ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಪೊಡವಿಗೊಡೆಯನ ನಾಡಲ್ಲಿ ಸಿದ್ಧತೆ, ಈ ಬಾರಿಯ ವಿಶೇಷತೆ ಏನು?

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಪೊಡವಿಗೊಡೆಯನ ನಾಡಲ್ಲಿ ಸಿದ್ಧತೆ, ಈ ಬಾರಿಯ ವಿಶೇಷತೆ ಏನು?
By Published : September 10, 2025 at 5:57 PM IST

ಉಡುಪಿ: ಶ್ರೀಕೃಷ್ಣ ಉತ್ಸವಪ್ರಿಯ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಜನ್ಮಾಷ್ಟಮಿ ಸಂಭ್ರಮಕ್ಕೆ ಕೃಷ್ಣನಗರಿ ಸಿದ್ಧಗೊಳ್ಳುತ್ತಿದೆ. ಶ್ರೀಕೃಷ್ಣನ ಬಾಲ ಲೀಲೆಗಳನ್ನು ತೋರಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆ. ಈ ತಿಂಗಳ 14 ಮತ್ತು 15 ರಂದು ಉತ್ಸವ ನಡೆಯಲಿದೆ. ಸದ್ಯ ಮಠದಲ್ಲಿ ಇದಕ್ಕೆ ತಯಾರಿ ಭರದಿಂದ ಸಾಗುತ್ತಿವೆ.

ಉಡುಪಿಯಲ್ಲಿ ಅಷ್ಟಮಿಗೆ ವಿಶೇಷ ಮಹತ್ವ. ಶ್ರೀಕೃಷ್ಣ ಮಠದ ಪರ್ಯಾಯದ ನಂತರ ಅಷ್ಟಮಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಎರಡು ದಿನಗಳ ಕಾಲ ನಡೆಯುವ ಅಷ್ಟಮಿಗೆ ಬೇರೆ ಬೇರೆ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ತಿಂಗಳ 14 ಮತ್ತು 15 ರಂದು ಅಷ್ಟಮಿ ನಡೆಯಲಿದೆ. ಈ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮೀಣ ಕ್ರೀಡೆಗಳನ್ನು ಮಠದಲ್ಲಿ ಆಯೋಜಿಸಲಾಗಿತ್ತು.

ಅಷ್ಟಮಠಗಳ ರಥ ಬೀದಿಯಲ್ಲಿ ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಎಲ್ಲ ಸೇರಿ ಗ್ರಾಮೀಣ ಕ್ರೀಡೆಯಲ್ಲಿ ಭಾಗಿಯಾದರು. ಲಗೋರಿ, ಕಬಡ್ಡಿ, ಓಟ ಸೇರಿದಂತೆ ವಿವಿಧ ಗ್ರಾಮೀಣ ಆಟಗಳನ್ನು ಆಡಿ ಜನ ಸಂಭ್ರಮಿಸಿದರು. ಈ ಗ್ರಾಮೀಣ ಕ್ರೀಡೋತ್ಸವ ಕೃಷ್ಣ ಭಕ್ತರಿಗೆ ಹೊಸ ಹುರುಪು ನೀಡಿತು. ನೋಡುಗರಿಗೆ ಕಡಗೋಲು ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವಂತಿತ್ತು.

ಇನ್ನು ಅಷ್ಟಮಿ ದಿನ ವಿವಿಧ ಆಚರಣೆಗಳು ಮತ್ತು ಮರುದಿನ‌ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ವಿಟ್ಲಪಿಂಡಿ ಉತ್ಸವದಂದು ಶ್ರೀಕೃಷ್ಣನ ವಿವಿಧ ಬಾಲಲೀಲೆಗಳು ಮಠದ ರಥಬೀದಿಯಲ್ಲಿ ಅನಾವರಣಗೊಳ್ಳಲಿದೆ. ಲಡ್ಡು ಉತ್ಸವ, ಗೊಲ್ಲರ ಮೊಸರು ಕುಡಿಕೆ, ಮುದ್ದು ಕೃಷ್ಣವೇಷಗಳು ಉತ್ಸವಕ್ಕೆ ವಿಶೇಷ ಕಳೆ ನೀಡಲಿವೆ.

ಅಷ್ಟಮಿಯಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳದ್ದೇ ಒಂದು ತೂಕವಾದರೆ, ಮಠದೊಳಗೆ ನಡೆಯುವ ವಿವಿಧ ಪೂಜೆ ಪುನಸ್ಕಾರಗಳದ್ದೇ ಇನ್ನೊಂದು ತೂಕ. ಉತ್ಸವದಂದು ಭಕ್ತರಿಗೆಂದೇ ಸಾವಿರಾರು ಉಂಡೆ ಚಕ್ಕುಲಿಯಂತಹ ಪ್ರಸಾದ ತಯಾರಾಗಲಿದೆ. ಅಷ್ಟಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಪ್ರಸಾದ ಹಂಚಲಿದ್ದಾರೆ.

ಪುತ್ತಿಗೆ ಮಠಾಧೀಶ ಸುಗುಣೇಂದ್ರ ಶ್ರೀಗಳು ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಶಾಸ್ತ್ರೀಯವಾದಂತ ಆಚರಣೆ. ಇದು ಹಬ್ಬ ಮತ್ತು ಸಂಭ್ರಮ ಮಾತ್ರವಲ್ಲ ಇದಕ್ಕೆ ಧರ್ಮಶಾಸ್ತ್ರದಲ್ಲಿ ವಿಶೇಷವಾದ ಮಹತ್ವವಿದೆ. ಇದು ದೊಡ್ಡ ವ್ರತ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವಿಶೇಷ ವ್ರತಗಳಲ್ಲೂಂದು ಎಂದು ಹೇಳಿದರು.

ಒಟ್ಟಾರೆ ಪೊಡವಿಗೊಡೆಯ ಕೃಷ್ಣನ ಜನ್ಮದಿನ ಕೃಷ್ಣಮಠದಲ್ಲಿ ವಿಶೇಷವಾಗಿ ಆಚರಣೆಗೊಳ್ಳಲಿದ್ದು, ಭಕ್ತರು ಕಾತರದಿಂದ ಇದಕ್ಕಾಗಿ ಕಾಯುತ್ತಿದ್ದಾರೆ.

📚 Related News