ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ಕಪೂರ್, ಮೃತ ತಂದೆಯ ಆಸ್ತಿಯಲ್ಲಿ ತಮಗೆ ಪಾಲು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಪಿತ್ರಾರ್ಜಿತ ಆಸ್ತಿ ವಿವಾದ ದೆಹಲಿ ಹೈಕೋರ್ಟ್ನಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ಪೀಠವು, ಸಂಜಯ್ ಕಪೂರ್ ಅವರ ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ವಿವರ ಸಲ್ಲಿಸುವಂತೆ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರಿಗೆ ಸೂಚಿಸಿದೆ. ಈ ಪ್ರಕರಣವನ್ನು ಅಕ್ಟೋಬರ್ 9ಕ್ಕೆ ಹೆಚ್ಚಿನ ವಿಚಾರಣೆಗೆ ನಿಗದಿಪಡಿಸಲಾಗಿದೆ.
ಪ್ರಿಯಾ ಕಪೂರ್ ಅವರು ಸಂಜಯ್ ಅವರ ಸಂಪೂರ್ಣ ಆಸ್ತಿಯನ್ನು ಪಡೆಯೋ ಪ್ರಯತ್ನದಲ್ಲಿ ಅವರ ವಿಲ್ ತಿರುಚಿದ್ದಾರೆ ಎಂದು ಆರೋಪಿಸಿ ಕರಿಷ್ಮಾ ಕಪೂರ್ (ಎರಡನೇ ಪತ್ನಿ/ವಿಚ್ಛೇದಿತ ಪತ್ನಿ) ಅವರ ಮಕ್ಕಳು ಸಲ್ಲಿಸಿರೋ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನ ಬಂದಿದೆ. ಮಾರ್ಚ್ 21, 2025 ದಿನಾಂಕ ಇರುವ ವಿಲ್‌ನಲ್ಲಿ, ಸಂಜಯ್ ಅವರ ಎಲ್ಲಾ ವೈಯಕ್ತಿಕ ಆಸ್ತಿಗಳ ಫಲಾನುಭವಿಯಾಗಿ ಪ್ರಿಯಾ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಉಲ್ಲೇಖಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂಜಯ್ ಅವರ ಅಕಾಲಿಕ ಮರಣದ ನಂತರ ಈ ವಿಲ್ ಅನ್ನು ಕೆಲ ವಾರಗಳ ಕಾಲ ಮರೆಮಾಡಲಾಗಿದೆ ಎಂದು ಕಪೂರ್ ಸಹೋದರರು ಹೇಳಿಕೊಂಡಿದ್ದಾರೆ. ಜುಲೈ 30ರಂದು ನಡೆದ ಮೀಟಿಂಗ್ನಲ್ಲಿ ಕುಟುಂಬಕ್ಕೆ ಈ ಮಾಹಿತಿ ಲಭ್ಯವಾಯಿತು ಎಂದು ವರದಿಯಾಗಿದೆ.
ತಮ್ಮ ತಂದೆಯೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದಾಗಿ ಮಕ್ಕಳು ಹೇಳಿಕೊಂಡಿದ್ದಾರೆ. ಸಂಜಯ್ ಯಾವಾಗಲೂ ತಮ್ಮ ಸೂಕ್ತ ಭವಿಷ್ಯ ಮತ್ತು ಆರ್ಥಿಕ ಸ್ಥಿರತೆಯ ಬಗ್ಗೆ ಭರವಸೆ ನೀಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ತಮ್ಮನ್ನು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಗುರುತಿಸಬೇಕು ಮತ್ತು ತಂದೆಯ ಆಸ್ತಿಯಲ್ಲಿ ಐದನೇ ಒಂದು ಭಾಗವನ್ನು ಪ್ರತಿಯೊಬ್ಬರಿಗೂ ಹಂಚಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಪ್ರಕರಣವು ಮುಕ್ತಾಯಗೊಳ್ಳುವವರೆಗೆ ಸಂಜಯ್ ಕಪೂರ್ ಅವರ ವೈಯಕ್ತಿಕ ಆಸ್ತಿಗಳನ್ನು ಫ್ರೀಝ್ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಜೂನ್ 12ರಂದು ಯುಕೆಯ ವಿಂಡ್ಸರ್‌ನಲ್ಲಿ ಪೋಲೋ ಆಡುವಾಗ ಹೃದಯಾಘಾತದಿಂದ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ತಮ್ಮ 53ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಕರಿಷ್ಮಾ ಕಪೂರ್, ಸಂಜಯ್ ಅವರ ಎರಡನೇ ಪತ್ನಿ. 13 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿ, 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು.