ನವದೆಹಲಿ: ಜಾಗತಿಕ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 2025ರಲ್ಲಿ ಶೇಕಡಾ 2.4ಕ್ಕೆ ಫಿಚ್ ರೇಟಿಂಗ್ಸ್ ಪರಿಷ್ಕರಣೆ ಮಾಡಲಾಗಿದೆ. ಇದು ಜೂನ್ ಮುನ್ನೋಟಕ್ಕಿಂತ 0.2 ಶೇಕಡಾ ಅಂಕಗಳ ಹೆಚ್ಚಳವಾಗಿದೆ ಎಂದು ಫಿಚ್ ರಿಪೋರ್ಟ್ ನಲ್ಲಿ ತೋರಿಸಲಾಗಿದೆ. ಆದಾಗ್ಯೂ ಕಳೆದ ವರ್ಷ ದಾಖಲಾದ ಶೇಕಡಾ 2.9 ಬೆಳವಣಿಗೆಗೆ ಹೋಲಿಸಿದರೆ ವಿಶ್ವ ಆರ್ಥಿಕತೆಯು ಇನ್ನೂ ನಿಧಾನಗತಿಯಲ್ಲೇ ಮುಂದುವರೆಯುವ ಸಾಧ್ಯತೆ ಇದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ಮತ್ತೊಂದು ಕಡೆ ಟ್ಯಾರಿಫ್ ವಾರ್ ಘೋಷಣೆ ಮಾಡಿರುವ ಅಮೆರಿಕ ಈ ಬಾರಿಯೂ ತನ್ನ ಜಿಡಿಪಿ ಬೆಳವಣಿಗೆಯಲ್ಲಿ ಹಿಂದುಳಿದಿರುವ ಸ್ಪಷ್ಟ ಲಕ್ಷಣಗಳನ್ನು ತೋರಿಸುತ್ತಿದೆ. ಜಾಗತಿಕ ಬೆಳವಣಿಗೆ ಪ್ರಸ್ತುತ 2025ನೇ ಸಾಲಿನಲ್ಲಿ ಶೇಕಡಾ 2.4ರಷ್ಟು ಬೆಳವಣಿಗೆ ಕಾಣಲಿದೆ ಎಂದು ಊಹಿಸಲಾಗಿದೆ. ಕಳೆದ ತ್ರೈಮಾಸಿಕಕ್ಕಿಂತ ಜೂನ್‌ನಿಂದ 0.2 ಪಿಪಿ ಹೆಚ್ಚಾಗಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಅಮೆರಿಕ ನಿಧಾನಗತಿಯಲ್ಲಿ ಮುಂದುವರೆಯುತ್ತಿರುವ ಬಗ್ಗೆ ಫಿಚ್ ದತ್ತಾಂಶಗಳು ತೋರಿಸುತ್ತಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಆರ್ಥಿಕತೆಯು ವಾರ್ಷಿಕ ಸರಾಸರಿ 1.6 ಶೇಕಡಾದಲ್ಲಿ ಬೆಳೆಯುತ್ತದೆ ಎಂದು ಅದು ನಿರೀಕ್ಷಿಸುತ್ತಿದೆ.
ಇದು ಪ್ರವೃತ್ತಿಗಿಂತ ಬಹಳ ಕಡಿಮೆಯಾಗಿದೆ. ಆದರೂ ವಿಸ್ತರಿಸುತ್ತಿರುವ ಹಣಕಾಸಿನ ಕೊರತೆಯು 2026 ರಲ್ಲಿ ಸ್ವಲ್ಪ ಬೆಂಬಲವನ್ನು ನೀಡಬಹುದು ಎಂದು ಹೇಳಲಾಗಿದೆ. ಇತ್ತೀಚಿನ ಜಾಗತಿಕ ಆರ್ಥಿಕ ಔಟ್‌ಲುಕ್ ವರದಿಯು ಜಾಗತಿಕ ಬೆಳವಣಿಗೆಯು ಪ್ರವೃತ್ತಿಗಿಂತ ಕೆಳಗಿದೆ ಮತ್ತು ನಿಧಾನಗತಿಯು ಮುಂದುವರೆದಿದೆ ಎಂಬುದನ್ನು ಹೇಳಲಾಗಿದೆ.
2025ರ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾದ ದತ್ತಾಂಶವು ಮೇಲ್ಮುಖವಾದ ಪರಿಷ್ಕರಣೆಯನ್ನು ಬೆಂಬಲಿಸಿದೆ. ಅಮೆರಿಕದ ಆರ್ಥಿಕತೆಯು ಈಗ ಕಠಿಣ ದತ್ತಾಂಶದಲ್ಲಿ ನಿಧಾನಗತಿ ತೋರಿಸುತ್ತಿದೆ ಎಂದು ವರದಿಯು ಹೈಲೈಟ್ ಮಾಡಿದೆ. ಗ್ರಾಹಕ ಖರ್ಚು ಈಗಾಗಲೇ ನಿಧಾನವಾಗಿದೆ. ಮುಖ್ಯವಾಗಿ ಹೆಚ್ಚಿನ ಹಣದುಬ್ಬರದಿಂದಾಗಿ ನೈಜ ವೇತನ ಬೆಳವಣಿಗೆ ಕಡಿಮೆಯಾಗಿದೆ. ಕಾರ್ಮಿಕ ಬಲ ವಿಸ್ತರಣೆಯನ್ನು ನಿರ್ಬಂಧಿಸಿರುವ ಬಿಗಿಯಾದ ವಲಸೆ ನೀತಿಗಳಿಂದಾಗಿ ಉದ್ಯೋಗ ಬೆಳವಣಿಗೆಯು ತೀವ್ರವಾಗಿ ಕುಸಿತ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ಸರ್ಕಾರ ಇತರ ದೇಶಗಳ ಆಮದುಗಳ ಮೇಲೆ ಭಾರಿ ಸುಂಕ ಏರಿಕೆ ಮಾಡಿದೆ. ಪ್ರಸ್ತುತ ಅದರ ಪರಿಣಾಮ ಸಾಧಾರಣವಾಗಿ ಕಂಡು ಬಂದಿದೆ. ಆದರೆ, ಈ ವರ್ಷದ ಕೊನೆಯಲ್ಲಿ ಗ್ರಾಹಕ ಬೆಲೆಗಳಿಗೆ ಪಾಸ್ - ಥ್ರೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಹೆಚ್ಚಿನ ಹಣದುಬ್ಬರವು ಮನೆಯ ಖರ್ಚಿನ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಇತರ ಪ್ರಮುಖ ಆರ್ಥಿಕತೆಗಳ ಬಗ್ಗೆ ಪ್ರಸ್ತಾಪಿಸಿರುವ ವರದಿಯು ಚೀನಾದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 4.2 ರಿಂದ ಶೇಕಡಾ 4.7 ಕ್ಕೆ ಪರಿಷ್ಕರಿಸಿದೆ. ಇದು ಹಿಂದೆ ಅಂದಾಜು ಮಾಡಿದ್ದಕ್ಕಿಂತ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸುತ್ತಿದೆ. ಅದೇ ರೀತಿ, ಯೂರೋಜೋನ್ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 0.8 ರಿಂದ ಶೇಕಡಾ 1.1 ಕ್ಕೆ ಹೆಚ್ಚಿಸಲಾಗಿದೆ.
ಆದಾಗ್ಯೂ ಇತ್ತೀಚಿನ ಕೆಲವು ಸಕಾರಾತ್ಮಕ ಆಶ್ಚರ್ಯಗಳು ಎಂದರೆ ಅಮೆರಿಕದ ಸುಂಕ ಹೆಚ್ಚಳಕ್ಕೆ ಮುಂಚಿತವಾಗಿ ನಡೆಸುವ ಖರೀದಿಗಳಿಗೆ ಸಂಬಂಧಿಸಿವೆ ಎಂದು ಫಿಚ್ ಎಚ್ಚರಿಸಿದೆ. ಇನ್ನು 2026 ರ ಜಾಗತಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 0.1 ರಷ್ಟು ಹೆಚ್ಚಿಸಿ ಶೇಕಡಾ 2.3 ಕ್ಕೆ ತಲುಪಿದೆ ಎಂದು ಹೇಳಲಾಗಿದೆ. ಇದು ಅಲ್ಪ ಸುಧಾರಣೆಯನ್ನು ಸೂಚಿಸುತ್ತಿದ್ದರೂ, ವಿಶ್ವ ಆರ್ಥಿಕತೆಯು ವ್ಯಾಪಾರ ಉದ್ವಿಗ್ನತೆ, ಹೆಚ್ಚಿನ ಹಣದುಬ್ಬರ ಮತ್ತು ಅಮೆರಿಕದ ಸುಂಕ ನೀತಿ ಹೆಚ್ಚಿನ ಒತ್ತಡವನ್ನು ಸೃಷ್ಟಿ ಮಾಡಿರುವುದನ್ನು ತೋರಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನು ಓದಿ: