ಶೀರ್ಷಿಕೆಯಿಂದ ಗಮನ ಸೆಳೆಯುತ್ತಿದೆ 'ದಿಂಸೋಲ್': ಕರಾವಳಿ ಸಂಸ್ಕೃತಿಯ ಸೊಗಡು ಸಾರುವ ಮತ್ತೊಂದು ಸಿನಿಮಾ

ಶೀರ್ಷಿಕೆಯಿಂದ ಗಮನ ಸೆಳೆಯುತ್ತಿದೆ 'ದಿಂಸೋಲ್': ಕರಾವಳಿ ಸಂಸ್ಕೃತಿಯ ಸೊಗಡು ಸಾರುವ ಮತ್ತೊಂದು ಸಿನಿಮಾ
By Published : September 10, 2025 at 3:31 PM IST

'ದಿಂಸೋಲ್'. ವಿಭಿನ್ನ ಶೀರ್ಷಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಭರ್ಜರಿ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಮೋಷನ್ ಪೋಸ್ಟರ್ ಅನಾವರಣಗೊಂಡಿದ್ದು, ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕರಾವಳಿ ಸಂಸ್ಕೃತಿಯ ಸೊಗಡು ಸಾರುವ ಸಿನಿಮಾಗಳ ಲಿಸ್ಟ್​ಗೆ 'ದಿಂಸೋಲ್': ನಾಗೇಂದ್ರ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದಿಂಸೋಲ್' ಕರಾವಳಿ ಸಂಸ್ಕೃತಿ ಬಗ್ಗೆ ಇರುವ ಸಿನಿಮಾವಾಗಿದೆ. ಈಗಾಗಲೇ ಕರಾವಳಿ ಸಂಸ್ಕೃತಿಯ ಸೊಗಡು ಸಾರುವ ಅನೇಕ ಸಿನಿಮಾಗಳು ಮೂಡಿ ಬಂದಿದೆ. ಇದೀಗ ದಿಂಸೋಲ್ ಕೂಡಾ ಈ ಲಿಸ್ಟ್‌ಗೆ ಸೇರಿಕೊಂಡಿದೆ.

ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ: ರಥಾಕಿರಣ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕ ನಟಿಯಾಗಿ ಶಿವಾನಿ ರೈ ನಟಿಸುತ್ತಿದ್ದಾರೆ. ಈ ಮೊದಲು ಅಭಿರಾಮಚಂದ್ರ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ದಿಂಸೋಲ್ ಮೂಲಕ ಒಂದಾಗಿ ತೆರೆಮೇಲೆ ಬರುತ್ತಿದ್ದಾರೆ. ಇನ್ನೂ, ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು, ಮಾನಸಿ ಸುಧೀರ್, ಕಿರುತೆರೆ ನಟಿ ಅಮೃತಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ದಿಂಸೋಲ್ ಎಂದರೇನು? ದಿಂಸೋಲ್ ಎಂದರೆ ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಅಚರಣೆಯಾಗಿದೆ. ಕರಾವಳಿಯ ಎಲ್ಲ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ದೃಶ್ಯ ರೂಪಕ್ಕೆ ತರುತ್ತಿದ್ದಾರೆ ನಿರ್ದೇಶಕ ನಾಗೇಂದ್ರ ಗಾಣಿಗ. ಮೊದಲ ಪೋಸ್ಟರ್ ಕೂಡಾ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಇದೀಗ ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಈ ಸಿನಿಮಾ ದೇವರ ಬಗೆಗಿನ ಕಥೆಯನ್ನೊಳಗೊಂಡಿದೆ ಎನ್ನುವುದು ಈ ಪೋಸ್ಟರ್ ನೋಡಿದ್ರೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಕರಾವಳಿ ಸುತ್ತ - ಮುತ್ತ ಚಿತ್ರೀಕರಣ: ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರ ತಂಡ ಶೀಘ್ರವೇ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿ ಸುತ್ತ - ಮುತ್ತ ಸಿನಿಮಾದ ಚಿತ್ರೀಕರಣ ನಡೆಸಲು ತಂಡ ಪ್ಲ್ಯಾನ್​​ ಹಾಕಿಕೊಂಡಿದೆ. ಈ ಚಿತ್ರಕ್ಕೆ ಸಚಿನ್ ವಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಕ್ಯಾಮರಾ ವರ್ಕ್ ಇರಲಿದೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.

ಚಿತ್ರವೊಂದರ ಶೀರ್ಷಿಕೆ ಪ್ರೇಕ್ಷಕರಿಗೆ ಆಮಂತ್ರಣವಿದ್ದಂತೆ. ಅದರಂತೆ ಈ 'ದಿಂಸೋಲ್' ಕೂಡಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರವೇ ಹಂಚಿಕೊಳ್ಳಲಿದೆ.

📚 Related News