ನೇಪಾಳ ಹಿಂಸಾಚಾರ: ಮಧ್ಯಪ್ರವೇಶಿಸಿದ ಸೇನೆ, ಲೂಟಿಕೋರರ ಬಂಧನ, ದೇಶಾದ್ಯಂತ ಕರ್ಫ್ಯೂ ಜಾರಿ

ನೇಪಾಳ ಹಿಂಸಾಚಾರ: ಮಧ್ಯಪ್ರವೇಶಿಸಿದ ಸೇನೆ, ಲೂಟಿಕೋರರ ಬಂಧನ, ದೇಶಾದ್ಯಂತ ಕರ್ಫ್ಯೂ ಜಾರಿ
By Published : September 10, 2025 at 12:05 PM IST | Updated : September 10, 2025 at 1:17 PM IST

ಕಠ್ಮಂಡು: ನೇಪಾಳ ಹಿಂಸಾಚಾರ ತೀವ್ರ ಸ್ವರೂಪ ಪಡೆಯುತ್ತಿದೆ. 10 ಸಾವಿರಕ್ಕೂ ಹೆಚ್ಚು ಯುವ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹಾಗು ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆ ಮಧ್ಯಪ್ರವೇಶ ಮಾಡಿದ್ದು, ಭದ್ರತಾ ದೃಷ್ಟಿಯಿಂದ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗುವುದು ಎಂದು ತಿಳಿಸಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರಲು ದೇಶವ್ಯಾಪಿ ನಿಷೇಧಾಜ್ಞೆಗಳನ್ನು ವಿಧಿಸುವುದಾಗಿ ಮತ್ತು ಕರ್ಫ್ಯೂ ಮುಂದುವರಿಸುವುದಾಗಿ ಸೇನೆ ಘೋಷಿಸಿದೆ. ಈ ಕುರಿತು ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ನಿರ್ದೇಶನಾಲಯ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಹೇಳಿಕೆಯಲ್ಲಿ ಇಂದು ಸಂಜೆ 5:00 ಗಂಟೆವರೆಗೆ ನಿಷೇಧಾಜ್ಞೆ ಹಾಗೂ ದೇಶಾದ್ಯಂತ ಗುರುವಾರ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಮುಂದಿನ ಪರಿಸ್ಥಿತಿಗಳನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಪ್ರತಿಭಟನೆಯ ನೆಪದಲ್ಲಿ ಲೂಟಿ, ಬೆಂಕಿ ಹಚ್ಚುವುದು ಮತ್ತು ಇತರ ವಿನಾಶಕಾರಿ ಚಟುವಟಿಕೆಗಳನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ರಸ್ತೆಗಳಲ್ಲಿ ಸೇನಾ ತಂಡಗಳನ್ನು ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ವಾಹನಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭದ್ರತಾ ಪಡೆಗಳೂ ಸೇರಿದಂತೆ ಅಗತ್ಯ ಸೇವೆ ನೀಡುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಷೇಧಾಜ್ಞೆ ಆದೇಶಗಳು ಮತ್ತು ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Nepal protestors torch President's residence, airport closed

ಲೂಟಿಕೋರರ ಬಂಧನ: ಕಠಿಣ ಪರಿಸ್ಥಿತಿಯಲ್ಲಿ ದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ನಾಗರಿಕರು ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ನೇಪಾಳ ಸೇನೆ ಕೃತಜ್ಞತೆ ಸಲ್ಲಿಸುತ್ತದೆ. ಪ್ರತಿಭಟನೆಯ ವೇಳೆ ಉಂಟಾದ ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಅಪಾರ ದುಃಖವಿದೆ. ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ದೇಶದಲ್ಲಿ ಎದುರಾಗುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡುವಂತೆಯೂ ಸೇನೆ ಮನವಿ ಮಾಡಿದೆ. ಇದೇ ವೇಳೆ, ಪ್ರತಿಭಟನೆ ಹೆಸರಲ್ಲಿ ಲೂಟಿ ಮೂಡುತ್ತಿರುವ ಜನರನ್ನು ಬಂಧಿಸಲಾಗುತ್ತಿದೆ.

ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಉದ್ದೇಶ ಹೊಂದಿದ್ದು, ಜನರು ಮನೆಯಲ್ಲಿಯೇ ಇರಬೇಕು. ಹಿಂಸಾಚಾರದ ಹಿನ್ನೆಲೆಯಲ್ಲಿ ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದೆ ಸಂಯಮ ಕಾಯ್ದುಕೊಳ್ಳಬೇಕು ಎಂದು ಸೇನೆ ಮನವಿ ಮಾಡಿದೆ. ಕಠ್ಮಂಡು, ಲಲಿತ್‌ಪುರ ಮತ್ತು ಭಕ್ತಪುರ ನಗರಗಳೂ ಸೇರಿದಂತೆ ದೇಶದ ಹಲವೆಡೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಸಹಜ ಸ್ಥಿತಿಗೆ ಮರಳುತ್ತಿರುವ ರಾಜಧಾನಿ ಕಠ್ಮಂಡು: ನಗರದಬೀದಿಗಳಲ್ಲಿ ಶಸ್ತ್ರಸಜ್ಜಿತ ಸೇನಾ ಪಡೆಗಳು ಬೀಡುಬಿಟ್ಟಿದ್ದು, ಹಿಂಸಾಚಾರಗಳು ನಿಯಂತ್ರಣಕ್ಕೆ ಬರುತ್ತಿವೆ. ಹೀಗಾಗಿ, ಕಠ್ಮಂಡುವಿನಲ್ಲಿ ಇಂದು ಪರಿಸ್ಥಿತಿ ಶಾಂತವಾಗಿದ್ದು, ರಸ್ತೆಗಳಲ್ಲಿ ಭದ್ರತಾ ಪಡೆಗಳು ಗಸ್ತು ಹೆಚ್ಚಿಸಿವೆ.

📚 Related News