ಎರ್ನಾಕುಲಂ (ಕೇರಳ): ಪ್ರಸಿದ್ಧ ಶಬರಿಮಲೆ ದೇಗುಲದ ಗರ್ಭಗುಡಿ ದ್ವಾರದ ಪಕ್ಕದಲ್ಲಿರುವ ವಿಗ್ರಹಗಳ ಮೇಲಿನ ಚಿನ್ನದ ಲೇಪಿತ ಪ್ಲೇಟ್ ತೆಗೆದಿರುವ ದೇವಸ್ವಂ ಮಂಡಳಿ ಕ್ರಮವನ್ನು ಹೈಕೋರ್ಟ್ ಟೀಕಿಸಿದೆ. ಯಾವುದೇ ಅನುಮತಿ ಪಡೆಯದೇ ನಡೆಸಿರುವ ಈ ಕ್ರಮವು ಅನುಚಿತ ಮತ್ತು ನ್ಯಾಯಾಲಯದ ಆದೇಶದ ವಿರುದ್ಧವಾಗಿದೆ. ಈ ಕುರಿತು ಶುಕ್ರವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಹೈಕೋರ್ಟ್ ದೇವಸ್ವಂ ಮಂಡಳಿಗೆ ನಿರ್ದೇಶಿಸಿದೆ
ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನದ ಲೇಪನದ ಪ್ಲೇಟ್ ತೆಗೆದಿರುವ ಕ್ರಮ ಸರಿಯಲ್ಲ ಎಂದಿರುವ ಕೋರ್ಟ್, ಈ ಹಿಂದಿನ ಆದೇಶದಲ್ಲಿ ವಿಗ್ರಹದ ದುರಸ್ತಿ ಸೇರಿದಂತೆ ಯಾವುದೇ ಕಾರ್ಯಕ್ಕೆ ಶಬರಿಮಲೆಯ ವಿಶೇಷ ಕಮಿಷನರ್ ಮತ್ತು ದೇವಸ್ವಂ ಮಂಡಳಿ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಆದಾಗ್ಯೂ ದೇವಸ್ವಂ ಮಂಡಳಿ ಈ ಆದೇಶವನ್ನು ಉಲ್ಲಂಘಿಸಿದೆ ಎಂದಿದೆ
ದ್ವಾರಪಾಲಕ ವಿಗ್ರಹದ ಚಿನ್ನದ ಲೇಪನವನ್ನು ದುರಸ್ತಿ ನಡೆಸುವ ಕುರಿತು ತಂತ್ರಿ ಒಂದು ದಿನದ ಹಿಂದೆ ವಿಶೇಷ ಕಮಿಷನರ್ಗೆ ತಿಳಿಸಿದ್ದಾರೆ. ಸಾಕಷ್ಟು ಸಮಯ ನೀಡಿದ ಹೊರತಾಗಿಯೂ ಕೂಡ ದೇವಸ್ವಂ ಮಂಡಳಿ ಮುಂಚಿತವಾಗಿ ಯಾವುದೇ ಅನುಮತಿ ಪಡೆದಿಲ್ಲ. ಈ ಕುರಿತು ದೇವಸ್ವಂ ಮಂಡಳಿ ಮತ್ತು ದೇವಸ್ವಂ ಕಮಿಷನರ್, ಕಾರ್ಯಕಾರಿ ಅಧಿಕಾರಿಗಳು ವಿವರವಾದ ವರದಿಯನ್ನು ಶುಕ್ರವಾರದೊಳಗೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಶಬರಿಮಲೆಯಲ್ಲಿರುವ ದ್ವಾರಕಾ ವಿಗ್ರಹಗಳ ಚಿನ್ನದ ಲೇಪನವನ್ನು ದೇವಸ್ವಂ ಮಂಡಳಿಯು ಅನುಮತಿಯಿಲ್ಲದೇ ದುರಸ್ತಿಗಾಗಿ ಚೆನ್ನೈಗೆ ಕೊಂಡೊಯ್ದಿದ್ದು, ಇದು ಗಂಭೀರ ಲೋಪ ಎಂದು ಸೂಚಿಸಿ ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಹೈಕೋರ್ಟ್ ಪ್ರಶ್ನೆ ಬಳಿಕ ಪ್ರತಿಕ್ರಿಯಿಸಿರುವ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಶಬರಿಮಲೆ ಗರ್ಭಗುಡಿ ಮುಂದಿರುವ ದ್ವಾರಪಾಲಕ ವಿಗ್ರಹಗಳ ಚಿನ್ನದ ಲೇಪನವನ್ನು ತೆಗೆದು, ಅನುಮತಿ ಇಲ್ಲದೇ ದುರಸ್ತಿಗೆ ಚೆನ್ನೈಗೆ ತೆಗೆದುಕೊಂಡು ಹೋಗಿರುವ ಕುರಿತು ಮಾಧ್ಯಮಗಳಿಂದ ವರದಿ ತಿಳಿಯಿತು. ಆದರೆ, ಈ ಸುದ್ದಿ ಆಧಾರ ರಹಿತವಾಗಿದೆ. ದುರಸ್ತಿಗೆ ಕೊಂಡೊಯ್ದಿರುವುದು ಚಿನ್ನದಿಂದ ಲೇಪಿತವಾದ ತಾಮ್ರದ ಪ್ಲೇಟ್ಗಳಾಗಿವೆ. ಇದನ್ನು ಎರಡೂ ಬದಿಯ ದ್ವಾರಪಾಲಕರಿಗೆ ಲೇಪನ ಮಾಡಲಾಗಿತ್ತು. ಅವುಗಳನ್ನು ಮೂಲ ತಯಾರಿಕೆ ಮಾಡಿದ ಚೆನ್ನೈ ಮೂಲದ ಸಂಸ್ಥೆಗೆ, ತಂತ್ರಿ ಮತ್ತು ಟ್ರಾವಂಕೂರ್ ದೇವಸ್ವಂ ಮಂಡಳಿ ಅನುಮತಿಯೊಂದಿಗೆ ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇಗುಲದ ಒಡವೆಗಳ ಉಸ್ತುವಾರಿ ಹೊಂದಿರುವ ತಿರುವಾಭರಣಂ ಆಯುಕ್ತರು, ಶಬರಿಮಲೆ ಆಡಳಿತ ಕಚೇರಿ, ಶಬರಿಮಲೆ ಸಹಾಯಕ ಕಾರ್ಯದರ್ಶಿ ಅಧಿಕಾರಿ, ದೇವಸ್ವಂ ಸ್ಮಿತ್ ತಂಡದೊಂದಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ದೇವಸ್ವಂ ಮೇಲ್ವಿಚಾರಣೆಯ ಇಬ್ಬರು ಪೊಲೀಸರು, ಇಬ್ಬರು ದೇವಸ್ವಂ ಗಾರ್ಡ್ ಹಾಗೂ ಈ ಪ್ಲೇಟ್ ಅನ್ನು ದಾನವಾಗಿ ನೀಡಿರುವ ದಾನಿಗಳ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿ ಚೆನ್ನೈಗೆ ಸುರಕ್ಷಿತವಾಗಿ ಈ ಹೊದಿಕೆಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2023ರಿಂದಲೂ ತಾಂತ್ರಿಕರು ಈ ದ್ವಾರಪಾಲಕರು ಹಾಗೂ ಸೋಪನಂ ಮೆಟ್ಟಿಲು ಮತ್ತು ದೇಗುಲದ ಬಾಗಿಲುಗಳ ರಿಪೇರಿ ಕುರಿತು ನಿರ್ದೇಶಿಸುತ್ತಿದ್ದರು. ಈಗಾಗಲೇ ಬಾಗಿಲುಗಳ ದುರಸ್ತಿ ನಡೆದಿದೆ. ಇದಾದ ಬಳಿಕ ದ್ವಾರಪಾಲಕ ಪ್ಲೇಟ್ಗಳ ಹೊಳಪು ಕಡಿಮೆ ಆಗುತ್ತಿರುವ ಕುರಿತು ತಂತ್ರಿ ತಿಳಿಸಿದ್ದರು. ಇದರ ಆಧಾರದ ಮೇಲೆ ಈ ಪ್ಲೇಟ್ಗಳನ್ನು ತೆಗೆದು ರಿಪೇರಿಗೆ ಕಳುಹಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.