ನೇಪಾಳಕ್ಕೆ ಪ್ರವಾಸ ಹೋದ 39 ಕನ್ನಡಿಗರು ಸುರಕ್ಷಿತ: ಸಿಎಂ ಸಿದ್ದರಾಮಯ್ಯ

ನೇಪಾಳಕ್ಕೆ ಪ್ರವಾಸ ಹೋದ 39 ಕನ್ನಡಿಗರು ಸುರಕ್ಷಿತ: ಸಿಎಂ ಸಿದ್ದರಾಮಯ್ಯ
By Published : September 10, 2025 at 7:35 AM IST

ಬೆಂಗಳೂರು: ಹಿಂಸಾಚಾರಪೀಡಿತ ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಇಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಮಂಗಳವಾರ, ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಶಾಲಿನಿ ರಜನೀಶ್ ಅವರಿಗೆ ಸಿಎಂ ಸೂಚಿಸಿದ್ದರು.

ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಕನ್ನಡಿಗರ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ‌ ಸೂಚನೆ ನೀಡಿದ್ದಾರೆ. ನೇಪಾಳಕ್ಕೆ ಪ್ರವಾಸ ಹೋಗಿರುವ 39 ಮಂದಿ ಕನ್ನಡಿಗರು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ.

ಸಾಮಾಜಿಕ ಜಾಲತಾಣಗಳ ನಿಷೇಧ, ಭ್ರಷ್ಟಾಚಾರ ಮತ್ತು ಹಗರಣಗಳ ವಿರುದ್ಧ ನೇಪಾಳದಲ್ಲಿ ಯುವಜನರು ಎರಡು ದಿನದಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದ್ದು, ದೇಶದೆಲ್ಲೆಡೆ ಪ್ರಕ್ಷುಬ್ಧ ವಾತಾವರಣವಿದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ತೆರವು: ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿದ್ದರ ವಿರುದ್ಧ ಯುವಜನತೆ ಸಿಡಿದೆದ್ದು ಆರಂಭಿಸಿದ ಪ್ರತಿಭಟನೆ ನೋಡನೋಡುತ್ತಿದ್ದಂತೆ ಭಾರೀ ಹಿಂಸೆಗೆ ತಿರುಗಿ ಕನಿಷ್ಠ 19 ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಮಂಗಳವಾರ ಕಂಡಕಂಡಲ್ಲಿ ಬೆಂಕಿ ಹಚ್ಚಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಗೆ ನಲುಗಿದ ನೇಪಾಳ ಸರ್ಕಾರ ನಿಷೇಧ ಹಿಂತೆಗೆದುಕೊಂಡಿದೆ.

ಗಂಭೀರ ಪರಿಸ್ಥಿತಿಯ ನಡುವೆ ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ, ಗೃಹ ಸಚಿವ ರಮೇಶ್ ಲೇಖಕ್, ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಹಾಗೂ ಕೆಲವು ಕ್ಯಾಬಿನೆಟ್​ ಸಚಿವರು ಕೂಡಾ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಓಲಿ ಅವರ ರಾಜೀನಾಮೆಗೂ ಕೆಲವು ಗಂಟೆಗೂ ಮುನ್ನ, ಸೋಮವಾರ ನಡೆದ ಸಾವುನೋವುಗಳಿಗೆ ಹೊಣೆ ಹೊತ್ತುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಬಾಲ್ಕೋಟ್‌ನಲ್ಲಿರುವ ಓಲಿ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದರು.

ಸರ್ಕಾರಿ ವಿರೋಧಿ ಪ್ರತಿಭಟನೆಗಳಿಂದ ನೇಪಾಳ ಗೊಂದಲಕ್ಕೆ ಸಿಲುಕಿದ ಬೆನ್ನಲ್ಲೇ, ಭಾರತ ಈ ಪರಿಸ್ಥಿತಿಯನ್ನು 'ಅತ್ಯಂತ ಸೂಕ್ಷ್ಮವಾಗಿ' ಗಮನಿಸಬೇಕು ಎಂದು ಮಂಗಳವಾರ ಹಲವು ಮಾಜಿ ಭಾರತೀಯ ರಾಯಭಾರಿಗಳು ಸಲಹೆ ನೀಡಿದ್ದಾರೆ. ಭಾರತದ ನೆರೆಹೊರೆ 'ವಾಸ್ತವವಾಗಿ ಪ್ರಕ್ಷುಬ್ಧವಾಗಿದೆ' ಎಂಬುದು ಆರೋಗ್ಯಕರ ಸಂಕೇತವಲ್ಲ ಎಂದು ಕೆಲವರು ಒತ್ತಿ ಹೇಳಿದ್ದಾರೆ.

"ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಘಟನಾವಳಿಗಳ ನಂತರ ಇದು ಸಂಭವಿಸಿದೆ. ನೆರೆಹೊರೆಯ ದೇಶಗಳಲ್ಲಿ ಆಡಳಿತಗಳು ಕುಸಿದು, ನಾಯಕರು ಪಲಾಯನ ಮಾಡುವ ಸರಣಿ ಘಟನೆಗಳು ನಡೆಯುತ್ತಿವೆ. ಇದು ಖಂಡಿತವಾಗಿಯೂ ಭಾರತಕ್ಕೆ ಆರೋಗ್ಯಕರ ಸಂಕೇತವಲ್ಲ" ಎಂಬ ಅಭಿಪ್ರಾಯವನ್ನು ಹಿರಿಯ ರಾಜತಾಂತ್ರಿಕ ವೇಣು ರಾಜಮಣಿ ವ್ಯಕ್ತಪಡಿಸಿದ್ದಾರೆ.

📚 Related News