ರಾತೋರಾತ್ರಿ ಆಸ್ಪತ್ರೆಗೆ ತೆರಳಿದ ರೋಹಿತ್​ ಶರ್ಮಾ: ಫ್ಯಾನ್ಸ್​ಗೆ ಆತಂಕ, ಏನಾಯ್ತು?

ರಾತೋರಾತ್ರಿ ಆಸ್ಪತ್ರೆಗೆ ತೆರಳಿದ ರೋಹಿತ್​ ಶರ್ಮಾ: ಫ್ಯಾನ್ಸ್​ಗೆ ಆತಂಕ, ಏನಾಯ್ತು?
By Published : September 9, 2025 at 12:02 PM IST | Updated : September 9, 2025 at 12:45 PM IST

Rohit Sharma Spotted at Hospital: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಸೋಮವಾರ ರಾತ್ರಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಇದನ್ನು ನೋಡಿದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಶರ್ಮಾ ಆಸ್ಪತ್ರೆಗೆ ಭೇಟಿ ನೀಡಲು ಕಾರಣವೇನು ಎಂದು ಜಾಲತಾಣಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಈ ಬಗ್ಗೆ ರೋಹಿತ್​ ಶರ್ಮಾ ಅವರಾಗಲೀ, ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಕಾರಣವನ್ನು ಬಹಿರಂಗಪಡಿಸಿಲ್ಲ. ಇದರ ನಡುವೆ ಫ್ಯಾನ್ಸ್ ರೋಹಿತ್​ ಶರ್ಮಾಗೆ ಏನೇ ಆಗಿದ್ದರೂ ಬೇಗ ಗುಣಮುಖರಾಗಲಿ ಎಂದು ಕಾಮೆಂಟ್‌ ಮಾಡಲಾರಂಭಿಸಿದ್ದಾರೆ.

ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದಕ್ಕಾಗಿ ರೋಹಿತ್​ ಶರ್ಮಾ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಯನ್ನು ರೋಹಿತ್​ ಶರ್ಮಾ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಈ ವರ್ಷದ ಇಂಗ್ಲೆಂಡ್​ ಟೆಸ್ಟ್​ ಸರಣಿಗೂ ಮೊದಲೇ ಮೇ ತಿಂಗಳಲ್ಲಿ ಹಿಟ್​ಮ್ಯಾನ್​ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್​ ನಿವೃತ್ತಿ ಘೋಷಣೆ ಮಾಡಿದ್ದರು. 2027ರ ಏಕದಿನ ವಿಶ್ವಕಪ್​ನಲ್ಲಿ ಆಡುವ ಗುರಿ ಹೊಂದಿರುವ ರೋಹಿತ್​ ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ನಿಂದ ಹಿಂದೆ ಸರಿದಿದ್ದಾರೆ.

ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆಡಿಲ್ಲ. ಇಬ್ಬರೂ ಈಗಾಗಲೇ ಟಿ20 ಗಳಿಂದ ನಿವೃತ್ತರಾಗಿದ್ದಾರೆ. ಈಗ ಅವರು ಸಂಪೂರ್ಣವಾಗಿ ಏಕದಿನ ಸ್ವರೂಪದತ್ತ ಗಮನ ಹರಿಸಲಿದ್ದಾರೆ. ಅಕ್ಟೋಬರ್ 19ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ.

ರೋಹಿತ್​ ವೃತ್ತಿ ಜೀವನ: ರೋಹಿತ್ ಶರ್ಮಾತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ 67 ಟೆಸ್ಟ್​, 273 ಏಕದಿನ ಮತ್ತು 159 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಸ್ವರೂಪದಲ್ಲಿ 40.57 ಸರಾಸರಿಯಲ್ಲಿ 4,301 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 18 ಅರ್ಧಶತಕ ಸೇರಿವೆ. ಅಲ್ಲದೆ, ಎರಡು ವಿಕೆಟ್​ ಸಹ ಪಡೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 48.76ರ ಸರಾಸರಿಯಲ್ಲಿ 11,168 ರನ್​ ಗಳಿಸಿದ್ದಾರೆ. ಇದರಲ್ಲಿ 32 ಶತಕ, 58 ಅರ್ಧಶತಕ ಸೇರಿವೆ. ಏಕದಿನ ಪಂದ್ಯವೊಂದರಲ್ಲಿ 264 ರನ್​ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಂದಿಗೂ ಈ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ. ಉಳಿದಂತೆ ಟಿ20 ಮಾದರಿಯಲ್ಲಿ 4,231 ರನ್​ ಗಳಿಸಿದ್ದು, 5 ಶತಕ, 32 ಅರ್ಧಶತಕ ಕಲೆಹಾಕಿದ್ದಾರೆ. 121 ಇವರ ಹೈಸ್ಕೋರ್​.

ಬಿಸಿಸಿಐ ಒಪ್ಪಂದ: ರೋಹಿತ್ ಶರ್ಮಾ ಪ್ರಸ್ತುತ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಎ+ ಶ್ರೇಣಿಯಲ್ಲಿದ್ದಾರೆ. ಈ ವಿಭಾಗದ ಆಟಗಾರರಿಗೆ ವಾರ್ಷಿಕ 7 ಕೋಟಿ ರೂ. ಪಾವತಿಸಲಾಗುತ್ತದೆ. ಇದರ ಜೊತೆಗೆ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.

ಸದ್ಯ ರೋಹಿತ್​ ಟೆಸ್ಟ್​, ಟಿ20ಯಿಂದ ನಿವೃತ್ತಿ ಪಡೆದಿದ್ದರೂ A+ ಶ್ರೇಣಿಯಲ್ಲೇ ಮುಂದುವರೆದಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಶರ್ಮಾ ಪ್ರತಿ ಋತುವಿಗೆ 16 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಆಟಗಾರರಲ್ಲಿ ಇವರೂ ಒಬ್ಬರು. ಒಟ್ಟಾರೆಯಾಗಿ, ರೋಹಿತ್ ಶರ್ಮಾ ವಾರ್ಷಿಕ ಆದಾಯ 50 ಕೋಟಿ ರೂ.ಗೂ ಅಧಿಕ ಎಂದು ವರದಿಯಾಗಿದೆ.

📚 Related News