ಹಾವೇರಿ: ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

ಹಾವೇರಿ: ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು
By Published : September 10, 2025 at 1:42 PM IST

ಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ವಿಚಿತ್ರ ಎಂದರೆ ವೃಷಭ ರೂಪಿ ಶನೇಶ್ವರ ಮೂಕಪ್ಪಸ್ವಾಮಿ ಈ ನಿಧಿಗಳ್ಳರನ್ನು ಪತ್ತೆ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದು, ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಹಾನಗಲ್​​​​ ತಾಲೂಕು ಮಲಗುಂದ ಗ್ರಾಮದ ಹೊರವಲಯದಲ್ಲಿ ಕೋಣಕಲ್ಲು ಭರಮಪ್ಪ ದೇವರ ಕಲ್ಲು ಇತ್ತು. ಅದರ ಕೆಳಗೆ ಸಾಕಷ್ಟು ನಿಧಿ ಇದೆ ಎಂಬ ಆಸೆಗೆ ಬಿದ್ದು 4 ತಿಂಗಳ ಹಿಂದೆ ಕಳ್ಳರು ದೇವರ ಕಲ್ಲು ಅಗೆದು ನಿಧಿ ಪತ್ತೆಗೆ‌ ಮುಂದಾಗಿದ್ದರು. ಆದರೆ ನಿಧಿ ಅಗೆಯುತ್ತಿದ್ದ ವೇಳೆ ಅಡಚಣೆ ಬಂದಿದ್ದರಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಮೂಕಪ್ಪಸ್ವಾಮಿ ಮುಂದೆ ಕಳ್ಳರ ತಪ್ಪೊಪ್ಪಿಗೆ: ಘಟನೆ ಆ ಬಳಿಕ ಬೆಳಕಿಗೆ ಬಂದಿದ್ದು, ಆರೋಪಿಗಳ ಪತ್ತೆಗೆ ಮಲಗುಂದ ಗ್ರಾಮಸ್ಥರು ಸಾಕಷ್ಟು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲವಂತೆ. ಈ ಕುರಿತಂತೆ ಗ್ರಾಮಸ್ಥರು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು‌. ಕೊನೆಗೆ ಮಲಗುಂದ ಗ್ರಾಮದ ಪಕ್ಕದಲ್ಲಿಯೇ ಇದ್ದ ವೃಷಭ ರೂಪಿ ಶ್ಯಾಡಗುಪ್ಪಿ ಗ್ರಾಮದ ಶನೇಶ್ವರ ಮೂಕಪ್ಪಶ್ರೀಗಳ ಮೊರೆ‌ ಹೋಗಿದ್ದರು. ಕಾರ್ಯ ನಿಮಿತ್ತವಾಗಿ ಮಲಗುಂದ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮೂಕಪ್ಪಸ್ವಾಮೀಜಿ ನಿಧಿಗಳ್ಳರನ್ನು ಪತ್ತೆಹಚ್ಚಿದೆ‌‌. ಆರೋಪಿಗಳ ಮನೆ‌ ಮುಂದೆ ನಿಂತು ಆಶ್ಚರ್ಯ ಮೂಡಿಸಿದೆ‌. ಈ ವೇಳೆ ಗ್ರಾಮದ ರೇಣಕಾಸ್ವಾಮಿ ಹಿರೇಮಠ ಮತ್ತು ಮೌಲಾಲಿ ಮುಜಾವರ್, ಮೂಕಪ್ಪ ಸ್ವಾಮಿ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಇದು ಮೂಕಪ್ಪಸ್ವಾಮಿ ಪವಾಡ ಅಂತಾರೆ ಸ್ಥಳೀಯರು.

ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು: ನಿಧಿಗಳ್ಳರ ಮನೆ ತೋರಿಸುತ್ತಿದ್ದಂತೆ ಗ್ರಾಮಸ್ಥರು ಆಡೂರು ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ರೇಣಕಾಸ್ವಾಮಿ ಹಿರೇಮಠ, ಮೌಲಾಲಿ ಮುಜಾವರ್, ಆನಂದ ಊರಣಕರ, ಪ್ರವೀಣ ಸಾಲಿಮಠ, ಮಹಾಂತೇಶ ಬೆಲ್ಲದ ಹಾಗೂ ನಿರಂಜನ ಪೂಜಾರ ಮೇಲೆ ದೂರು ದಾಖಲಾಗಿದೆ. ಇವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿ, ಬಂಧನ ಮಾಡಿದ್ದಾರೆ.

ಗ್ರಾಮದಲ್ಲಿ ಸಾವು-ನೋವು: "ಕೋಣಕಲ್ಲು ಭರಮಪ್ಪ ಕಲ್ಲು ಅಗೆದ ನಂತರ ಗ್ರಾಮದಲ್ಲಿ ಸಮಸ್ಯೆ ಹೆಚ್ಚಾಗಿತ್ತು. ಗ್ರಾಮದಲ್ಲಿ ಮೂರಕ್ಕೂ ಅಧಿಕ ಯುವಕರು ಸಾವನ್ನಪ್ಪಿದ್ದರು. ಜೊತೆಗೆ ದೇವರಿಗೆ ದಿಗ್ಬಂಧನ ಹಾಕಿದ್ದರು. ಇದರಿಂದ ಗ್ರಾಮದ ಜನರು ಮೂಕಪ್ಪಸ್ವಾಮಿ ಬಳಿ ಮನವಿ ಮಾಡಿಕೊಂಡಾಗ ಇದೆಲ್ಲದಕ್ಕೂ ದೇವರ ಕಲ್ಲು ಅಗೆದಿರುವುದು ಕಾರಣ ಎಂದು ತಿಳಿಯುತ್ತದೆ. ಇದಾಗಿ ಮೂಕಪ್ಪಸ್ವಾಮಿ ಊರಿಗೆ ಶಾಂತಿ ಹೋಮ ಕಾರ್ಯಕ್ರಮಕ್ಕೆ ಬಂದಾಗ ನಿಧಿಗಳ್ಳರ ಪತ್ತೆ ಮಾಡುವಂತೆ ಮಲಗುಂದ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಮೂಕಪ್ಪಸ್ವಾಮಿ ಸಹಾಯದಿಂದ ಕೊನೆಗೂ ಕಳ್ಳರ ಬಂಧನವಾಗಿದ್ದು, ಇದೊಂದು ಮೂಕಪ್ಪಸ್ವಾಮಿಗಳ ಪವಾಡ" ಎಂದೇ‌ ಗ್ರಾಮಸ್ಥ ಮೂಕಪ್ಪ ಎಂಬುವರು ಹೇಳಿಕೊಂಡಿದ್ದಾರೆ.

📚 Related News