ಬೆಂಗಳೂರು: ತಮ್ಮಕಾರ್ಯವೈಖರಿಯನ್ನು ಆಕ್ಷೇಪಿಸಿ ಸಭಾಪತಿ ಬಸವರಾಜ್ ಹೊರಟ್ಟಿ ಬರೆದಿದ್ದ ಪತ್ರಕ್ಕೆ ಸ್ಪೀಕರ್ ಯು.ಟಿ.ಖಾದರ್ ನಯವಾಗಿ ಪ್ರತ್ಯುತ್ತರ ನೀಡಿದ್ದಾರೆ. ಸಣ್ಣಪುಟ್ಟ ನ್ಯೂನತೆಗಳಿದ್ದರೆ, ಚರ್ಚಿಸಿ ಸಮನ್ವಯದಿಂದ ಪರಿಹರಿಸಿಕೊಂಡು ಕಾರ್ಯನಿರ್ವಹಿಸಿ, ವಿಧಾನಮಂಡಲ ಹಾಗೂ ರಾಜ್ಯದ ಕೀರ್ತಿಗೆ ಭಾಜನರಾಗೋಣ ಎಂದು ತಿಳಿಸಿದ್ದಾರೆ.
ಸ್ಪೀಕರ್ ಪತ್ರದ ವಿವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದ ವಿಧಾನಪರಿಷತ್ ಮತ್ತು ವಿಧಾನಸಭೆ ಎರಡೂ ಸದನಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಸಂಬಂಧಪಟ್ಟ ಸಚಿವಾಲಯದ ಕಚೇರಿ ಕಾರ್ಯಕ್ರಮಗಳೂ ಸಹ ಇದೇ ದೃಷ್ಟಿಯಿಂದ ಹಾಗೂ ದಿಕ್ಕಿನಲ್ಲಿ ಸಾಗಬೇಕೆಂಬ ತಮ್ಮ ಅಭಿಪ್ರಾಯಕ್ಕೆ ನಾನು ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ. ಇದು ನನ್ನ ಮೊದಲ ಆದ್ಯತೆಯಾಗಿದೆ ಎಂಬುದನ್ನೂ ಸಹ ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಆದರೆ, ತಾವು ಬರೆದ ಪತ್ರದಲ್ಲಿ ವಿಧಾನಪರಿಷತ್ ಸಭಾಪತಿಯಾದ ತಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸದೆ, ಅಧಿಕೃತ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಉಲ್ಲೇಖಿಸಿರುತ್ತೀರಿ. ಈ ಸಂಬಂಧದಲ್ಲಿ ತಮ್ಮ ಗಮನಕ್ಕೆ ಕೆಲ ಅಂಶಗಳನ್ನು ತರಬಯಸುತ್ತೇನೆ.
ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಇದೇ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಆಯೋಜಿಸಲಾಗಿದ್ದು, ಈ ಮೇಳದ ರೂಪುರೇಷೆ ಇತ್ಯಾದಿಗಳನ್ನು ತಮ್ಮ ಗಮನಕ್ಕೆ ತರಲಾಗಿತ್ತು. ಈ ಮೇಳ ಮುಖ್ಯಮಂತ್ರಿಯವರಿಂದ ಉದ್ಘಾಟಿಸಲ್ಪಟ್ಟು, ನಮ್ಮಿಬ್ಬರ ಜಂಟಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆದು, ಯಶಸ್ವಿಯಾಗಿ ರಾಜ್ಯದ ಜನರ ಮೆಚ್ಚುಗೆ ಪಡೆದಿದೆ. ಅಲ್ಲದೆ, ನಾವು ಇಬ್ಬರೂ ಸೇರಿ ರಾಜ್ಯಪಾಲರನ್ನು ಸ್ವಾಗತಿಸಿ, ಅವರೂ ನಮ್ಮಿಬ್ಬರೊಂದಿಗೆ ಪುಸ್ತಕ ಮೇಳವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದ ವಿಚಾರಕ್ಕೂ ತಾವು ಸಾಕ್ಷಿಯಾಗಿದ್ದೀರಿ.
ತಮಗೆ ತಿಳಿದಿರುವಂತೆ ಸುವರ್ಣ ವಿಧಾನಸೌಧದಲ್ಲಿ ಲೇಸರ್ ದೀಪಗಳನ್ನು ಅಳವಡಿಸಲಾಗಿದೆ. ಅದರಂತೆಯೇ ವಿಧಾನಸೌಧ ಕಟ್ಟಡದಲ್ಲಿಯೂ ಲೇಸರ್ ದೀಪ ಅಳವಡಿಸುವುದಕ್ಕೆ ನಾನು ಕಾಳಜಿ ವ್ಯಕ್ತಪಡಿಸಿದ್ದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಂತರ, ಅವರ ಆಸಕ್ತಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆಯ ಸಹಯೋಗದಿಂದ ಈ ಕಾರ್ಯ ನೆರವೇರಿದೆ. ಹೀಗಾಗಿ, ಈ ಯೋಜನೆ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯ ಸಹಕಾರದಿಂದಲೇ ನಡೆದಿದೆ.
ಕಾರ್ಯಕ್ರಮ ಏಕಪಕ್ಷೀಯ ನಿರ್ಧಾರವಲ್ಲ: 11ನೇ ಸಿಪಿಎ ಭಾರತ ವಲಯ ಸಮ್ಮೇಳನವನ್ನು ಕರ್ನಾಟಕದಲ್ಲಿ ಆಯೋಜಿಸಲು ಲೋಕಸಭಾ ಸಚಿವಾಲಯದಿಂದ ಕೋರಿಕೆ ಬಂದಿದ್ದು, ಅದಕ್ಕೆ ನಾವಿಬ್ಬರು ಸೇರಿ ಒಪ್ಪಿಗೆ ನೀಡಿರುತ್ತೇವೆ. ತದನಂತರ ಸಮ್ಮೇಳನದ ಆಯೋಜನೆ ಕುರಿತು ನಾನು ಸ್ವತಃ ತಮ್ಮ ಕೊಠಡಿಗೆ ಆಗಮಿಸಿ, ಪರಸ್ಪರ ಚರ್ಚಿಸಿದ ನಂತರ ಅಧಿವೇಶನವನ್ನು ಹೋಟೆಲ್ ತಾಜ್ ವೆಸ್ಟ್ ಎಂಡ್ನಲ್ಲಿ ನಡೆಸಲು ನಿರ್ಧಾರ ಕೈಗೊಂಡಿದ್ದೇವೆ. ಜೊತೆಗೆ, ಸಮ್ಮೇಳನದ ಪ್ರತಿನಿಧಿಗಳಿಗೆ ನಾವು ಇಬ್ಬರೂ ಸೇರಿ ಆಹ್ವಾನ ನೀಡಿದ್ದೇವೆ. ಸಮ್ಮೇಳನದ ವಿವರ ಹಾಗೂ ವೇಳಾಪಟ್ಟಿ ಲೋಕಸಭಾ ಸಚಿವಾಲಯದ ಮೂಲಕ ನಿರ್ವಹಿಸಲಾಗುತ್ತಿದೆ. ಶಿಷ್ಟಾಚಾರ ಹಾಗೂ ಇತರ ಕಾರ್ಯಗಳಿಗೆ ಉಭಯ ಸಚಿವಾಲಯಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಉಭಯ ಕಾರ್ಯದರ್ಶಿಗಳಿಗೆ ಪರಸ್ಪರ ಚರ್ಚಿಸಿ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ಹೀಗಾಗಿ, ಈ ಕಾರ್ಯಕ್ರಮ ಏಕಪಕ್ಷೀಯ ನಿರ್ಧಾರವಲ್ಲ ಎಂಬುದು ನನ್ನ ಭಾವನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಸಮ್ಮೇಳನ ಕುರಿತು ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಆದರೆ 29/08/2025ರಂದು ನಡೆದ ಪತ್ರಿಕಾಗೋಷ್ಠಿಯನ್ನು 11/08/2025ರಿಂದ 22/08/2025ರವರೆಗೆ ನಡೆದ ಅಧಿವೇಶನದ ಕಾರ್ಯಕಲಾಪಗಳ ಬಗ್ಗೆ ವಿಷಯ ತಿಳಿಸಲು ಕರೆಯಲಾಗಿತ್ತು. ಈ ವೇಳೆ, ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನದ ಬಗ್ಗೆ ಕೇಳಿದ ಪ್ರಶ್ನೆಗೆ ಮಾತ್ರ ಮಾಹಿತಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಕಾನ್ಸರೆನ್ಸ್: ಅಕ್ಟೋಬರ್ 2025ರಲ್ಲಿ ಬಾರ್ಬಡೋಸ್ನಲ್ಲಿ ನಡೆಯುವ 68ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಕಾನ್ಸರೆನ್ಸ್ಗೆ ಬಂದ ಆಹ್ವಾನದ ಕುರಿತು ವಿಧಾನಸಭಾ ಕಾರ್ಯದರ್ಶಿಯವರು ಸಲ್ಲಿಸಿದ ಕಡತದಲ್ಲಿ, ತಾವು ಪ್ರತಿನಿಧಿಯಾಗಿ ಹಾಗೂ ನಾನು ವೀಕ್ಷಕರಾಗಿ ಭಾಗವಹಿಸುವುದಕ್ಕೆ ನಾವು ಇಬ್ಬರೂ ಒಪ್ಪಿಗೆ ನೀಡಿದ್ದೇವೆ ಎಂಬುದನ್ನು ತಿಳಿಸಲು ಈ ಮೂಲಕ ಬಯಸುತ್ತೇನೆ. ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನನ್ನ ಆಪ್ತ ಕಾರ್ಯದರ್ಶಿಗೆ ಪ್ರವಾಸದ ಕಾರ್ಯಕ್ರಮವನ್ನು ಸಿದ್ಧಪಡಿಸಲು ತಿಳಿಸಿದ್ದೆ. ಈ ವಿಚಾರವನ್ನು ತಮಗೂ ಹಾಗೂ ತಮ್ಮ ಇಲಾಖಾ ಕಾರ್ಯದರ್ಶಿ/ಆಪ್ತ ಕಾರ್ಯದರ್ಶಿಗೆ ಸಂಬಂಧಪಟ್ಟ ಅಧಿಕಾರಿಯವರು ತಮಗೆ ವಿವರಿಸಿರುತ್ತಾರೆ ಎಂಬುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ವಿವರಿಸಿದ್ದಾರೆ.
ವಿಧಾನ ಮಂಡಲದಿಂದ ಆಯೋಜಿಸಲ್ಪಡುವ ಎಲ್ಲ ಕಾರ್ಯಕ್ರಮಗಳನ್ನು ಸದಾ ಸೂಕ್ಷ್ಮವಾಗಿ ಗಮನಿಸಿ, ಆಗಾಗ ತಮಗೂ ತಿಳಿಸಿ, ಹಿರಿಯರಾದ ತಮ್ಮೊಂದಿಗೆ ಚರ್ಚಿಸಿ ನಿರ್ವಹಿಸಿದ್ದೆ ಎಂಬುದು ನನ್ನ ನಂಬಿಕೆ. ಆದರೂ, ತಮ್ಮ ಪತ್ರವನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುತ್ತೇನೆ. ಇನ್ನು ಮುಂದೆ ಸಣ್ಣ ಸಣ್ಣ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಚರ್ಚಿಸಿ ಸಮನ್ವಯದಿಂದ ಪರಿಹರಿಸಿಕೊಂಡು ಕಾರ್ಯನಿರ್ವಹಿಸಿ, ವಿಧಾನಮಂಡಲದ ಮತ್ತು ರಾಜ್ಯದ ಕೀರ್ತಿಗೆ ಭಾಜನರಾಗೋಣ ಎಂಬುದು ನನ್ನ ಆಶಯ ಎಂದು ಸಭಾಪತಿ ಹೊರಟ್ಟಿ ಅವರಿಗೆ ಪ್ರತಿಕ್ರಿಯಿಸಿದ್ದಾರೆ.