ಪಂಚಕುಲ (ಹರಿಯಾಣ): ಸಾರಿಗೆ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ದೇಶರಾಜ್ ಚೌಧರಿ ಎಂಬುವರ ಮೂವರು ಮಕ್ಕಳು ದೇಶ ಸೇವೆಯಲ್ಲಿ ತೊಡಗಿದ್ದಾರೆ. ಹೌದು, ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿರುವ ದೇಶರಾಜ್ ಚೌಧರಿ ಅವರ ಮಗಳು ನ್ಯಾಯಾಧೀಶೆಯಾಗಿದ್ದಾರೆ. ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ಐಆರ್ಎಸ್ ಅಧಿಕಾರಿ ಮತ್ತು ಮತ್ತೊಬ್ಬರು ಇತ್ತೀಚೆಗೆ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
ಈ ಮೂಲಕ ಒಂದೇ ಕುಟುಂಬದ ಮೂವರು ಉನ್ನತ ಹುದ್ದೆ ಪಡೆದಿರುವುದು ಚಂಡೀಗಢಕ್ಕೆ ಹೊಂದಿಕೊಂಡಿರುವ ಮೊಹಾಲಿ ಜಿಲ್ಲೆಯ ಜಯಂತಿ ಮಜ್ರಿ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ. ಪಂಚಕುಲ ಆರ್‌ಟಿಒದ ಡಿಸ್ಟ್ರಿಕ್ಟ್ ಮೋಟಾರ್ ವೆಹಿಕಲ್ ಆಫೀಸರ್ ದೇಶರಾಜ್ ಚೌಧರಿ ಅವರು ತಮ್ಮ ಮೂವರು ಮಕ್ಕಳು ಉನ್ನತ ಹುದ್ದೆ ಅಲಂಕರಿಸಿರುವುದಕ್ಕೆ ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡರು. ನನ್ನ ಮೂವರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸ್ಪಷ್ಟ ಗುರಿ ಇತ್ತು, ಅದಕ್ಕಾಗಿ ಅವರು ತಯಾರಿ ನಡೆಸುತ್ತಿದ್ದರು ಎಂದು ಹೇಳಿದರು.

2023ರಲ್ಲಿ ನ್ಯಾಯಾಧೀಶೆಯಾದ ಮಗಳು: " ಚಿಕ್ಕಂದಿನಿಂದ ಪ್ರತಿಭಾನ್ವಿತಳಾಗಿದ್ದ ನನ್ನ ಮಗಳು ಕಾಮಿನಿ ಚೌಧರಿ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಪಡೆದರು. ಇದಾದ ನಂತರ, ಕಾಮಿನಿ ಪಂಜಾಬ್ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನ್ಯಾಯಾಧೀಶೆಯಾಗಿದ್ದಾರೆ. ಈ ಸಿಹಿ ಸುದ್ದಿ ತಿಳಿದ ಬಳಿಕ ನಮ್ಮ ಗ್ರಾಮದಲ್ಲಿ ಡ್ರಮ್ಸ್ ಮತ್ತು ಬ್ಯಾಂಡ್‌ಗಳನ್ನು ಬಾರಿಸಿ ಸಂಭ್ರಮಿಸಲಾಯಿತು. ಇಡೀ ಗ್ರಾಮ ನನ್ನ ಕುಟುಂಬವನ್ನು ಅಭಿನಂದಿಸಿತು ಎಂದು ಹರ್ಷ ವ್ಯಕ್ತಪಡಿಸಿದರು.
ಸದ್ಯ ಕಾಮಿನಿ ಚೌಧರಿ ರೋಪರ್ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಗ ಐಆರ್ಎಸ್ ಅಧಿಕಾರಿ: ದೇಶರಾಜ್ ಚೌಧರಿ ಅವರ ಮಗಳು ನ್ಯಾಯಾಧೀಶರಾಗಿ ನೇಮಕಗೊಂಡ ಮರು ವರ್ಷವೇ ಅಂದರೆ 2024ರಲ್ಲಿ ಹಿರಿಯ ಮಗ ಕಮಲ್ ಚೌಧರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಆರ್ಎಸ್ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.

ಈ ಕುರಿತು ದೇಶರಾಜ್ ಅವರು ಮಾತನಾಡಿ, "ಕಮಲ್ ತಮಿಳುನಾಡಿನ ವೆಲ್ಲೂರು ವಿಐಟಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ಇದಾದ ನಂತರ ಯುಪಿಎಸ್ಸಿಗೆ ತಯಾರಿ ನಡೆಸಿದರು. ಕಮಲ್ 2023ರಲ್ಲಿ ಹರಿಯಾಣ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದರು. ಬಳಿಕ ಸುಮಾರು ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದರು. ಬಳಿಕ ಕಮಲ್ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಯುಪಿಎಸ್ಸಿಗೆ ತಯಾರಿ ಮುಂದುವರಿಸಿದರು. 2024ರಲ್ಲಿ ಕಮಲ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಐಆರ್ಎಸ್ ಅಧಿಕಾರಿಯಾದರು. ಸದ್ಯ ಕಮಲ್ ನಾಗ್ಪುರದಲ್ಲಿ ತರಬೇತಿ ಪಡೆಯುತ್ತಿದ್ದಾರೆ" ಎಂದು ತಿಳಿಸಿದರು.
ಲೆಫ್ಟಿನೆಂಟ್ ಆಗಿ ಕಿರಿಯ ಮಗ ಆಯ್ಕೆ: "ಕಿರಿಯ ಮಗ ಧರ್ಮಾಂಶು ಚಂಡೀಗಢದ ಎಸ್‌ಡಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಧರ್ಮಾಂಶು ಗಣರಾಜ್ಯೋತ್ಸವದ ಪರೇಡ್‌ನಲ್ಲಿಯೂ ಪಾಲ್ಗೊಂಡಿದ್ದ ಮತ್ತು ಕಝಾಕಿಸ್ತಾನ್‌ನಲ್ಲಿ ಯೂಥ್ ಎಕ್ಸ್ಚೇಂಜ್ ಪ್ರೋಗ್ರಾಮ್ (YEP) ನಲ್ಲಿ ಭಾಗವಹಿಸಿದ್ದ" ಎಂದರು.
ಆ ಬಳಿಕ ಧರ್ಮಾಂಶು, ಸೇನೆಗೆ ಸೇರಲು ಬಯಸಿರುವುದಾಗಿ ತಂದೆಗೆ ಹೇಳಿದರು. ತನ್ನ ದೃಢನಿಶ್ಚಯದಂತೆ ಧರ್ಮಾಂಶು ಪ್ರಯಾಗರಾಜ್‌ನಿಂದ ಸರ್ವಿಸ್ ಸೆಲೆಕ್ಷನ್ ಬೋರ್ಡ್ (SSB) ಪರೀಕ್ಷೆ ಬರೆದು ಉತ್ತೀರ್ಣರಾದರು. ಶನಿವಾರ, ಧರ್ಮಾಂಶು ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿ (OTA) ಯಿಂದ ಪಾಸಿಂಗ್ ಔಟ್ ಪರೇಡ್ ಮೂಲಕ ಸಶಸ್ತ್ರ ರೆಜಿಮೆಂಟ್ಗೆ ಸೇರ್ಪಡೆಯಾದರು.
ಈ ಮೂಲಕ ನನ್ನ ಮೂವರು ಮಕ್ಕಳು ದೇಶ ಸೇವೆಯಲ್ಲಿ ಮುಂದುವರಿಯುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಮಕ್ಕಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ದೇಶರಾಜ್ ಚೌಧರಿ ಸಂತಸ ವ್ಯಕ್ತಪಡಿಸಿದ್ದಾರೆ.
ಕುಟುಂಬದಲ್ಲಿ ದೇಶರಾಜ್ ಚೌಧರಿ ಅವರು ಮಾತ್ರ ಸಂಪಾದನೆ ಮಾಡುತ್ತಿದ್ದರು. ಅವರು ತಮ್ಮ ಮೂವರೂ ಮಕ್ಕಳಿಗೆ ಹತ್ತಿರದ ಸಾರಂಗಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯವರೆಗೆ ಶಿಕ್ಷಣ ಕೊಡಿಸಿದರು. ಆ ಸಮಯದಲ್ಲಿ, ಕೆಲಸದ ಜೊತೆಗೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯು ಅವರ ಮೇಲಿತ್ತು. ದೇಶರಾಜ್ ಅವರ ಪತ್ನಿ ಗೃಹಿಣಿಯಾಗಿದ್ದು, ಅವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು ಮತ್ತು ಪ್ರತಿ ಹಂತದಲ್ಲೂ ತಮ್ಮ ಪತಿಗೆ ಬೆಂಬಲವಾಗಿ ನಿಂತು ಮಕ್ಕಳ ಜೀವ ರೂಪಿಸಿದ್ದಾರೆ.
ಗ್ರಾಮದಲ್ಲಿ ಇಂಟರ್ನೆಟ್ ಮತ್ತು ಸಾರಿಗೆ ಸೌಲಭ್ಯ ಇರಲಿಲ್ಲ: ದೇಶರಾಜ್ ಅವರ ಜಯಂತಿ ಮಜ್ರಿ ಗ್ರಾಮ ಅರಣ್ಯ ಪ್ರದೇಶದಲ್ಲಿದೆ. ಇದರಿಂದಾಗಿ, ಅಲ್ಲಿ ಇಂಟರ್ನೆಟ್ ಸೇವೆ ಮತ್ತು ಸಾರಿಗೆ ಸೌಲಭ್ಯವಿರಲಿಲ್ಲ, ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ಸಮಸ್ಯೆ ಎದುರಿಸಿದ್ದರು. ಆದರೆ, ಈಗ ಮೂವರು ಮಕ್ಕಳು ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿರುವುದು ಇತರರಿಗೆ ಮಾದರಿಯಾಗಿದೆ.