ಕೋಪರ್ಗಾಂವ್ (ಮಹಾರಾಷ್ಟ್ರ): ಸಾಂಪ್ರದಾಯಿಕ ಕೃಷಿಯೊಂದಿಗೆ ಆಧುನಿಕ ವಿಧಾನಗಳನ್ನು ಸಂಯೋಜಿಸಿದರೆ ಸಣ್ಣ ಪ್ರದೇಶದಿಂದಲೂ ಹೆಚ್ಚಿನ ಆದಾಯ ಗಳಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಕೋಪರ್ಗಾಂವ್ ತಾಲೂಕಿನ ಓಗ್ಡಿಯ ರೈತ ಮನೋಜ್ ಗೊಂಟೆ. ಈ ರೈತ ತನ್ನಲ್ಲಿದ್ದ ಕೇವಲ 30 ಗುಂಟೆಯಲ್ಲಿಯೇ ಶುಂಠಿ ಬೆಳೆಯುವ ಮೂಲಕ 280 ಕ್ವಿಂಟಾಲ್ ಇಳುವರಿ ಪಡೆದುಕೊಂಡಿದ್ದಾರೆ. ಈ ಬೆಳೆಯಿಂದಾಗಿ ಅವರು ಕೇವಲ 14 ತಿಂಗಳಲ್ಲಿಯೇ ಸುಮಾರು ನಾಲ್ಕೂವರೆ ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದಾರೆ.
ಸಾಂಪ್ರದಾಯಿಕ ಬೆಳೆ ಬಿಟ್ಟು ಶುಂಠಿ ಬೆಳೆದ ರೈತ: ರೈತ ಮನೋಜ್ ಗೊಂಟೆ ಅವರ ಪೂರ್ವಜರ ತೋಟವು ಜೋಳ, ಈರುಳ್ಳಿ, ಹೆಸರುಕಾಳು ಮತ್ತು ಸೋಯಾಬೀನ್‌ನಂತಹ ಸಾಂಪ್ರದಾಯಿಕ ಬೆಳೆಗಳನ್ನು ಅವಲಂಬಿಸಿತ್ತು. ಅದಾಗ್ಯೂ, ನಿರಂತರವಾಗಿ ಕುಸಿಯುತ್ತಿರುವ ಬೆಲೆಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಅವರಿಗೆ ಕೃಷಿಯಲ್ಲಿ ನಿರೀಕ್ಷಿತ ಆದಾಯ ಸಿಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ಹಳ್ಳಿಯ ಕೆಲವು ರೈತರು ಯಶಸ್ವಿಯಾಗಿ ಶುಂಠಿ ಬೆಳೆಯುತ್ತಿರುವುದನ್ನು ನೋಡಿದ ಮನೋಜ್ ಅವರು ತಾನೂ ಈ ಬೆಳೆ ಬೆಳೆಯಲು ನಿರ್ಧರಿಸಿದರು. ರೈತರು ಮತ್ತು ಕೆಲವು ಕೃಷಿ ಸಲಹೆಗಾರರಿಂದ ಶುಂಠಿ ಕೃಷಿಯ ಬಗ್ಗೆ ಅಗತ್ಯ ಮಾಹಿತಿ ಪಡೆದ ನಂತರ ಶುಂಠಿ ಬೆಳೆಯಲು ಮುಂದಾದರು.
ಮನೋಜ್ ಗೊಂಟೆ ಅವರು ಗ್ರಾಮದ ಕೆಲವು ರೈತರಿಂದ 8 ಕ್ವಿಂಟಾಲ್ ಶುಂಠಿ ಬೀಜಗಳನ್ನು ಖರೀದಿಸಿ ತಮ್ಮ 36 ಗುಂಟೆ ಪ್ರದೇಶದಲ್ಲಿ ನೆಟ್ಟರು. ಅಲ್ಲದೇ, ಅವರು 6 ಗುಂಟೆ ಪ್ರದೇಶದಲ್ಲಿ ಬೆಳೆದ ಶುಂಠಿ ಬೀಜಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿ, ಶುಂಠಿ ಕೃಷಿ ಪ್ರಾರಂಭಿಸಲು ಮಾರ್ಗದರ್ಶನ ನೀಡಿದರು.
ಉಳಿದ 30 ಗುಂಟೆ ಪ್ರದೇಶದಲ್ಲಿ 2024ರಲ್ಲಿ ಶುಂಠಿ ಬೀಜಗಳನ್ನು ನಾಟಿ ಮಾಡಿದರು. ಗೊಬ್ಬರ ಮತ್ತು ಸಾವಯವ ಔಷಧಗಳನ್ನು ಸರಿಯಾಗಿ ಬಳಸಿ ಮತ್ತು ಹನಿ ನೀರಾವರಿ ಮೂಲಕ ಶುಂಠಿಯನ್ನು ಸಮೃದ್ಧವಾಗಿ ಬೆಳೆಸಿದರು. ಈ ಶುಂಠಿ ಕೃಷಿಗೆ 4.5 ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
14 ತಿಂಗಳ ನಂತರ ಶುಂಠಿ ಬೆಳೆ ಕೊಯ್ಲು ಮಾಡಲಾಯಿತು. ಅದಾಗ್ಯೂ ಆರಂಭದಲ್ಲಿ ಮಾರುಕಟ್ಟೆ ಬೆಲೆ ಕುಸಿದಿದ್ದರಿಂದಾಗಿ ಆತಂಕದ ಪರಿಸ್ಥಿತಿ ಉಲ್ಭಣವಾಯಿತು. ಖರ್ಚಾಗಿರುವ ಹಣವಾದರೂ ಬರಲಿದೆಯೇ ಎಂದು ಚಿಂತಿತರಾಗಿದ್ದರು. ಆದರೆ, ತಾಳ್ಮೆಯಿಂದಿದ್ದ ಅವರು ಶುಂಠಿಯನ್ನು ಮನೆಯಲ್ಲಿಯೇ ಸಂಗ್ರಹಿಸಿದರು. ಬೆಲೆ ಹೆಚ್ಚಳಕ್ಕಾಗಿ ಕಾಯುತ್ತಿರುವಾಗ ಮಾರುಕಟ್ಟೆ ಬೆಲೆ ಇದ್ದಕ್ಕಿದ್ದಂತೆ ಏರಿತು. ಈ ಅವಕಾಶವನ್ನು ಬಳಸಿಕೊಂಡ ಅವರು ತಮ್ಮ 280 ಕ್ವಿಂಟಾಲ್ ಶುಂಠಿ ಬೆಳೆಯನ್ನು ದೇವಗಾಂವ್ ರಂಗರಿಯ ವ್ಯಾಪಾರಿ ಗೋರಖ್ ರಾಟೆಗೆ ಕೆಜಿಗೆ 40 ರೂ. ನಂತೆ ಮಾರಾಟ ಮಾಡಿದರು.

ಇದರಿಂದ 9 ಲಕ್ಷ ರೂ. ಆದಾಯ ಗಳಿಸಿದರು. ಖರ್ಚುಗಳನ್ನು ಕಳೆದು 4.5 ಲಕ್ಷ ರೂ. ನಿವ್ವಳ ಲಾಭ ಸಿಕ್ಕಿತು. ಸಣ್ಣ ಪ್ರದೇಶದಲ್ಲಿ ಶುಂಠಿಯನ್ನು ಬೆಳೆಯುತ್ತಿದ್ದ ಮನೋಜ್ ಗೊಂಟೆ ಅವರಿಂದು ಹಳ್ಳಿಯಲ್ಲಿ ಮಾತ್ರವಲ್ಲದೇ, ಇಡೀ ತಾಲೂಕಿನಲ್ಲಿ ಈ ಬೆಳೆಗೆ ಅತ್ಯಧಿಕ ಬೆಲೆ ಪಡೆದ ರೈತನಾಗಿ ಹೆಸರು ಗಳಿಸಿದ್ದಾರೆ.