ಶಿವಮೊಗ್ಗ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ನಿನ್ನೆ (ಸೋಮವಾರ) ಸಂಜೆ ಮೆರವಣಿಗೆ ನಡೆಸಲಾಗಿದ್ದು, ಅಂಬೇಡ್ಕರ್ ವೃತ್ತದಲ್ಲಿ ಮುಕ್ತಾಯವಾಗುವಾಗ ರಾತ್ರಿ ಆಗಿತ್ತು. ಈ ವೇಳೆ ಅಲ್ಲಿ ದೊಡ್ಡಮಟ್ಟದಲ್ಲಿ ಸೇರಿದ್ದ ಗುಂಪೊಂದರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಇಂದು ಬೆಳಗ್ಗೆ ಸುಮಾರು 8:30ಕ್ಕೆ 12 ಸೆಕೆಂಡಿನ ವಿಡಿಯೋವೊಂದು ನಮ್ಮ ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಆ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಭದ್ರಾವತಿಯ ಮೆರವಣಿಗೆಯ ಸಮಯದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದ್ದು, ಎಂಬ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ವಿಡಿಯೋದಲ್ಲಿ ಕ್ಲೈಮ್ ಮಾಡುತ್ತಿದ್ದಾರೆ. ಹಾಗಾಗಿ ಈ ವೈರಲ್ ವಿಡಿಯೋಗೆ ಸಂಬಂಧಪಟ್ಟಂತೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದೇವೆ. ಆ ವಿಡಿಯೋದಲ್ಲಿ ಯಾರಾರು ಇದ್ದಾರೆ ಹಾಗೂ ಏನು ಎತ್ತ ಎಂಬ ಬಗ್ಗೆ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಆ ವಿಡಿಯೋವನ್ನು ಯಾವಾಗ ಮಾಡಲಾಗಿದೆ, ಎಲ್ಲಿ ಮಾಡಲಾಗಿದೆ, ಯಾರು ಆ ವಿಡಿಯೋ ಮಾಡಿದ್ದಾರೆ ಎಂಬ ಮಾಹಿತಿ ಸೇರಿದಂತೆ ಸಂಪೂರ್ಣ ವಿಡಿಯೋ ಪತ್ತೆ ಹಚ್ಚಲು ಮೂರು ಪೊಲೀಸರ ತಂಡವನ್ನು ರಚನೆ ಮಾಡಲಾಗಿದೆ. ಆ ವಿಡಿಯೋವನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಕ್ಕೂ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಂಧನದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್ಪಿ ಮಿಥುನ್ ಕುಮಾರ್, ಸದ್ಯಕ್ಕೆ ಯಾರ ಬಂಧನವೂ ಆಗಿಲ್ಲ, ವಿಡಿಯೋದಲ್ಲಿರುವವರ ಪತ್ತೆಗಾಗಿಯೇ ಒಂದು ತಂಡ ಇದೆ. ಆ ತಂಡ ವಿಡಿಯೋದಲ್ಲಿರುವವರನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತದೆ. ಆ ಬಳಿಕ ಮತ್ತಷ್ಟ ಮಾಹಿತಿ ನೀಡುವೆ. ಸದ್ಯಕ್ಕೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.