ಮೈಸೂರು: ಈ ಬಾರಿಯ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಚಾಮುಂಡಿ ಬೆಟ್ಟ ಚಲೋ ನಡೆಸಲು ಮುಂದಾದ ಬಿಜೆಪಿ ಶಾಸಕ ಶ್ರೀವತ್ಸ ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಪೊಲೀಸರು ಬಂಧಿಸಿದರು.
ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮವನ್ನು ಹಿಂದೂ ಜಾಗರಣ ವೇದಿಕೆ ನಗರದ ಕುರುಬಾರಹಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಪೂರ್ವ ನಿಗದಿಯಂತೆ ಬಿಜೆಪಿಯ ಶಾಸಕ ಶ್ರೀವತ್ಸ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಬೆಳಗ್ಗೆಯೇ ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಜಮಾಯಿಸುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಇದೇ ವೇಳೆ ಶಾಂತಿಗಾಗಿ ಚಾಮುಂಡಿ ಬೆಟ್ಟ ನಡಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನೂ ಸಹ ಪೊಲೀಸರು ಬಂಧಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರದ ಸಶಸ್ತ್ರ ಪಡೆ, ಕಮಾಂಡೋ ಪಡೆ, ಸಿವಿಲ್ ಪೊಲೀಸ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಬಾನು ಮುಷ್ತಾಕ್ ಪರ-ವಿರೋಧ ಪಾದಯಾತ್ರೆಗೆ ಕಡಿವಾಣ: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಪರ ಹಾಗೂ ವಿರೋಧ ವ್ಯಕ್ತಪಡಿಸಿ, ಇಂದು (ಸೆ.9) ಎರಡು ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಿತ್ತು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಮಂಗಳವಾರ ಬೆಳಗ್ಗೆ 7.30ಕ್ಕೆ ಕುರುಬಾರಹಳ್ಳಿ ವೃತ್ತದಿಂದ ಹಿಂದೂ ಜಾಗರಣಾ ವೇದಿಕೆಯು ಚಾಮುಂಡಿ ಬೆಟ್ಟ ಚಲೋ ಮತ್ತು ಮುಷ್ತಾಕ್ ಅವರನ್ನು ಬೆಂಬಲಿಸಿ ದಲಿತ ಮಹಾಸಭಾ ಕೂಡ ಇಂದು ಅದೇ ಸಮಯಕ್ಕೆ, ಅದೇ ವೃತ್ತದಲ್ಲಿ, ಅದೇ ಹೆಸರಿನ ಪಾದಯಾತ್ರೆ ಮಾಡಲು ನಿರ್ಧರಿಸಿದ್ದವು. ಮಂಗಳವಾರ ಬೆಳಗ್ಗೆ ಎರಡೂ ಸಂಘಟನೆಗಳು ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟ ಚಲೋ ಮೆರವಣಿಗೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರು.
ದಸರಾ ಮಹೋತ್ಸವ ವೇಳೆಯಲ್ಲಿ ಈ ಎರಡೂ ಪರ-ವಿರೋಧ ಮೆರವಣಿಗೆಯಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬುದನ್ನು ಮನಗಂಡು ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಎರಡೂ ಸಂಘಟನೆಗಳು ಮಂಗಳವಾರ ಬೆಳಗ್ಗೆ ಚಾಮುಂಡಿ ಬೆಟ್ಟ ಚಲೋ ನಡೆಸಲು ಅನುಮತಿ ಕೇಳಿದ್ದವು. ಆದರೆ, ಕೆಲವು ಕಾರಣಾಂತರಗಳಿಂದ ಅನುಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದರು.