ನಟ ದರ್ಶನ್​ಗೆ ಪರಪ್ಪನ ಅಗ್ರಹಾರವೇ ಫಿಕ್ಸ್: ಜೈಲಿನ ಕೈಪಿಡಿಯಂತೆ ಸೌಲಭ್ಯ ನೀಡಲು ಕೋರ್ಟ್​ ಆದೇಶ

ನಟ ದರ್ಶನ್​ಗೆ ಪರಪ್ಪನ ಅಗ್ರಹಾರವೇ ಫಿಕ್ಸ್: ಜೈಲಿನ ಕೈಪಿಡಿಯಂತೆ ಸೌಲಭ್ಯ ನೀಡಲು ಕೋರ್ಟ್​ ಆದೇಶ
By Published : September 9, 2025 at 4:42 PM IST | Updated : September 9, 2025 at 4:59 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ನಿರಾಕರಿಸಿದೆ. ಹೆಚ್ಚುವರಿ ಹಾಸಿಗೆ - ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲಿನ ಕೈಪಿಡಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ವರ್ಗಾಯಿಸಬೇಕೆಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರ್ಶನ್ ಪರ ವಕೀಲ ಸುನೀಲ್ ಪ್ರಬಲವಾಗಿ ವಾದ ಮಂಡಿಸಿದ್ದರು. ಇದೇ ವೇಳೆ, ಹೆಚ್ಚುವರಿ ಹಾಸಿಗೆ - ದಿಂಬು ಕಲ್ಪಿಸುವಂತೆ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು.

ನಿಯಮ ಉಲ್ಲಂಘಿಸಿದರೆ ವರ್ಗ ಮಾಡಿ: ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾವಣೆಗೆ ಸಕಾರಣವಿಲ್ಲ. ಜೈಲು ನಿಯಮ ಉಲ್ಲಂಘನೆ ಕಂಡು ಬಂದರೆ ಜೈಲಿನ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು. ಜೈಲಿನ ಕೈಪಿಡಿ ಅನುಸರಿಸಬೇಕು ಎಂದು 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.

ಹೆಚ್ಚುವರಿ ಹಾಸಿಗೆ - ದಿಂಬು ನೀಡುವಂತೆ ಅರ್ಜಿ ವಿಚಾರಣೆ ಸಂಬಂಧ ಇಂದೇ ನ್ಯಾಯಾಲಯವು ಆದೇಶ ಪ್ರಕಟಿಸಿತು. ಜೈಲಿನ ನಿಯಮದ ಅನುಸಾರ ಹಾಸಿಗೆ - ದಿಂಬು ನೀಡಬೇಕು. ಜೈಲಿನ ಹೊರಗೆ ಓಡಾಡಲು ಅನುವು ಮಾಡಿಕೊಡಬೇಕು. ಆರೋಗ್ಯ ಸಮಸ್ಯೆಯಾದರೆ ಜೈಲಿನ ವೈದ್ಯರನ್ನ ಭೇಟಿ ಮಾಡಬಹುದು. ಸ್ವಂತ ಹಣದಿಂದ ಕಾರಾಗೃಹದಲ್ಲಿರುವ ಅಂಗಡಿಗಳಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸಲು ದರ್ಶನ್​ಗೆ ಅನುಮತಿ ನೀಡಿ ಎಂದು ಆದೇಶಿಸಿತು.

ಕೈದಿಯ ಹಕ್ಕುಗಳನ್ನ ಗೌರವಿಸಬೇಕು. ಜೈಲಿನ ಕೈಪಿಡಿಯಂತೆ ನಿಯಮಗಳನ್ನು ಅನುಸರಿಸಬೇಕು. ಕನಿಷ್ಠ ಮೂಲಸೌಲಭ್ಯ ಒದಗಿಸಬೇಕು. ವಿಚಾರಣಾಧೀನ ಕೈದಿಗಳಿಗೆ ನೀಡಲಾಗುವ ಸೌಲಭ್ಯ ಕಲ್ಪಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿತು.

ವಿಷ ಕೊಡಿ ಎಂದ ದರ್ಶನ್: ಇದಕ್ಕೂ ಮುನ್ನ ಇಂದು ಬೆಳಗ್ಗೆ ನ್ಯಾಯಾಲಯದ ಮುಂದೆ ದರ್ಶನ್ ಅವ​​ರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಅಳಲು ತೋಡಿಕೊಂಡ ನಟ, ನಾನು ಬಿಸಿಲು ಕಾಣದೇ ಒಂದು ತಿಂಗಳಾಯಿತು. ನನ್ನ ಕೈಗೆ ಫಂಗಸ್ ಬಂದಿದೆ. ನನಗೊಬ್ಬನಿಗೆ ಮಾತ್ರ ವಿಷ ನೀಡುವಂತೆ ಆದೇಶಿಸಬೇಕು ಎಂದು ಅಲವತ್ತುಕೊಂಡರು. ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಈ ರೀತಿಯಾಗಿ ನೀವು ಹೇಳುವಂತಿಲ್ಲ. ಜೈಲಾಧಿಕಾರಿಗಳಿಗೆ ಏನು ಸೂಚನೆ ನೀಡಬೇಕು ಎಂಬುದನ್ನು ನಾವು ತೀರ್ಮಾನಿಸುತ್ತೇವೆ ಎಂದು ಹೇಳಿ ಮಧ್ಯಾಹ್ನಕ್ಕೆ ಆದೇಶವನ್ನು ಮುಂದೂಡಿದ್ದರು.

📚 Related News