Apple Launches Watch Series: ಆ್ಯಪಲ್ ತನ್ನ 'Awe ಡ್ರಾಪಿಂಗ್' ಬಿಡುಗಡೆ ಕಾರ್ಯಕ್ರಮದಲ್ಲಿ ವಾಚ್ ಸೀರಿಸ್ 11ನ ವಾಚ್ ಅಲ್ಟ್ರಾ 3 ಮತ್ತು ವಾಚ್ SE (3ನೇ ಜನರೇಷನ್)ಗಳನ್ನು ರಿಲೀಸ್ ಮಾಡಿದೆ. ಇವುಗಳನ್ನು ಸೆಪ್ಟೆಂಬರ್ 2024ರಲ್ಲಿ ಬಿಡುಗಡೆಯಾದ ಹಿಂದಿನ ವಾಚ್ ಸೀರಿಸ್ 10ರಿಂದ ಅಪ್‌ಗ್ರೇಡ್ ಮಾಡಲಾಗಿದೆ. ಹಿಂದಿನ ವಾಚ್ SE (2ನೇ ಜನರೇಷನ್) ಸೆಪ್ಟೆಂಬರ್ 2022ರಲ್ಲಿ ಬಿಡುಗಡೆಯಾಗಿದ್ದು, ಮೂರು ವರ್ಷಗಳ ನಂತರ ವಾಚ್ SE ಸೀರಿಸ್ ಅಪ್ಡೇಟ್ ಆಗಿದೆ.
ಆ್ಯಪಲ್ ವಾಚ್ ಸೀರಿಸ್ 11, ವಾಚ್ ಅಲ್ಟ್ರಾ 3, ವಾಚ್ SE 3: ಅಮೆರಿಕದಲ್ಲಿ ವಾಚ್ ಸೀರಿಸ್ 11 ರ ಆರಂಭಿಕ ಬೆಲೆ $399. ಭಾರತದಲ್ಲಿ ಇದರ ಬೆಲೆ ₹46,900. 42mm ಮತ್ತು 46mm ಗಾತ್ರದ ರೂಪಾಂತರಗಳಲ್ಲಿ ಲಭ್ಯ. ಜೆಟ್ ಬ್ಲಾಕ್, ರೋಸ್ ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಗ್ರೇ ಅಲ್ಯೂಮಿನಿಯಂ ಕೇಸ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಪಾಲಿಶ್ ಮಾಡಿದ ಟೈಟಾನಿಯಂ ಕೇಸ್ ಆಯ್ಕೆಯೊಂದಿಗೆ ನ್ಯಾಚುರಲ್, ಗೋಲ್ಡ್ ಮತ್ತು ಸ್ಲೇಟ್ ಬಣ್ಣಗಳಲ್ಲಿ ಖರೀದಿಸಲು ಸಾಧ್ಯವಿದೆ. ಆ್ಯಪಲ್ ವಾಚ್‌ನ ಹರ್ಮೆಸ್ ರೂಪಾಂತರ 42mm ಮತ್ತು 46mm ಗಾತ್ರಗಳಲ್ಲಿ ಲಭ್ಯವಿರುತ್ತದೆ. ಇದನ್ನು ಸಿಲ್ವರ್ ಟೈಟಾನಿಯಂ ಕೇಸ್‌ನಲ್ಲಿ ಮಾತ್ರ ಖರೀದಿಸಬಹುದು.
ಆ್ಯಪಲ್ ವಾಚ್ ಅಲ್ಟ್ರಾ 3ರ ಬೆಲೆ: ಅಮೆರಿಕದಲ್ಲಿ $799ಗೆ ಖರೀದಿಸಬಹುದು. ಭಾರತದಲ್ಲಿ ಬೆಲೆ ರೂ 89,900. ಇದರ ನ್ಯಾಚುರಲ್ ಮತ್ತು ಬ್ಲ್ಯಾಕ್ ಟೈಟಾನಿಯಂ ಕೇಸ್ ರೂಪಾಂತರಗಳನ್ನು ಬಿಡುಗಡೆ ಮಾಡಲಾಗಿದೆ.
ಆ್ಯಪಲ್ ವಾಚ್ ಅಲ್ಟ್ರಾ 3ಕ್ಕಾಗಿ ಹೊಸ ಬಣ್ಣದ ವಾಚ್ ಬ್ಯಾಂಡ್‌ಗಳನ್ನು ಕಂಪನಿ ಪರಿಚಯಿಸಿದೆ. ಇವುಗಳಲ್ಲಿ ಓಷನ್ ಬ್ಯಾಂಡ್ ಮತ್ತು ಆಲ್ಪೈನ್ ಲೂಪ್‌ನ ಹೊಸ ಬಣ್ಣಗಳು ಸೇರಿವೆ. ಅಲ್ಲದೆ ಹರ್ಮೆಸ್ ಕಲೆಕ್ಷನ್ ಟ್ರೈಲ್ ಲೂಪ್ ಬ್ಯಾಂಡ್ ಮತ್ತು ಎನ್ ಮೆರ್ ಬ್ಯಾಂಡ್ ಕೂಡ ಎರಡು ಹೊಸ ಬಣ್ಣಗಳಲ್ಲಿ ಬರಲಿವೆ. ಆ್ಯಪಲ್ SE 3 ಭಾರತದಲ್ಲಿ ರೂ.25,900 ಬೆಲೆಗೆ ಲಭ್ಯವಾಗಲಿದೆ.
ಆ್ಯಪಲ್ ವಾಚ್ ಸೀರಿಸ್ 11ರ ವಿಶೇಷತೆಗಳು: ಆ್ಯಪಲ್ ವಾಚ್ ಸೀರಿಸ್ 11 5G ಎನೆಬಲ್ ಸ್ಮಾರ್ಟ್‌ವಾಚ್ ಆಗಿದ್ದು, iOS 26ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲಿಗಿಂತ ಎರಡು ಪಟ್ಟು ಬಲವಾದ ಮತ್ತು ಸ್ಕ್ರಾಚ್-ನಿರೋಧಕ ಗಾಜು ಹೊಂದಿದೆ.
ಇದರಲ್ಲಿ ವಿಶೇಷ ಐಯಾನ್-ಎಕ್ಸ್ ಅಂದರೆ ಅಯಾನ್-ಎಕ್ಸ್ಚೇಂಜ್ಡ್ ಗ್ಲಾಸ್ ಬಳಸಲಾಗಿದೆ. ಈ ಗಾಜಿನ ಮೇಲೆ ಹೊಸ ಸೆರಾಮಿಕ್ ಲೇಪನ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ 100% ಮರುಬಳಕೆಯ ಟೈಟಾನಿಯಂ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಮತ್ತು 24 ಗಂಟೆಗಳ ಬ್ಯಾಟರಿ ಲೈಫ್ ಪಡೆಯುತ್ತದೆ. ಇದರೊಂದಿಗೆ ಲೈವ್ ಟ್ರಾನ್ಸ್ಲೇಟ್ ವೈಶಿಷ್ಟ್ಯವನ್ನೂ ಸಹ ಸೇರಿಸಲಾಗಿದೆ. ಇದರ ಹೊರತಾಗಿ, ಈ ಬಾರಿ ಇದರಲ್ಲಿ ಅನೇಕ ಆರೋಗ್ಯ ವೈಶಿಷ್ಟ್ಯಗಳನ್ನೂ ಸೇರಿಸಲಾಗಿದೆ.
ಹೈಪರ್‌ಟೆನ್ಷನ್ ಅಲರ್ಟ್ ಮತ್ತು ಸ್ಲೀಪ್ ಸ್ಕೋರ್ ಈ ಗಡಿಯಾರದಲ್ಲಿ ಲಭ್ಯವಿರುವ ಎರಡು ಹೊಸ ವೈಶಿಷ್ಟ್ಯಗಳು. ಹೈಪರ್‌ಟೆನ್ಷನ್ ವೈಶಿಷ್ಟ್ಯವು ಗಡಿಯಾರದ ಆಪ್ಟಿಕಲ್ ಹಾರ್ಟ್ ಸೆನ್ಸಾರ್ನಿಂದ ಸ್ವೀಕರಿಸಿದ ಡೇಟಾವನ್ನು ಪರೀಕ್ಷಿಸುತ್ತದೆ ಮತ್ತು ನಿಮ್ಮ ರಕ್ತನಾಳಗಳು ಹೃದಯ ಬಡಿತಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದನ್ನು ಕಂಡುಹಿಡಿಯುತ್ತದೆ. ಈ ಅಲ್ಗಾರಿದಮ್ ಹಿನ್ನೆಲೆಯಲ್ಲಿ 30 ದಿನಗಳವರೆಗೆ ಡೇಟಾವನ್ನು ಪರಿಶೀಲಿಸುತ್ತದೆ ಮತ್ತು ಯಾವುದೇ ಸಮಸ್ಯೆ ಕಂಡುಬಂದರೆ ಅಧಿಸೂಚನೆ ಕಳುಹಿಸುತ್ತದೆ.
ಆ್ಯಪಲ್ ವಾಚ್ ಅಲ್ಟ್ರಾ 3ನ ವಿಶೇಷತೆಗಳು: ಆ್ಯಪಲ್ ವಾಚ್ ಅಲ್ಟ್ರಾ 3 ಈಗ 5G ಸಂಪರ್ಕವನ್ನು ಪಡೆಯಲಿದೆ. ಇದಲ್ಲದೆ ಇಲ್ಲಿಯವರೆಗಿನ ಅತಿದೊಡ್ಡ ಡಿಸ್ಪ್ಲೇಯನ್ನು ಇದಕ್ಕೆ ಅಳವಡಿಸಲಾಗಿದೆ. 1Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. LTPO3 ವೈಡ್-ಆಂಗಲ್ OLED ಸ್ಕ್ರೀನ್ನೊಂದಿಗೆ ಬರುತ್ತದೆ. ಇದರ ಪ್ರಯೋಜನವೆಂದರೆ, ವಿಭಿನ್ನ ಕೋನಗಳಲ್ಲಿಯೂ ಸಹ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಗಡಿಯಾರದಲ್ಲಿ ಬಳಸಲಾದ LTPO3 ತಂತ್ರಜ್ಞಾನದಿಂದಾಗಿ, ಬೆಜೆಲ್‌ಗಳನ್ನು ಶೇ.24ರಷ್ಟು ತೆಳುಗೊಳಿಸಲಾಗಿದೆ. ಇದು ಕೇಸ್‌ನ ಗಾತ್ರವನ್ನು ಹೆಚ್ಚಿಸದೆ ಹೆಚ್ಚು ‘active screen area’ ನೀಡುತ್ತದೆ.
ಬ್ಯಾಟರಿಯ ಬಗ್ಗೆ ಮಾತನಾಡುವುದಾದ್ರೆ, ಸಿಂಗಲ್ ಚಾರ್ಜ್ನಲ್ಲಿ 42 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಎಂದು ಆಪಲ್ ಹೇಳುತ್ತದೆ. ಇದಲ್ಲದೆ ಕಡಿಮೆ ಪವರ್ ಮೋಡ್‌ನಲ್ಲಿ 72 ಗಂಟೆಗಳವರೆಗೆ ಬಳಸಬಹುದು. ವಿಶೇಷವೆಂದರೆ, ಕಡಿಮೆ ಪವರ್ ಮೋಡ್‌ನಲ್ಲೂ ಇದು ಫುಲ್ ಜಿಪಿಎಸ್ ಮತ್ತು ಹೃದಯ ಬಡಿತದೊಂದಿಗೆ 20 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. 15 ನಿಮಿಷಗಳ ಕಾಲ ಚಾರ್ಜ್ ಮಾಡಿದ ನಂತರ 12 ಗಂಟೆಗಳ ಕಾಲ ಬಳಸಬಹುದು ಎಂದು ಕಂಪನಿ ಹೇಳಿದೆ.
ದೊಡ್ಡ ವೈಶಿಷ್ಟ್ಯವೆಂದರೆ, ಟು-ಲೆ ಸ್ಯಾಟಲೈಟ್ ಕಮ್ಯುನಿಕೇಷನ್., ಇದು ಸೆಲ್ಯುಲಾರ್ ಅಥವಾ ವೈ-ಫೈ ಇಲ್ಲದೆಯೂ ಸಹ ತುರ್ತು SOS, ಟೆಕ್ಸ್ಟ್ ಮೆಸೇಜ್ ಕಳುಹಿಸಲು ಮತ್ತು ಲೋಕೆಷನ್ ಶೇರ್ ಮಾಡಲು ಅನುವು ಮಾಡಿಕೊಡುತ್ತದೆ. ಯಾವುದೇ ಅಪಘಾತ ಅಥವಾ ಭಾರೀ ಭೂ ಕುಸಿತದ ಸಂದರ್ಭದಲ್ಲಿ ಇದು ಆಟೋಮೆಟಿಕ್ ಆಗಿ ಎಮೆರ್ಜೆನ್ಸಿ ಸರ್ವೀಸ್ ಮತ್ತು ಸೆಟ್ ಮಾಡಲಾದ ಎಮೆರ್ಜೆನ್ಸಿ ಕನೆಕ್ಟ್ಗೆ ಅಲರ್ಟ್ ಕಳುಹಿಸುತ್ತದೆ.
ಆ್ಯಪಲ್ ವಾಚ್ SE 3: ಆ್ಯಪಲ್ ಮೂರು ವರ್ಷಗಳ ನಂತರ ಆ್ಯಪಲ್ ವಾಚ್ SE 2ರ ಅಪ್‌ಗ್ರೇಡ್ ಆಗಿರುವ ಆ್ಯಪಲ್ ವಾಚ್ SE 3 ಅನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಿದೆ. ಕುತೂಹಲಕಾರಿ ವಿಷಯವೆಂದರೆ, ಈ ಮಾದರಿಯಲ್ಲಿ ಆ್ಯಪಲ್ ವಾಚ್ SE 2ನಲ್ಲಿ ಇದುವರೆಗೆ ಕಾಣದ ಎಲ್ಲಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಬಾರಿ ಆಲ್ವೇಸ್ ಆನ್ ಡಿಸ್ಪ್ಲೇ, ಸ್ಲೀಪ್ ಸ್ಕೋರ್ ಮತ್ತು ಹೈಪರ್‌ಟೆನ್ಷನ್ ಡಿಟೆಕ್ಷನ್‌ನಂತಹ ವೈಶಿಷ್ಟ್ಯಗಳು ಆ್ಯಪಲ್ ವಾಚ್ SE ನಲ್ಲಿ ಲಭ್ಯವಿರುತ್ತವೆ. ಇದರ ಹೊರತಾಗಿ ಕ್ಲೈಮೆಟ್ ಸೆನ್ಸಿಂಗ್ ಮತ್ತು S10 ಚಿಪ್‌ಸೆಟ್‌ಗೆ ಸಪೋರ್ಟ್ SE 3 ಮಾದರಿಯಲ್ಲಿಯೂ ಕಂಡುಬರುತ್ತದೆ. ಅಮೆರಿಕದಲ್ಲಿ ಇದರ ಬೆಲೆ $299 ಆಗಿದ್ದು, ಭಾರತದಲ್ಲಿ ₹25,900 ಗಳಲ್ಲಿ ಲಭ್ಯ.
ಇದರಲ್ಲಿ ಸ್ಲೀಪ್ ಸ್ಕೋರ್, ಸ್ಲೀಪ್ ಅಪ್ನಿಯಾ ನೊಟಿಫಿಕೇಶನ್, ವ್ರಿಸ್ಟ್ ಟೆಂಪರೇಚರ್ ಸೆನ್ಸಾರ್ ಸೇರಿದಂತೆ ಇನ್ನೂ ಹೆಚ್ಚಿನವು ಸೇರಿವೆ. ಡಬಲ್-ಟ್ಯಾಪ್ ಮತ್ತು ವ್ರಿಸ್ಟ್ ಫ್ಲಿಕ್ ಗೆಸ್ಚರ್‌ಗಳು, ಆನ್-ಡಿವೈಸ್ ಸಿರಿ ಮತ್ತು ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇತರ ಎರಡು ಹೊಸದಾಗಿ ಬಿಡುಗಡೆಯಾದ ವಾಚ್ ಮಾದರಿಗಳಂತೆ ವಾಚ್ SE 3 ಸಹ 5G ಸೆಲ್ಯುಲಾರ್ ಸಾಮರ್ಥ್ಯಗಳನ್ನು ಸಪೋರ್ಟ್ ಮಾಡುತ್ತದೆ. ವಾಚ್OS 26ನೊಂದಿಗೆ, ವಾಚ್ SE 3 ಆ್ಯಪಲ್ ಇಂಟೆಲಿಜೆನ್ಸ್‌ನಿಂದ ನಡೆಸಲ್ಪಡುವ ಹೊಸ ಲಿಕ್ವಿಡ್ ಗ್ಲಾಸ್ ಲುಕ್ ಮತ್ತು ವರ್ಕೌಟ್ ಬಡ್ಡಿ ಪಡೆಯುತ್ತದೆ. ಹೃದಯ ಆರೋಗ್ಯ ಅಧಿಸೂಚನೆಗಳು, ಸೈಕಲ್ ಟ್ರ್ಯಾಕಿಂಗ್, ಕಾರ್ಡಿಯೋ ಫಿಟ್‌ನೆಸ್, ಫಾಲ್ ಡಿಟೆಕ್ಷನ್, ಕ್ರ್ಯಾಶ್ ಡಿಟೆಕ್ಷನ್, ಎಮರ್ಜೆನ್ಸಿ SOS ಮತ್ತು ಚೆಕ್ ಇನ್‌ನಂತಹ ವೈಶಿಷ್ಟ್ಯಗಳು ಹೊಸ ಮಾದರಿಯಲ್ಲಿವೆ.