ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ಎನ್ಡಿಆರ್ಎಫ್ನ 11ನೇ ಬೆಟಾಲಿಯನ್ ಸಹಯೋಗದಲ್ಲಿ ರೈಲ್ವೆ ಅಪಘಾತಗಳ ಬಳಿಕದ ರಕ್ಷಣಾ ಕಾರ್ಯಾಚರಣೆಯ ಪೂರ್ಣ ಪ್ರಮಾಣದ ಅಣಕು ಪ್ರದರ್ಶನವನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರದ ಬಳಿ ಬುಧವಾರ ನಡೆಸಲಾಯಿತು.
ತುರ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳುವ ಬಗೆಯನ್ನು ಈ ಅಣಕು ಕಾರ್ಯಾಚರಣೆಯಲ್ಲಿ ತೋರಿಸಲಾಯಿತು. ರೈಲು ಅಪಘಾತದ ಸೈರನ್ ಮೊಳಗುತ್ತಿದ್ದಂತೆ ರಕ್ಷಣಾ ಪಡೆಗಳು ಹಾಗೂ ಮೂರು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದವು. ಈ ವೇಳೆ ಅಪಘಾತಕ್ಕೀಡಾದ ರೈಲಿನಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತು.
ಬೋಗಿ ಕೊರೆದು ಪ್ರಯಾಣಿಕರ ರಕ್ಷಣೆ: ಎನ್ಡಿಆರ್ಎಫ್ ತಂಡದ ಸಿಬ್ಬಂದಿ ಅಪಘಾತಕ್ಕೆ ಒಳಗಾದ ರೈಲಿನ ಬೋಗಿಗಳನ್ನು ಕೊರೆದು ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಕರೆತಂದು, ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಹತ್ತಿರದ ರೈಲ್ವೆ ಆಸ್ಪತ್ರೆಗೆ ಸಾಗಿಸುವ ಅಣಕು ಪ್ರದರ್ಶನ ಮಾಡಲಾಯಿತು.

ಎನ್ಡಿಆರ್ಎಫ್ನ ಇನ್ನೊಂದು ತಂಡವು ಮೇಲಿಂದ ರೈಲ್ವೆ ಬೋಗಿ ಕೊರೆದು ಹಗ್ಗದ ಸಹಾಯದಿಂದ ಕೆಳಗಿಳಿದು ಒಬ್ಬೊಬ್ಬರನ್ನೇ ಹೊರ ತೆಗೆದರು. ಈ ವೇಳೆ ತಹಶಿಲ್ದಾರ್ ಮಹೇಶ್ ಗಸ್ತೆ ಸ್ಥಳದಲ್ಲಿ ಇದ್ದು, ಕೆಲಕಾಲ ಅಗತ್ಯ ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಣಕು ಪ್ರದರ್ಶನದಲ್ಲಿ ಗಾಯಗೊಂಡವರು ಮತ್ತು ಮರಣ ಹೊಂದಿದವರ ಮಾಹಿತಿ ಪಡೆದುಕೊಂಡರು. ಗಾಯಗೊಂಡವರು ಮತ್ತು ಮೃತರ ಕುಟುಂಬದವರನ್ನು ಭೇಟಿ ಮಾಡಿ ಮಾಹಿತಿ ಮತ್ತು ಸಾಂತ್ವನ ಹೇಳಿದರು.

ಪರಿಸ್ಥಿತಿ ನಿಭಾಯಿಸುವ ಬಗ್ಗೆ ಅರಿವು: ಈ ಕುರಿತಂತೆ ಹುಬ್ಬಳ್ಳಿ ವಿಭಾಗದ ಸೀನಿಯರ್ ಡಿವಿಜನ್ ಸೆಕ್ಯೂರಿಟಿ ಆಫೀಸರ್ ತ್ರಿನೇತ್ರ ಅವರು ಮಾತನಾಡಿ, ಅಣಕು ಪ್ರದರ್ಶನದಲ್ಲಿ ಹುಬ್ಬಳ್ಳಿ - ಗುಂತಕಲ್ ಪ್ಯಾಸೆಂಜರ್ ರೈಲು ಅಪಘಾತದ ಅಣಕು ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಎರಡು ರೈಲುಗಳು ಡಿಕ್ಕಿಯಾಗಿ ಒಂದು ಬೋಗಿಯ ಮೇಲೆ ಇನ್ನೊಂದು ಬೋಗಿ ಬಿದ್ದಾಗ ಯಾವ ರೀತಿ ಪ್ರಯಾಣಿಕರ ರಕ್ಷಣೆ ಮಾಡಬೇಕು ಎಂಬುದನ್ನು ನೈಜವಾಗಿ ತೋರಿಸುವ ಅಣಕು ಪ್ರದರ್ಶನ ಇದಾಗಿತ್ತು ಎಂದು ಅವರು ತಿಳಿಸಿದರು.
ಅಣಕು ಪ್ರದರ್ಶನದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಸಿಬ್ಬಂದಿ, ರೈಲ್ವೆ ವೈದ್ಯರು ಭಾಗಿಯಾಗಿದ್ದರು. ನಿಜವಾಗಿಯೂ ರೈಲ್ವೆ ದುರಂತಗಳು ನಡೆದಾಗ, ಯಾರೆಲ್ಲ ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ. ಆಗಿನ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ತೋರಿಸುವುದರ ಜೊತೆಗೆ ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಈ ಮಾಕ್ ಡ್ರಿಲ್ ಮೂಲಕ ಅರಿವು ಮೂಡಿಸಲಾಯಿತು ಎಂದು ಹೇಳಿದರು.