ತಂಗಿ ಮೇಲಿನ ದ್ವೇಷಕ್ಕೆ ಆಕೆಯ ಮಗನ ಕೊಂದ ಅಕ್ಕ: ಕೊಲೆಗಾತಿ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

ತಂಗಿ ಮೇಲಿನ ದ್ವೇಷಕ್ಕೆ ಆಕೆಯ ಮಗನ ಕೊಂದ ಅಕ್ಕ: ಕೊಲೆಗಾತಿ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​
By Published : September 10, 2025 at 1:21 PM IST

ಚಿಕ್ಕಬಳ್ಳಾಪುರ: ತಂಗಿಯ ಮೇಲೆ ದ್ವೇಷದ ವಿಷ ಕಾರುತ್ತಿದ್ದ ಅಕ್ಕ, ಹಾನಿ ಮಾಡಲು ಸಂಚು ರೂಪಿಸಿ ಆಕೆಯ ಮಗನನ್ನ ಕೊಲೆ ಮಾಡಿದ್ದಳು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಹೆಚ್ಚುವರಿ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೊಲೆಗಾತಿ ಮಹಿಳೆಗೆ ಜೀವಾವಧಿ ಸೆರೆವಾಸ ಮತ್ತು 25 ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಕ್ರಾಸ್ ಬಳಿ ಇರುವ ಮಾವಿನ ತೋಪಿನಲ್ಲಿ ನಡೆದ ಕೊಲೆ ಘಟನೆಯಲ್ಲಿ 6 ವರ್ಷದ ಬಾಲಕ ಮಧು ಎಂಬಾತನನ್ನು ಹತ್ಯೆ ಮಾಡಿ ಮಣ್ಣಿನಲ್ಲಿ ಹೂಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧಿ ಅಂಬಿಕಾ ಎಂಬವರಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿವರ: ಕೊಲೆಯಾದ ಬಾಲಕ ಮಧು, ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿಯ ಅನಿತಾ ಎಂಬವರ ಪುತ್ರ. ಅನಿತಾ ಅವರು 10 ವರ್ಷಗಳ ಹಿಂದೆ ವಿಶ್ವನಾಥ್ ಎಂಬುವರನ್ನ ಮದುವೆಯಾಗಿದ್ದು, ದಂಪತಿಗೆ 8 ವರ್ಷದ ಮನುಶ್ರೀ, 6 ವರ್ಷದ ಮಧು ಎಂಬ ಮಕ್ಕಳಿದ್ದರು. ಗಂಡನ ಜೊತೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಅನಿತಾ ತವರು ಮನೆಗೆ ಬಂದು ತಾಯಿಯ ಜೊತೆ ನೆಲೆಸಿದ್ದರು.

ಅನಿತಾ ಅವರಿಗೆ ಅಂಬಿಕಾ ಎಂಬ ಅಕ್ಕ ಇದ್ದಾರೆ. ಅಕ್ಕನಿಗೆ ತಂಗಿ ಅನಿತಾ ಮೇಲೆ ಮೊದಲಿನಿಂದಲೂ ದ್ವೇಷ. ಗಂಡನ ಬಿಟ್ಟು ತವರು ಮನೆ ಸೇರಿದ್ದು, ಆಕೆಯಲ್ಲಿ ಮತ್ತಷ್ಟು ದ್ವೇಷಾಗ್ನಿ ಮೂಡಿತ್ತು. ತಂಗಿಗೆ ಏನಾದರೂ ಹಾನಿ ಮಾಡಬೇಕು ಎಂದು ಸಂಚು ರೂಪಿಸಿದ ಕೊಲೆಗಾತಿ ಅಂಬಿಕಾ, 2023 ರ ಡಿಸೆಂಬರ್​ 1ನೇ ತಾರೀಖಿನಂದು ತವರು ಮನೆಗೆ ಆಗಮಿಸಿ ಯಾರಿಗೂ ಹೇಳದೇ ಅನಿತಾ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು.

ಇತ್ತ ಅನಿತಾ ಅವರು ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಫೋನ್ ಕರೆ ಮಾಡಿ ಅಂಬಿಕಾ ಮತ್ತು ಮನುಶ್ರೀ ತಮ್ಮ ಬಳಿಕ ಇರುವ ಬಗ್ಗೆ ತಿಳಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ಅನಿತಾ ತನ್ನ ಮಗ ಎಲ್ಲಿ ಎಂದು ಕೇಳಿದ್ದಾರೆ. ಆದರೆ, ಆತ ಅಮ್ಮನ(ಅನಿತಾ) ಬಳಿ ಹೋಗುವುದಾಗಿ ಹೇಳಿ ಹೋದ ಎಂದು ಅಂಬಿಕಾ ಹೇಳಿದ್ದಾಳೆ.

ಮಗನನ್ನೇ ಕೊಂದ ದೊಡ್ಡಮ್ಮ: ಮಗ ನಾಪತ್ತೆಯಾದ ಬಗ್ಗೆ ಅಕ್ಕ ಅಂಬಿಕಾ ಮೇಲೆ ಅನುಮಾನವಿದೆ ಎಂದು ಅನಿತಾ ಅವರು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆ ಅಂಬಿಕಾಳನ್ನು ವಿಚಾರಣೆ ನಡೆಸಿದಾಗ 6 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ತಂಗಿಯ ಮೇಲಿನ ದ್ವೇಷಕ್ಕಾಗಿ ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ಹಿರೇನಾಗವಲ್ಲಿ ಕ್ರಾಸ್ ಬಳಿಯ ಮಾವಿನತೋಟದಲ್ಲಿ ಬಾಲಕ ಮಧುನನ್ನು ಗುದ್ದಲಿಯಿಂದ ಹೊಡೆದು ಸಾಯಿಸಿ, ಮಣ್ಣಿನಲ್ಲಿ ಹೂತು ಹಾಕಿದ್ದಾಗಿ ತಿಳಿಸಿದ್ದಳು. ಗುಂಡಿ ಅಗೆದಾಗ, ಶವ ಸಿಕ್ಕಿತ್ತು. ಕೊಲೆ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಕೊಲೆಗಾತಿ ಮಹಿಳೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

📚 Related News