ಬೆಳಗಾವಿ: ಗರ್ಭಿಣಿ ಪತ್ನಿಯನ್ನು ಕಾರಿನಲ್ಲೇ ಕೊಂದು ಕಥೆ ಕಟ್ಟಿದ ವಕೀಲ ಪತಿ ಸೇರಿ ಮೂವರ ಬಂಧನ

ಬೆಳಗಾವಿ: ಗರ್ಭಿಣಿ ಪತ್ನಿಯನ್ನು ಕಾರಿನಲ್ಲೇ ಕೊಂದು ಕಥೆ ಕಟ್ಟಿದ ವಕೀಲ ಪತಿ ಸೇರಿ ಮೂವರ ಬಂಧನ
By Published : September 10, 2025 at 10:30 AM IST

ಚಿಕ್ಕೋಡಿ(ಬೆಳಗಾವಿ): "ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಹತ್ಯೆಗೈದ ಘಟನೆ ಚಿಕ್ಕೋಡಿಯ ಉಗಾರ್ ಬಿಕೆ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದ್ದು, ಪತಿ ಹಾಗು ಇನ್ನಿಬ್ಬರನ್ನು ಬಂಧಿಸಲಾಗಿದೆ" ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದರು. ಚೈತಾಲಿ (23) ಕೊಲೆಯಾದವರು.

ಎಸ್ಪಿ ಗುಳೇದ ಅವರು ಬೆಳಗಾವಿ ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪ್ರಕರಣದ ಪೂರ್ಣ ಮಾಹಿತಿ ನೀಡಿದರು.

"ಕಳೆದ ಭಾನುವಾರ (7-09-25) ರಾತ್ರಿ ಕಾಗವಾಡ ತಾಲೂಕಿನ ಉಗಾರ ಬಿ.ಕೆ.ಗ್ರಾಮದ ಮಹಿಳೆ ಚೈತಾಲಿ ಪ್ರದೀಪ್ ಕಿರಣಗಿ (23) ಎಂಬವರನ್ನು ಪತಿ ಪ್ರದೀಪ್ ಅಣ್ಣಸಾಬ್ ಕಿರಣಗಿ, ಸದ್ದಾಂ ಅಕ್ಬರ್ ಇಮಾಮ್ದಾರ್ ಮತ್ತು ರಾಜನ್ ಗಣಪತಿ ಕಾಂಬಳೆ ಸೇರಿ ಕೊಲೆಗೈದ ಆರೋಪದಡಿ ಅವರನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.

"ರಾತ್ರಿ ನಮ್ಮ ಕಾಗವಾಡ್ ಪಿಎಸ್ಐಗೆ ಒಂದು ಕರೆ ಬಂದಿತ್ತು. 'ನನ್ನ ಪತ್ನಿಗೆ ಅಪಘಾತವಾಗಿದೆ, ನೀವು ಸಹಾಯ ಮಾಡಿ. ನಾನು ಹೆಚ್ಚಿನ ಚಿಕಿತ್ಸೆಗಾಗಿ ಕಾಗವಾಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ' ಎಂದು ಕೊಲೆಯಾದ ಮಹಿಳೆಯ ಪತಿ ಪ್ರದೀಪ್ ತಿಳಿಸಿದ್ದ. ತಕ್ಷಣ ನಮ್ಮ ಓರ್ವ ಸಿಬ್ಬಂದಿ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಕಾಗವಾಡ ಆಸ್ಪತ್ರೆಯಲ್ಲಿ ಅವರು ಇರಲಿಲ್ಲ. ಹಾಗಾಗಿ ಪೊಲೀಸರು ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ, ನಾನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಬಂದಿದ್ದೇನೆ. ಪತ್ನಿ ಮರಣ ಹೊಂದಿದ್ದಾಳೆ. ನಮಗೆ ಕಾನೂನು ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಮಾಡಿಕೊಡಿ. ನಾವು ಮುಂದಿನ ಕಾರ್ಯ ಮಾಡುತ್ತೇವೆ ಎಂದು ಪದೇ ಪದೇ ನಮಗೆ ಕರೆ ಮಾಡುತ್ತಿದ್ದ" ಎಂದು ಎಸ್ಪಿ ತಿಳಿಸಿದರು.

"ಅಷ್ಟರೊಳಗೆ ಆತ ಹೇಳಿದ ಅಪಘಾತವಾದ ಸ್ಥಳ ಮತ್ತು ಅವನ ವಾಹನ ಪರಿಶೀಲನೆ ಮಾಡಲಾಗಿತ್ತು. ಆದರೆ ಆ ರೀತಿ ಏನೂ ಕಂಡುಬರಲಿಲ್ಲ. ಈ ಆಧಾರದ ಮೇಲೆ ನಮ್ಮ ಪೊಲೀಸರಿಗೆ ಸಂಶಯ ಬಂದಿತ್ತು. ಅಷ್ಟರಲ್ಲಿ ಮಹಾರಾಷ್ಟ್ರ ಮೀರಜ್ ಪೊಲೀಸರು ಕಾಗವಾಡ ಪೊಲೀಸರಿಗೆ ಈ ರೀತಿ ಪ್ರಕರಣ ಬಂದಿದೆ ಮೇಲ್ನೋಟಕ್ಕೆ ಇದು ಕೊಲೆಯಂತೆ ಕಾಣಿಸುತ್ತಿದೆ ಎಂದು ತಿಳಿಸುತ್ತಿದ್ದಂತೆ, ನಮ್ಮ ಪೊಲೀಸರು ಆರೋಪಿಗಳನ್ನು ಮತ್ತಷ್ಟು ವಿಚಾರಣೆ ಮಾಡಿದಾಗ ತಾವು ಮಾಡಿರುವ ತಪ್ಪನ್ನು ಬಾಯಿಬಿಟ್ಟಿದ್ದಾರೆ" ಎಂದು ಅವರು ಹೇಳಿದರು.

2 ಬಾರಿ ಕೊಲೆ ಯತ್ನ ವಿಫಲ: "ಪ್ರದೀಪ್​​ ಹೇಳಿದ ಕಥೆಗೂ ಮತ್ತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಕಂಡ ವಾಸ್ತವತೆಗೂ ಹೊಂದಾಣಿಕೆಯಾಗಿರಲಿಲ್ಲ. ಕೊಲೆ ಮಾಡಿ ಪದೇ ಪದೇ ಕತೆ ಕಟ್ಟುತ್ತಿದ್ದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, 'ನಾನೇ ಕಾರಿನಲ್ಲಿ ಕುಳಿತು ನನ್ನ ಹೆಂಡತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದೇನೆ. ಬಳಿಕ ಅಪಘಾತವೆಂದು ಬಿಂಬಿಸಿದೆವು' ಎಂದು ಪತಿ ಹೇಳಿದ್ದಾನೆ. ಇದಕ್ಕೂ ಹಿಂದೆ ಆಕೆಯ ಕೊಲೆಗೆ ಎರಡು ಸಲ ಪ್ರಯತ್ನ ಮಾಡಲಾಗಿತ್ತು. ಆಗ ಅದೃಷ್ಟವಶಾತ್​ ಬದುಕುಳಿದಿದ್ದರು" ಎಂದು ಮಾಹಿತಿ ನೀಡಿದರು.

ಕೊಲೆಗೆ ಕಾರಣವೇನು?:"ಚೈತಾಲಿ ಮತ್ತು ಪ್ರದೀಪ್ ಅವರದ್ದು ಪ್ರೇಮ ವಿವಾಹ. ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಚೈತಾಲಿ ಆರು ತಿಂಗಳ ಗರ್ಭಿಣಿಯಾಗಿದ್ದಾಗ ಪ್ರದೀಪ್​ಗೆ ಮತ್ತೊಂದು ಮಹಿಳೆಯ ಜೊತೆಗೆ ಪ್ರೇಮಾಂಕುರವಾಗಿದೆ. ಆದರೆ ಆ ಮಹಿಳೆಗೆ ಈತನಿಗೆ ಈಗಾಗಲೇ ಮದುವೆಯಾಗಿದೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ ಆರೋಪಿ ತನ್ನ ಪತ್ನಿಗೆ ಮಗು ಹುಟ್ಟಿದರೆ ಎಲ್ಲ ವಿಚಾರ ಗೊತ್ತಾಗುತ್ತದೆ ಎಂದು ಗರ್ಭಿಣಿ ಹೆಂಡತಿಯನ್ನು ಕಾರಿನಲ್ಲಿಯೇ ಹೊಡೆದು ಕೊಂದು, ನಾಟಕವಾಡಿದ್ದಾನೆ. ಪ್ರದೀಪ್ ವೃತ್ತಿಯಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ. ಸದ್ಯ ಮೂವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳಿದ್ದು ಅವರನ್ನೂ ಆದಷ್ಟು ಬೇಗ ಬಂಧಿಸುತ್ತೇವೆ" ಎಂದು ಎಸ್ಪಿ ತಿಳಿಸಿದರು.

📚 Related News