Asia Cup, AFG vs HK: 17ನೇ ಆವೃತ್ತಿಯ ಪುರುಷರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಚೊಚ್ಚಲ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಗ್‌ಕಾಂಗ್ ತಂಡಗಳ ನಡುವೆ ನಡೆಯಿತು.
ಟಾಸ್ ಗೆದ್ದ ಅಫ್ಘಾನ್ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡ ಪವರ್‌ಪ್ಲೇನಲ್ಲಿ ಹಿನ್ನಡೆ ಅನುಭವಿಸಿತು. ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (8) 25 ರನ್‌ಗಳಿಗೆ ಔಟಾದರೆ, ಮತ್ತೊಬ್ಬ ಆರಂಭಿಕ ಇಬ್ರಾಹಿಂ ಜದ್ರಾನ್ (1) ಕೂಡ ಬೇಗನೆ ಪೆವಿಲಿಯನ್ ಸೇರಿದರು. 6 ಓವರ್‌ಗಳ ನಂತರ ಅಫ್ಘಾನಿಸ್ತಾನದ ಸ್ಕೋರ್ 56/2 ಆಗಿತ್ತು. ಈ ವೇಳೆ, ಸೆಡಿಕುಲ್ಲಾ ಅಟಲ್ (27) ಮತ್ತು ಹಿರಿಯ ಆಟಗಾರ ಮೊಹಮ್ಮದ್ ನಬಿ (18) ತಂಡದ ಸ್ಕೋರ್ ಹೆಚ್ಚಿಸಿದರು.
ಅರ್ಧಶತಕ ಸಿಡಿಸಿದ ಸೆದಿಕುಲ್ಲಾ ಅಟಲ್: ಮಧ್ಯಮ ಓವರ್‌ಗಳಲ್ಲಿ ಅಫ್ಘಾನಿಸ್ತಾನ ತನ್ನ ಇನ್ನಿಂಗ್ಸ್ ಅನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿತು. ಆದರೆ ಹಾಂಗ್‌ಕಾಂಗ್ ಬೌಲರ್‌ಗಳು ಆಗಾಗ್ಗೆ ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನ್ ಮೇಲೆ ಒತ್ತಡ ಹೇರಿದರು. 10 ಓವರ್‌ಗಳಲ್ಲಿ ಸ್ಕೋರ್ 81/3 ಆಗಿದ್ದಾಗ, ನಬಿ 33 ರನ್‌ಗಳಿಗೆ ಔಟಾದರು. ಅಟಲ್ ತಮ್ಮ ಅರ್ಧಶತಕ ಪೂರ್ಣಗೊಳಿಸಿ ತಂಡಕ್ಕೆ ಬಲವಾದ ಬೆಂಬಲ ನೀಡಿದರು. 15 ಓವರ್‌ಗಳಲ್ಲಿ ಸ್ಕೋರ್ 124/4 ತಲುಪಿದ ನಂತರ, ಒಮರ್‌ಜೈ ಬಿರುಸಿನ ಪ್ರದರ್ಶನ ನೀಡಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸುವ ಮೂಲಕ ಹಾಂಗ್‌ಕಾಂಗ್ ಬೌಲಿಂಗ್ ಪಡೆಯ ಲಯ ತಪ್ಪಿಸಿದರು.
ಕೊನೆಯ ಓವರ್ ತಲುಪುತ್ತಿದ್ದಂತೆ ಅಫ್ಘಾನಿಸ್ತಾನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಒಂದೆಡೆ ಅಟಲ್ ಸ್ಥಿರ ಪ್ರದರ್ಶನ ನೀಡಿದರೆ, ಮತ್ತೊಂದೆಡೆ ಒಮರ್‌ಜೈ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅವರ 53 ರನ್‌ಗಳ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.
ಅಂತಿಮವಾಗಿ, ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 189 ರನ್ ಗಳಿಸಿತು. ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡರೂ, ಸೆಡಿಕುಲ್ಲಾ ಅಟಲ್ ಮತ್ತು ಒಮರ್‌ಜೈ ನಡುವಿನ ಅದ್ಭುತ ಪಾಲುದಾರಿಕೆ ತಂಡವನ್ನು ಉತ್ತಮ ಸ್ಕೋರ್‌ನತ್ತ ಕೊಂಡೊಯ್ಯಿತು. ಇದರೊಂದಿಗೆ, ಅಫ್ಘಾನಿಸ್ತಾನ ಹಾಂಗ್ಕಾಂಗ್ಗೆ 190 ರನ್‌ಗಳ ಗುರಿ ನೀಡಿತು.
ಅಲ್ಪಮೊತ್ತಕ್ಕೆ ಕುಸಿದ ಹಾಂಗ್‌ಕಾಂಗ್: ಬೃಹತ್ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 3.2 ಓವರ್‌ಗಳಲ್ಲಿ 18 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಪವರ್ ಪ್ಲೇ ಅಂತ್ಯಕ್ಕೆ 28/4 ರನ್ಗಳಿಸಿ ತೀವ್ರ ಒತ್ತಡಕ್ಕೆ ಸಿಲುಕಿತು. ಆ ನಂತರವೂ ಪರಿಸ್ಥಿತಿ ಬದಲಾಗಲಿಲ್ಲ. 17ನೇ ಓವರ್ ಅಂತ್ಯದಲ್ಲಿ ಅವರು ಏಳು ವಿಕೆಟ್ ಕಳೆದುಕೊಂಡರು.
ಹಾಂಗ್‌ಕಾಂಗ್ ಪರ ಬಾಬರ್ ಹಯಾತ್ 39 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಫ್ಘಾನಿಸ್ತಾನ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಅಂತಿಮವಾಗಿ, ಹಾಂಗ್‌ಕಾಂಗ್ 20 ಓವರ್‌ಗಳಲ್ಲಿ 94/9 ರನ್‌ಗಳನ್ನು ಮಾತ್ರ ಗಳಿಸಿ 94 ರನ್‌ಗಳಿಂದ ಸೋಲು ಕಂಡಿತು. ಇದರೊಂದಿಗೆ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ ಮೂರನೇ ತಂಡವಾಗಿ ದಾಖಲೆ ಬರೆಯಿತು.
ಏಷ್ಯಾಕಪ್ ಟಿ20 ಮಾದರಿಯಲ್ಲಿ ಹೆಚ್ಚು ಅಂತರದಲ್ಲಿ ಗೆದ್ದ ತಂಡಗಳು:
- 2022ರಲ್ಲಿ ಹಾಂಗ್‌ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ 155 ರನ್‌ಗಳ ಗೆಲುವು
- 2022 ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 101 ರನ್‌ಗಳ ಗೆಲುವು
- 2025 ಹಾಂಗ್‌ಕಾಂಗ್ ವಿರುದ್ಧ ಅಫ್ಘಾನಿಸ್ತಾನಕ್ಕೆ 94 ರನ್‌ಗಳ ಗೆಲುವು
- 2016ರಲ್ಲಿ ಓಮನ್ ವಿರುದ್ಧ ಯುಎಇಗೆ 71 ರನ್‌ಗಳ ಗೆಲುವು
- 2016 ರಲ್ಲಿ ಹಾಂಗ್‌ಕಾಂಗ್ ವಿರುದ್ಧ ಅಫ್ಘಾನಿಸ್ತಾನಕ್ಕೆ 66 ರನ್‌ಗಳ ಗೆಲುವು
ಇಂದು ಭಾರತ-ಯುಎಇ ಪಂದ್ಯ: ಏಷ್ಯಾಕಪ್ನ ಎರಡನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಪಂದ್ಯ ರಾತ್ರಿ ಗಂಟೆ 8ಕ್ಕೆ ಆರಂಭವಾಗಲಿದೆ.