕ್ಷೇಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತಿ 58 ಸಾವಿರ ರು.ಗಳ ವೇತನ ಪಡೆಯುತ್ತಿರುವ ಅಂಶದ ಆಧಾರದ ಮೇಲೆ ಪ್ರಾರಂಭದಲ್ಲಿ 5 ಸಾವಿರ ರು.ಗಳ ಜೀವನಾಂಶ ನೀಡಲು ಸೂಚನೆ ನೀಡಿತ್ತು. ವಿಚಾರಣೆಯ ಬಳಿಕ ಹೆಚ್ಚುವರಿಯಾಗಿ 15 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆಯ ವೇಳೆ ಅರ್ಜಿದಾರ (ಪತಿ) ಪರ ವಕೀಲರು, ಪತ್ನಿ ಬಯೋಟೆಕ್ನಾಲಜಿಯಲ್ಲಿ ಎಂಟೆಕ್ ಪೂರ್ಣಗೊಳಿಸಿದ್ದು, ಈ ಮುನ್ನ ನೀಲ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಿದ್ದಾರೆ. ಮದುವೆಯ ಬಳಿಕ ಕೆಲಸವನ್ನು ತೊರೆದಿದ್ದು, ಬೇರೊಂದು ಕೆಲಸ ಮಾಡುವುದಕ್ಕೆ ಮುಂದಾಗಿಲ್ಲ. ಇದೀಗ 20 ಸಾವಿರ ರೂ.ಗಳನ್ನು ಪರಿಹಾರ ನೀಡಬೇಕು ಎಂದು ಸೂಚಿಸಿದೆ. ಆದ್ದರಿಂದ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಪತ್ನಿಯ ಪರ ವಕೀಲರು, ಪತಿಯಿಂದ ಕಿರುಕುಳ, ದುರ್ಬಲ ಸಂಬಂಧದ ಗೊಂದಲಗಳಿಂದ ಮಹಿಳೆ ತೀವ್ರ ಒತ್ತಡದಲ್ಲಿದ್ದಾರೆ. ಎರಡನೇ ಮದುವೆ ಆಗಲು ಸಾಮಾಜಿಕ ಕಳಂಕ ಎದುರಿಸಬೇಕಾಗುತ್ತದೆ. ಆದ್ದರಿಂದ, ಪ್ರಸ್ತುತ ಅವರು ಉದ್ಯೋಗ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.