ವರದಿ - ಹೆಚ್ ಬಿ ಗಡ್ಡದ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಗೆ ವ್ಯಾಪಾರ ವಹಿವಾಟಿಗಾಗಿ ಅನ್ಯ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ನಿತ್ಯ ಸಾವಿರಾರು ಜನ ಆಗಮಿಸುತ್ತಾರೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಗೋಕುಲ ರಸ್ತೆಯ ಕೇಂದ್ರಿಯ ಹೊಸ ಬಸ್ ನಿಲ್ದಾಣ ನವೀಕರಣ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆ ಆಗಲಿದೆ.
23 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಪ್ರಾಥಮಿಕ ಹಂತದಲ್ಲಿ ಹೊಸ ಬಸ್ ನಿಲ್ದಾಣ ಈಗ ಸ್ಮಾರ್ಟ್ ಆಗಿ ಕಾಣುತ್ತಿದೆ. ಜೊತೆಗೆ ಪ್ರಯಾಣಿಕರಿಗೆ ನಾನಾ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿವೆ.
ಈ ಬಸ್ ನಿಲ್ದಾಣದ ಕಟ್ಟಡ ನಿರ್ಮಿಸಿ 23 ವರ್ಷಗಳಾಗಿದ್ದು, ಹೊರ ರಾಜ್ಯದ ಹಾಗೂ ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವ ಬಸ್‌ಗಳು ಇಲ್ಲಿ ಬಂದೇ ಹೋಗುತ್ತವೆ. ಆದರೆ ಇಲ್ಲಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಸರಿಯಾಗಿ ಆಸನಗಳು, ನೀರಿನ ಲಭ್ಯತೆ, ಶೌಚಾಲಯ ಹೀಗೆ ಅಗತ್ಯ ವ್ಯವಸ್ಥೆ ಇರಲಿಲ್ಲ. ಪ್ರವೇಶ ದ್ವಾರ ಆಕರ್ಷಕವಾಗಿಲ್ಲ. ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಆದರೆ ಇದೀಗ ನವೀಕರಣದ ಮೂಲಕ ಪ್ರಯಾಣಿಕರ ಸ್ನೇಹಿಯನ್ನಾಗಿಸುವ ಜೊತೆಗೆ ಬಸ್ ನಿಲ್ದಾಣಕ್ಕೆ ಹೊಸ ಲುಕ್ ನೀಡಲಾಗುತ್ತಿದೆ.

ಹೊಸ ಬಸ್ ನಿಲ್ದಾಣದಲ್ಲಿ ಏನೆಲ್ಲ ಇರಲಿದೆ? ಪ್ರತಿ ದಿನ ಈ ನಿಲ್ದಾಣದ ಮೂಲಕ ಸಾವಿರಾರು ಬಸ್‌ಗಳು ಸಂಚರಿಸುತ್ತಿದ್ದು, ಅದಕ್ಕೆ ಅನುಗುಣವಾಗಿ ಹೊಸ ಯೋಜನೆಯಲ್ಲಿ 53 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಬಸ್‌ಗಳ ಆಗಮನ ಮತ್ತು ನಿರ್ಗಮನಕ್ಕೂ ಸಮರ್ಪಕ ವ್ಯವಸ್ಥೆ, ನಗರ ಸಾರಿಗೆ ಬಸ್‌ಗಳಿಗೆ ಪತ್ಯೇಕ ಪ್ಲಾಟ್‌ಫಾರ್ಮ್ ಇರಲಿದ್ದು, ಟಿಕೆಟ್ ಕೌಂಟರ್ ಮೇಲ್ದರ್ಜೆಗೇರಿಸಲಾಗಿದೆ. ಸೌರ ವಿದ್ಯುತ್ ಉತ್ಪಾದನೆ, ಆಟೋ ಟ್ಯಾಕ್ಸಿಗೆ ಪ್ರತ್ಯೇಕ ಪಥ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ.

ಹಾಗೆಯೇ ನಿಲ್ದಾಣದ ಎರಡೂ ಬದಿಯಲ್ಲಿ ಪ್ರಯಾಣಿಕರು ಕಾಯುವ ಪ್ಲಾಟ್‌ಫಾರ್ಮ್ ನಿರ್ಮಾಣ, ಕುಳಿತುಕೊಳ್ಳಲು ಆಸನ, ಮುಖ್ಯ ಕಟ್ಟಡದ ಮುಂಭಾಗ ಅಂದಗೊಳಿಸುವುದು, ಕ್ಯಾನೋಪಿ ಅಪ್‌ಗ್ರೇಡ್ ಮಾಡುವುದು, ಬಸ್ ನಿಲ್ದಾಣದಲ್ಲಿ ಕಾಂಕ್ರೀಟಿಕರಣ, ಒಳಚರಂಡಿ, ವಿಐಪಿ ಲಾಂಜ್, ಕ್ಲಾಕ್ ರೂಮ್, ವಾಣಿಜ್ಯ ಮಳಿಗೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳು ಹೊಸ ಬಸ್ ನಿಲ್ದಾಣದಲ್ಲಿ ಇರಲಿವೆ.
ವಿಶೇಷವಾಗಿ ಮಳಿಗೆಗಳಿಗೆ ಪ್ರತ್ಯೇಕವಾಗಿ ಜಾಗದ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಈ ಮಳಿಗೆಯಲ್ಲಿ ವಸ್ತುಗಳು ಲಭ್ಯವಾಗಲಿವೆ. ಇನ್ನು, ಧಾರವಾಡದ ಸಿಬಿಟಿ ಬಸ್ ನಿಲ್ದಾಣವನ್ನು ಸಹ ನವೀಕರಣಗೊಳಿಸುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ದೊರಕಲಿದೆ.

ಅಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣ: ಈ ಕುರಿತಂತೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಅವರು ಕ್ಕೆ ಪ್ರತಿಕ್ರಿಯಿಸಿ, ಗೋಕುಲ್ ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಡಲ್ಟ್ ಸಹಯೋಗ ಹಾಗೂ ಸಂಸ್ಥೆಯ ಹಣಕಾಸು ನೆರವು ಪಡೆದುಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 23 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಈಗಷ್ಟೇ ಪರಿಶೀಲಿಸಿದ್ದೇವೆ. ಈಗಾಗಲೇ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸಿಟಿ ಬಸ್ಗಾಗಿ ಆಗಮನ ಮತ್ತು ನಿರ್ಗಮನ ಪ್ಲಾಟ್ಫಾರ್ಮ ಕೆಲಸ ಮುಗಿದಿದೆ. ಎರಡು ಕಡೆ ಬಸ್ ನಿಲ್ಲುವ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಲಾಗಿದೆ. ಬಸ್ ನಿಲ್ದಾಣದ ಮಂಭಾಗದಲ್ಲಿ ಸೌಂದರ್ಯ ಹೆಚ್ಚಿಸಲಾಗಿದೆ. ಆಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.