ವಿಶೇಷ ವರದಿ : ಭರತ್ ರಾವ್ ಎಂ
ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಸಂತ್ರಸ್ತರ ಸಂಖ್ಯೆ ಅಧಿಕವಾಗುತ್ತಿದೆ. ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಹಾಗೂ ಜೀವ ಕಳೆದುಕೊಂಡವರ ಅವಲಂಬಿತ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸೀಮಿತ ಅನುದಾನ ನೀಡುತ್ತಿದೆ. ಸಂತ್ರಸ್ತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಣ ಮಂಜೂರು ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸಿದೆ.
ಕೊಲೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಆ್ಯಸಿಡ್ ದಾಳಿ, ಗುಂಪು ಗಲಭೆಗಳಲ್ಲಿ ಹತ್ಯೆ ಅಥವಾ ಗಾಯಗೊಂಡವರಿಗೆ ಹಾಗೂ ಮಾನವ ಕಳ್ಳಸಾಗಾಣಿಕೆ ದಂಧೆಯಲ್ಲಿ ಸಿಲುಕಿದವರಿಗೆ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಬಾಧಿತರಾದವರಿಗೆ ರಾಜ್ಯ ಸರ್ಕಾರವು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011ರಡಿ ಕಾನೂನು ಸೇವಾ ಪ್ರಾಧಿಕಾರದ ಮುಖಾಂತರ ಪರಿಹಾರ ನೀಡುತ್ತಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ 10 ಕೋಟಿ ರೂ. ಅನುದಾನ ಬಳಸಿ 276 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡಿದೆ. ಅದಾಗ್ಯೂ ಕಳೆದ ಮೂರು ವರ್ಷಗಳಲ್ಲಿ ಬಾಕಿಯಿರುವ 982 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸುಮಾರು 35.61 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹೀಗಾಗಿ, ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಾಧಿಕಾರವು ಪತ್ರ ಬರೆದಿದೆ.
ಯಾರಿಗೆ ಎಷ್ಟು ಪರಿಹಾರ? ಅಪರಾಧ ಪ್ರಕರಣಗಳಲ್ಲಿ ಬಾಧಿತರಾದವರಿಗೆ, ಪ್ರಾಣ ಕಳೆದುಕೊಂಡ ಅವಲಂಬಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು 2011ರಲ್ಲಿ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಜಾರಿಗೆ ತಂದಿತ್ತು. ಬಳಿಕ 2015 ರಲ್ಲಿ ಯೋಜನೆಯನ್ನು ಪರಿಷ್ಕರಿಸಿತ್ತು. ಇದರಂತೆ ಸಾವನ್ನಪ್ಪಿದವರಿಗೆ ಗರಿಷ್ಠ 3 ಲಕ್ಷ, 2023ರ ಪ್ರತ್ಯೇಕ ಆದೇಶದಂತೆ ಗುಂಪು ಗಲಭೆಯಲ್ಲಿ ಮೃತರಿಗೆ ಗರಿಷ್ಠ ₹10 ಲಕ್ಷ ಪರಿಹಾರ ನೀಡುವ ನಿಯಮ ರೂಪಿಸಿದೆ. ಶೇ.80ರಷ್ಟು ಶಾಶ್ವತ ಅಂಗವೈಕಲ್ಯ ಆದವರಿಗೆ ₹3 ಲಕ್ಷ ಹಾಗೂ 2018ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಮಹಿಳೆ ಹಾಗೂ ಮಕ್ಕಳ ಮೇಲಾಗುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಸಾವನ್ನಪ್ಪಿದವರ ಅವಲಂಬಿತರಿಗೆ ಗರಿಷ್ಟ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ನಿರ್ದೇಶಿಸಿದೆ.
ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ಪರಿಹಾರ ಮೊತ್ತವು ಹೆಚ್ಚಾಗುತ್ತಿದೆ. 2023ರ ಮುನ್ನ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಿಂದ ವರ್ಷಕ್ಕೆ ಸುಮಾರು 250 ರಿಂದ 300 ಪ್ರಕರಣಗಳು ಇತ್ಯರ್ಥಗೊಂಡು ಪ್ರಾಧಿಕಾರಕ್ಕೆ ಪರಿಹಾರದ ಅರ್ಜಿಗಳು ಬರುತ್ತಿದ್ದವು. ಆದರೆ, ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಕಳೆದ ತಿಂಗಳ ಅಂತ್ಯಕ್ಕೆ 650ಕ್ಕಿಂತ ಹೆಚ್ಚು ಅರ್ಜಿಗಳು ಪ್ರಾಧಿಕಾರಕ್ಕೆ ಬಂದಿವೆ. ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರತಿ ವರ್ಷ ಸರ್ಕಾರವು 10 ಕೋಟಿ ರೂಪಾಯಿ ನೀಡುತ್ತಿದೆ. ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಮೀಸಲಿರಿಸಿದ ಅನುದಾನ ಸಾಲದಾಗುತ್ತಿದೆ. ಹೀಗಾಗಿ, ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ ಈಟಿವಿ ಭಾರತ್ಗೆ ತಿಳಿಸಿದ್ಧಾರೆ.
ಪೋಕ್ಸೊ ಪ್ರಕರಣಗಳ ಸಂತ್ರಸ್ತರೇ ಅಧಿಕ: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳುವ ಪ್ರಕರಣಗಳ ಪೈಕಿ ಶೇ. 80 ರಷ್ಟು ಕೇಸ್ಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ (ಪೋಕ್ಸೊ) ಸಂಬಂಧಿಸಿದ ಪ್ರಕರಣಗಳೇ ಆಗಿರುವುದು ಆತಂಕಕಾರಿ. ನಂತರ ಕೊಲೆ, ಅತ್ಯಾಚಾರ, ಗಲಭೆ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಪ್ರಾಧಿಕಾರಕ್ಕೆ ಅರ್ಜಿಗಳು ಬರುತ್ತಿವೆ.
ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ವರ್ಷಗಳಲ್ಲಿ 13,719 ಪೊಕ್ಸೊ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತೆಯರ ಮೇಲಾಗುವ ಲೈಂಗಿಕ ದೌರ್ಜನ್ಯಗಳು ಕುಟುಂಬ-ಸಂಬಂಧಿಗಳು ಹಾಗೂ ಪರಿಚಯಸ್ಥರಿಂದಲೇ ಆಗುತ್ತಿವೆ. ಈ ಹಿಂದೆ ಈ ಹೀನ ಕೃತ್ಯವೆಸಗಿದಾಗ ಪ್ರಕರಣ ಬೆಳಕಿಗೆ ಬರದಂತೆ ವ್ಯವಸ್ಥಿತವಾಗಿ ಸಂತ್ರಸ್ತೆಯರ ಮೇಲೆ ಒತ್ತಡ ಹೇರುತ್ತಿದ್ದರು. ಸದ್ಯ ಕಾಯ್ದೆ ಬಗ್ಗೆ ನಿರಂತರ ಜಾಗೃತಿ ಹಾಗೂ ಅಭಿಯಾನ ಕೈಗೊಂಡ ಪರಿಣಾಮ ಮುಕ್ತವಾಗಿ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಶಿಧರ್ ಅವರು ಹೇಳಿದ್ದಾರೆ.
ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ 46.75 ಕೋಟಿ ಪರಿಹಾರವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲಾಗಿದೆ. 2023 ರಿಂದ ಪ್ರತಿ ವರ್ಷ 10 ಕೋಟಿಯಂತೆ ಪ್ರಸ್ತಕ ಆರ್ಥಿಕ ಸಾಲಿನವರೆಗೆ 30 ಕೋಟಿ ರೂಪಾಯಿ ನೀಡಲಾಗಿದೆ. ಹೆಚ್ಚುವರಿಯಾಗಿ ₹35 ಕೋಟಿ ಅನುದಾನ ಕೋರಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಗೃಹ ಇಲಾಖೆ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ಧಾರೆ.
ಪರಿಹಾರ ಧನ ಹೆಚ್ಚಳದ ಕೂಗು: ನಿರ್ದಿಷ್ಟ ಅಪರಾಧ ಪ್ರಕರಣಗಳಲ್ಲಿ ಜೀವ ಕಳೆದುಕೊಂಡವರಿಗೆ ಹಾಗೂ ಗಾಯಾಳುಗಳಿಗೆ ನೀಡಲಾಗುವ ಪರಿಹಾರ ಮೊತ್ತ ಹೆಚ್ಚಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. 2015ರಲ್ಲಿ ಸಂತ್ರಸ್ತರಿಗೆ ಪರಿಹಾರ ಮೊತ್ತವವನ್ನು ಸರ್ಕಾರ ಪರಿಷ್ಕರಿಸಿದ್ದು, ಇದುವರೆಗೆ ಹೆಚ್ಚಿಸಿಲ್ಲ. 40 ವರ್ಷದೊಳಗಿನವರು ಸಾವನ್ನಪ್ಪಿದರೆ 3 ಲಕ್ಷ ಹಾಗೂ 60 ವರ್ಷ ದಾಟಿದವರು ಜೀವ ಕಳೆದುಕೊಂಡರೆ ₹1 ಲಕ್ಷ ಪರಿಹಾರವಿದ್ದು, ಇದು ಸಾಲದಾಗುತ್ತಿದೆ. ಹೀಗಾಗಿ ಪರಿಹಾರ ಧನದಲ್ಲಿ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಆಯೋಗವು ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
'ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಇತ್ಯರ್ಥಗೊಳ್ಳುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಲಾಗುವ ಪರಿಹಾರವನ್ನು ಹಂತ-ಹಂತವಾಗಿ ನೀಡಲಾಗುತ್ತಿದೆ. ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಣ ಬಂದ ಬಳಿಕ ಬಾಕಿಯಿರುವ 982 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.