ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ಅದ್ಭುತ: 10 ದಿನದ ವಿದ್ಯುತ್ ಬಿಲ್ ಎಷ್ಟಾಗುತ್ತೆ ಗೊತ್ತಾ?​!

ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ಅದ್ಭುತ: 10 ದಿನದ ವಿದ್ಯುತ್ ಬಿಲ್ ಎಷ್ಟಾಗುತ್ತೆ ಗೊತ್ತಾ?​!
By Published : September 10, 2025 at 3:38 PM IST

ವಿಶೇಷ ವರದಿ: ಮಹೇಶ್​ .ಎಮ್​.

ಮೈಸೂರು: ಮೈಸೂರಿನ ಪ್ರಮುಖ ಆಕರ್ಷಣೆ ಅಂಬಾವಿಲಾಸ ಅರಮನೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಈ ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರದ ಇತಿಹಾಸ ಏನು? ಎಂಬ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ವಿಶೇಷ ವರದಿ ಇಲ್ಲಿದೆ.

ಮೈಸೂರು ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ನೋಡುವುದೇ ಒಂದು ಖುಷಿ. ಮೈಸೂರು ಅರಮನೆಯ ದೀಪಾಲಂಕಾರಕ್ಕೆ ಒಟ್ಟು 96,700 ವಿಶೇಷ ಬಲ್ಬ್​ಗಳನ್ನು ಅಳವಡಿಸಲಾಗುತ್ತದೆ. ವಿಶೇಷವೆಂದರೆ ಹಳೆಯ ಮಾದರಿಯ ಬುರುಡೆಯ ಆಕಾರದ ಎಂ ಆಕೃತಿಯ ತಂತಿಯನ್ನೊಳಗೊಂಡ 15 ವ್ಯಾಟ್ ಸಾಮರ್ಥ್ಯದ ಈ ಬಲ್ಬ್​ಗಳು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.

ಪ್ರತಿವರ್ಷ ಸುಮಾರು 15 ರಿಂದ 20 ಸಾವಿರ ಬಲ್ಬ್​ಗಳು ಮಳೆ ಹಾಗೂ ಪಾರಿವಾಳಗಳ ಉಪಟಳದಿಂದ ಹಾಳಾಗುತ್ತವೆ. ಇಂತಹ ಬಲ್ಬ್​ಗಳನ್ನು ಪ್ರತಿವರ್ಷ ಎರಡು ಬಾರಿ ಬದಲಾಯಿಸಲಾಗುತ್ತದೆ. ಇವುಗಳನ್ನು ಅಂಬಾವಿಲಾಸ ಅರಮನೆ ಹಾಗೂ ದರ್ಬಾರ್ ಹಾಲ್ ಜೊತೆಗೆ ಅರಮನೆ ಮುಂಭಾಗದ ಮೂರು ಗೇಟ್ ಗಳಲ್ಲಿ ಹಾಗೂ ಅರಮನೆಯೊಳಗಿನ ದೇವಾಲಯಗಳಲ್ಲಿ ಅಳವಡಿಸಲಾಗುತ್ತದೆ.

ಈ ಬಲ್ಬ್​ಗಳನ್ನು ದೆಹಲಿ ಮೂಲದ ಕಂಪನಿ ಪೂರೈಸಿದ್ದು, ಎಲ್ಲೂ ಕೂಡ ಮಾರುಕಟ್ಟೆಯಲ್ಲಿ ಈ ಬಲ್ಬ್​​ಗಳು ಸಿಗುವುದಿಲ್ಲ. ವಿಶೇಷವಾಗಿ ಆರ್ಡರ್ ಕೊಟ್ಟು ಈ ಬಲ್ಬ್ ಗಳನ್ನು ಮಾಡಿಸಲಾಗುತ್ತದೆ. ಬಲ್ಬ್​ನ ಒಳಭಾಗವನ್ನು ತಂತಿ ಚಿನ್ನದ ಹೊಳಪನ್ನು ಒಳಗೊಂಡ ರೀತಿಯಲ್ಲಿ ತಯಾರಿಸಲಾಗುತ್ತದೆ. ಆದ್ದರಿಂದಲೇ ಅರಮನೆ ದೀಪಾಲಂಕಾರ ಚಿನ್ನದ ಹೊಳಪಿನ ರೀತಿ ಕಂಡುಬರುತ್ತದೆ.

ವಿದ್ಯುತ್ ಬಿಲ್ ಎಷ್ಟು: ಮೈಸೂರು ಅರಮನೆಯ ದೀಪಾಲಂಕಾರಕ್ಕೆ 96,700 ಬಲ್ಬ್​ಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ ದೀಪಾಲಂಕಾರ ಇರುವುದಿಲ್ಲ. ರಜಾ ದಿನಗಳು ಹಾಗೂ ಪ್ರತಿ ಭಾನುವಾರ ಒಂದು ಗಂಟೆ ಸಮಯ ದೀಪಾಲಂಕಾರ ಇರುತ್ತದೆ. ದಸರಾದ 10 ದಿನಗಳು ದೀಪಾಲಂಕಾರ ಇರುತ್ತದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ತಿಂಗಳು 10 ರಿಂದ 12 ಲಕ್ಷ ಎಲೆಕ್ಟ್ರಿಸಿಟಿ ಬಿಲ್ ಬರುತ್ತದೆ. ಜೊತೆಗೆ ದಸರಾ ಸಂದರ್ಭದಲ್ಲಿ 10 ದಿನದ ವಿಶೇಷ ದೀಪಾಲಂಕಾರ ಅಂದರೆ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಸರಾ ಸಂದರ್ಭದಲ್ಲಿ ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ವಿಶೇಷವಾಗಿ ದೀಪಾಲಂಕಾರ ಇರುತ್ತದೆ. ಇದಕ್ಕೆ 10 ದಿನಕ್ಕೆ ಅಂದಾಜು 15 ರಿಂದ 20 ಲಕ್ಷ ರೂಪಾಯಿ ಎಲೆಕ್ಟ್ರಿಸಿಟಿ ಬಿಲ್ ಬರುತ್ತದೆ. ಪ್ರತಿವರ್ಷ 5 ರಿಂದ 10 ಲಕ್ಷ ಬೆಲೆಯ 15 ರಿಂದ 20 ಸಾವಿರ ಹಳೆಯ ಬಲ್ಬ್​ಗಳನ್ನು ಬದಲಾಯಿಸಲಾಗುತ್ತದೆ.

ಮುಖ್ಯ ಇಂಜಿನಿಯರ್ ಶಿವಕುಮಾರ್ ಮಾಹಿತಿ: ಅರಮನೆಯ ದೀಪಾಲಂಕಾರವನ್ನು ನೋಡಿಕೊಳ್ಳುವ ಮುಖ್ಯ ಇಂಜಿನಿಯರ್ ಶಿವಕುಮಾರ್ ಜೊತೆ ಮಾತನಾಡಿ, " ಮೈಸೂರು ಅಂಬಾವಿಲಾಸ ಅರಮನೆಯ ಮುಖ್ಯ ಪ್ಯಾಲೇಸ್ ಮೂರು ಗೇಟ್​ಗಳು ಹಾಗೂ ದೇವಸ್ಥಾನಗಳು ಸೇರಿದಂತೆ ಅರಮನೆಯ ಕಾಂಪೌಂಡ್​ಗಳು ಸೇರಿ 96,700 ವಿಶೇಷವಾಗಿ ಮಾಡಲಾಗಿರುವ ಬುರುಡೆ ಬಲ್ಬ್​ಗಳನ್ನು ಬಳಸಲಾಗಿದ್ದು, ಪ್ರತಿವರ್ಷ ಯುಗಾದಿ ಹಾಗೂ ದಸರಾ ಸಂದರ್ಭಗಳಲ್ಲಿ ಕೆಟ್ಟು ಹಾಗೂ ಒಡೆದು ಹೋದ ಸುಮಾರು 15 ರಿಂದ 20 ಸಾವಿರ ಬಲ್ಬ್​ಗಳನ್ನು ಬದಲಾಯಿಸಲಾಗುತ್ತದೆ. ಅರಮನೆಯ ದೀಪಾಲಂಕಾರಕ್ಕೆ ಅರಮನೆಯ ಒಳಗೆ ಮೂರು ಕಡೆ ಪವರ್ ಹೌಸ್ ಇದ್ದು, ಇಲ್ಲಿಂದಲೇ ಪ್ಯಾಲೇಸ್ ಲೈಟಿಂಗ್ ಸ್ವಿಚ್​ಗಳನ್ನು ಕಂಟ್ರೋಲ್ ಮಾಡಲಾಗುತ್ತದೆ" ಎಂದರು.

"ದಸರಾ ಸಂದರ್ಭದಲ್ಲಿ ಅಂಬಾವಿಲಾಸ ಅರಮನೆಯ ಖಾಸಗಿ ದರ್ಬಾರ್ ಹಾಲ್ ಹಾಗೂ ಕಲ್ಯಾಣಮಂಟಪಗಳಿಗೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುತ್ತದೆ. ಮೈಸೂರು ಅರಮನೆಗೆ ಹಾಕಲಾಗಿರುವ ಬಲ್ಬ್​ಗಳು ಮಾರುಕಟ್ಟೆಯಲ್ಲಿ ಎಲ್ಲೂ ಸಿಗುವುದಿಲ್ಲ. ನಾವೇ ಆರ್ಡರ್ ಮಾಡಿ ದೆಹಲಿಯ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಈ ಬಲ್ಬ್​ಗಳನ್ನು ತರಿಸುತ್ತೇವೆ. ಈ ಬಲ್ಬ್​ಗಳ ತಂತಿ ಚಿನ್ನದ ಹೊಳಪಿನ ಅಂಶಗಳನ್ನು ಒಳಗೊಂಡಿದ್ದು, ಅರಮನೆಗೆ ಹೊಸ ಎಲ್.ಈ.ಡಿ ಬಲ್ಬ್​ಗಳನ್ನು ಹಾಕಿದರೆ ಹೊಳಪು ಬರುವುದಿಲ್ಲ ಎಂದು ಹಳೆಯ ಬಲ್ಬ್​ಗಳನ್ನೇ ಬಳಸುತ್ತಿದ್ದೇವೆ" ಎಂದು ಇಂಜಿನಿಯರ್ ಶಿವಕುಮಾರ್ ವಿವರಿಸಿದರು.

"ಮೈಸೂರು ಅರಮನೆಯನ್ನು 1897ರಲ್ಲಿ ಇಂಗ್ಲೆಂಡ್​ನ ಆರ್ಕಿಟೆಕ್ ಹೆನ್ರಿ ಇರ್ವಿನ್ ಸುಮಾರು 42 ಲಕ್ಷ ರೂಪಾಯಿಗಳಲ್ಲಿ ಯಾವುದೇ ಯಂತ್ರ ಬಳಸದೆ ಮ್ಯಾನ್ ಪವರ್ ಬಳಸಿ ಅದ್ಭುತ ಅರಮನೆಯನ್ನು ಕಟ್ಟಿದ್ದು, ನಂತರ 1988ರಲ್ಲಿ ಅರಮನೆಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಯಿತು. ಇದು ಏಷ್ಯಾದಲ್ಲೇ ಮೊದಲ ಅರಮನೆ ಎಂಬ ಖ್ಯಾತಿಯನ್ನು ಪಡೆದಿದೆ" ಎಂದೂ ಅವರು ತಿಳಿಸಿದರು.

📚 Related News