ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಮತ ಚಲಾಯಿಸಿದರು. ಪ್ರಧಾನಿ ಮೋದಿಗೆ ಜೊತೆಗೆಯಾಗಿ ಕೇಂದ್ರ ಸಚಿವ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್, ಜಿತೇಂದ್ರ ಸಿಂಗ್ ಮತ್ತು ಎಲ್ ಮುರುಗನ್ ಕೂಡ ಸಂಸತ್ ಭವನದಲ್ಲಿನ ವಸುಧಾ ಕೋಣೆ ಸಂಖ್ಯೆ 101ರಲ್ಲಿ ಮತ ಚಲಾಯಿಸಿದರು.
ಮತ ಚಲಾವಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, 2025ರ ಉಪ ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮತದಾನದ ಬೆನ್ನಲ್ಲೇ ಪ್ರಧಾನಿ ಮೋದಿ ಪ್ರವಾಹ ಸಂತ್ರಸ್ತ ಹಿಮಾಚಲ ಪ್ರದೇಶ ಮತ್ತು ಪಂಜಾಬ್ಗೆ ಭೇಟಿ ನೀಡಲಿದ್ದಾರೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮೇಘವಾಲ್, ಪ್ರಹ್ಲಾದ್ ಜೋಶಿ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ನಾಸರ್ ಹುಸೇನ್ ಕೂಡ ಮತದಾನದ ಆರಂಭದಲ್ಲೇ ತಮ್ಮ ಮತ ಚಲಾಯಿಸಿದರು.
92 ವರ್ಷದ ದೇವೇಗೌಡ ಅವರು ವೀಲ್ಚೇರ್ನಲ್ಲಿ ಬಂದು ಮತದಾನ ಮಾಡಿದರು, ಕೇಂದ್ರ ಸಚಿವ ನಿತೀನ್ ಗಡ್ಕರಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದು ಮತಗಟ್ಟೆ ನಿಗದಿಯಾಗಿರುವ ಕೋಣೆಯಲ್ಲಿ ವೋಟಿಂಗ್ ಮಾಡಿದರು.
ಧನಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ: ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಸಂಸತ್ತಿನ ಎರಡೂ ಸದನದ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿದ್ದು, ಸಂಸತ್ ಭವನದಲ್ಲಿ ಬೆಳಗ್ಗೆ 10 ರಿಂದ 5 ರವರೆಗೆ ಮತದಾನ ಸಾಗಲಿದೆ. ಸಂಜೆ 6 ಗಂಟೆ ಬಳಿಕ ಮತ ಎಣಿಕೆ ನಡೆಯಲಿದ್ದು, ಇದಾದ ಬಳಿಕ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಪ್ರಕ್ರಿಯೆಗಾಗಿ ಆಡಳಿತರೂಢ ಎನ್‌ಡಿಎ ಪಕ್ಷದಿಂದ ಅಧಿಕೃತ ಚುನಾವಣಾ ಏಜೆಂಟ್ ಆಗಿ ಕೇಂದ್ರ ಸಚಿವ ರಿಜಿಜು ಮತ್ತು ರಾಮ್ ಮೋಹನ್ ನಾಯ್ಡು ಹಾಗೂ ಶಿವಸೇನೆಯ ಸಂಸದ ಶ್ರೀಕಾಂತ್ ಶಿಂಧೆ ಅವರನ್ನು ನೇಮಕ ಮಾಡಲಾಗಿದೆ.
ಮತ ಚಲಾವಣೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ತಮ್ಮ ಅಭ್ಯರ್ಥಿಯ ಗೆಲುವಿನ ಭರವಸೆ ವ್ಯಕ್ತಪಡಿಸಿದರು.
ಸಂವಿಧಾನಕ್ಕಾಗಿ ಹೋರಾಟ ಎಂದ ಸುದರ್ಶನ್ ರೆಡ್ಡಿ: ಇಂಡಿಯಾ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ಮಾತನಾಡಿ, ಜನರ ಆತ್ಮಸಾಕ್ಷಿ ಎಚ್ಚರಿಸುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ ಇದು ಸಂವಿಧಾನಕ್ಕಾಗಿ ಹೋರಾಟ, ಇದು ಮುಂದುವರಿಯುತ್ತದೆ. ನನಗೆ ದೊರೆತ ಪ್ರೀತಿ ಮತ್ತು ನಾಗರಿಕ ಸಮಾಜದ ಪ್ರತಿಕ್ರಿಯೆಗಾಗಿ ನಾನು ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಉಪರಾಷ್ಟ್ರಪತಿ ಚುನಾವಣೆಗೆ 788 ಸದಸ್ಯರು ಮತ ಚಲಾಯಿಸುವ ಅಧಿಕಾರ ಹೊಂದಿದ್ದು, ರಾಜ್ಯಸಭೆಯಿಂದ 245 ಮತ್ತು ಲೋಕಸಭೆಯಿಂದ 543. ರಾಜ್ಯಸಭೆಯ 12 ನಾಮ ನಿರ್ದೇಶಿತ ಸದಸ್ಯರು ಸಹ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ರಹಸ್ಯ ಮತದಾನದ ಮೂಲಕ ಈ ಚುನಾವಣೆ ಸಾಗಲಿದೆ.
ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿ ಇರುವುದರಿಂದ ಸದಸ್ಯರ ಪ್ರಸ್ತುತ ಬಲ 781 ಆಗಿದೆ. ಬಹುಮತಕ್ಕೆ 391 ಸ್ಥಾನಗಳು ನಿಗದಿಯಾಗಿವೆ. ಎನ್‌ಡಿಎ 425 ಸಂಸದರನ್ನು ಹೊಂದಿದ್ದರೆ, ವಿರೋಧ ಪಕ್ಷವು 324 ಸಂಸದರ ಬೆಂಬಲವನ್ನು ಹೊಂದಿದೆ.