ಯಲ್ಲಾರೆಡ್ಡಿಪೇಟೆ (ತೆಲಂಗಾಣ) : ಯಲ್ಲಾರೆಡ್ಡಿಪೇಟೆ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಬಾಲ್ಯಮಿತ್ರ ಪ್ರತಿಷ್ಠಾನ ಸ್ಥಾಪಿಸಿ ಕಳೆದ ಎಂಟು ವರ್ಷಗಳಿಂದ ಸಮಾಜ ಸೇವೆಯ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಯಿಂದಾಗಿ ಇತರರಿಗೆ ಸ್ಪೂರ್ತಿದಾಯಕ ಮಾದರಿಯಾಗಿ ನಿಂತಿದ್ದಾರೆ. 'ಎಲ್ಲರೂ ಒಳ್ಳೆಯವರಾಗಿರಬೇಕು ಮತ್ತು ನಾವು ಅದರ ಭಾಗವಾಗಬೇಕು' ಎಂಬ ಘೋಷಣೆಯೊಂದಿಗೆ ಪ್ರತಿಷ್ಠಾನವು ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದನ್ನು ಮುಂದುವರೆಸಿದೆ.
2017 ರಲ್ಲಿ ಪ್ರತಿಷ್ಠಾನ ಸ್ಥಾಪನೆ : 2017ರಲ್ಲಿ ಯೆಲ್ಲಾರೆಡ್ಡಿಪೇಟೆ ಸರ್ಕಾರಿ ಪ್ರೌಢಶಾಲೆಯ 1994 – 95ರ ಹತ್ತನೇ ತರಗತಿಯ ಬ್ಯಾಚ್‌ನ ಸುಮಾರು 60 ವಿದ್ಯಾರ್ಥಿಗಳು ಸಭೆ ಸೇರಿದ್ದರು. ಈ ಗುಂಪಿನಲ್ಲಿ ದಿನಗೂಲಿ ಕಾರ್ಮಿಕರಿಂದ ಸರ್ಕಾರಿ ನೌಕರರವರೆಗೆ ವಿವಿಧ ಹಂತಗಳ ಜನರು ಇದ್ದರು. ಸಭೆಯಲ್ಲಿ ಸಾಮೂಹಿಕ ಸಾಮಾಜಿಕ ಸೇವೆಯ ಮೂಲಕ ತಮ್ಮ ಸ್ನೇಹವನ್ನು ಜೀವಂತವಾಗಿಡಲು ಅವರು ನಿರ್ಧರಿಸಿದರು.
ಅಂದಿನಿಂದ ಅವರು ಪ್ರತಿಷ್ಠಾನದ ಮೂಲಕ ಕಲ್ಯಾಣ ಚಟುವಟಿಕೆಗಳಿಗೆ ಸುಮಾರು ₹13 ಲಕ್ಷ ಖರ್ಚು ಮಾಡಿದ್ದಾರೆ, ಅಗತ್ಯ ಇರುವವರಿಗೆ ಸಮಯೋಚಿತ ಸಹಾಯ ನೀಡಿದ್ದಾರೆ. ಸಂಕಷ್ಟದ ಸಮಯ ಬಂದಾಗಲೆಲ್ಲಾ ಪ್ರತಿಷ್ಠಾನದ ವಾಟ್ಸ್ಆ್ಯಪ್ ಗುಂಪಿನಲ್ಲಿ ಸಂದೇಶ ಕಳುಹಿಸಿದ್ದಾರೆ. ಸದಸ್ಯರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣಕಾಸಿನ ನೆರವು ನೀಡಲು ಮುಂದೆ ಬರುತ್ತಾರೆ ಮತ್ತು ಲಭ್ಯ ಇರುವ ಸದಸ್ಯರು ಕಷ್ಟದಲ್ಲಿರುವ ಕುಟುಂಬಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಬೆಂಬಲವನ್ನು ನೀಡುತ್ತಾರೆ.
ಈ ಒಗ್ಗಟ್ಟಿನ ಮನೋಭಾವವು ಈ ಧ್ಯೇಯವನ್ನು ಜೀವಂತವಾಗಿರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಚಂದೂಪಟ್ಲ ಲಕ್ಷ್ಮ ರೆಡ್ಡಿ ಹೇಳಿದ್ದಾರೆ. ಈ ಪ್ರತಿಷ್ಠಾನಕ್ಕೆ ಅನಿವಾಸಿ ಭಾರತೀಯ ಸದಸ್ಯರಾದ ದಸ್ತಗಿರಿ, ಸೃಜನ್ ರೆಡ್ಡಿ, ಶ್ರೀರಾಮ್, ಸತೀಶ್, ಖ್ಯಾತ ವೈದ್ಯ ಡಾ. ವಡ್ನಾಳ ಶ್ರೀನಿವಾಸ್, ಆರ್‌ಎಂಪಿ ಹೈಮದ್ ಮತ್ತು ವೀರನಪಲ್ಲಿ ಉಪ ತಹಶೀಲ್ದಾರ್ ಎಲುಸಾನಿ ಪ್ರವೀಣ್ ಕುಮಾರ್ ಅವರು ತಮ್ಮ ಬಲವಾದ ಬೆಂಬಲ ನೀಡುತ್ತಿದ್ದಾರೆ.
ಅಗತ್ಯ ಇರುವವರಿಗೆ ಕೆಲವು ಸೇವೆಗಳು : ಅವರ ಸ್ನೇಹಿತ ಗೋರಿತ್ಯಾಲ ಕೃಷ್ಣ ಹೃದಯಾಘಾತದಿಂದ ನಿಧನರಾದಾಗ ಪ್ರತಿಷ್ಠಾನವು ಅವರ ಮಕ್ಕಳ ಹೆಸರಿನಲ್ಲಿ ₹1.50 ಲಕ್ಷ ಠೇವಣಿ ಇಟ್ಟಿತ್ತು ಮತ್ತು ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ₹12,000 ಖರ್ಚು ಮಾಡಿತು.
ಗ್ರಾಮದ ಶಾಂತಾ ಮತ್ತು ದಿವ್ಯಾಂಗುರ ಲಲಿತಾ ಅವರಿಗೆ ದಿನಸಿಯೊಂದಿಗೆ ₹30,000 ನೀಡಲಾಯಿತು. ಮೋಚೆ ರಮೇಶ್ ಅವರಿಗೆ ಶ್ರೀಗಂಧ ತಯಾರಿಸುವ ವ್ಯವಹಾರ ಪ್ರಾರಂಭಿಸಲು ₹60,000 ಆರ್ಥಿಕ ಸಹಾಯ ಮಾಡುವ ಮೂಲಕ ಅವರ ನೆರವಿಗೆ ನಿಂತು ಮಾನವೀಯತೆ ಮೆರೆಯಿತು.
ಯೆಲ್ಲಾರೆಡ್ಡಿಪೇಟೆ, ರಾಚರ್ಲ ಬೊಪ್ಪಾಪುರ, ರಾಚರ್ಲ ಗೊಲ್ಲಪಲ್ಲಿ ಮತ್ತು ಇತರ ಗ್ರಾಮಗಳಲ್ಲಿ ಬಡ ಹುಡುಗಿಯರ ವಿವಾಹಗಳಿಗೆ ₹50,000 ಮೌಲ್ಯದ ವಸ್ತುಗಳನ್ನು ವಿತರಿಸುವ ಮೂಲಕ ಇತರರಿಗೆ ಮಾದರಿಯಾಯಿತು. ಮೋಹನ್ ಎಂಬುವವರು ಆಟೋ ಖರೀದಿಸಲು ₹60,000 ಸಹಾಯ ಮಾಡಿ ಅವರ ಜೀವನಕ್ಕೆ ದಾರಿ ದೀಪವಾಯಿತು.
ಸ್ಥಳೀಯ ಪ್ರೌಢಶಾಲೆಗೆ ₹60,000 ಮೌಲ್ಯದ ಪ್ರೊಜೆಕ್ಟರ್ ದೇಣಿಗೆ ನೀಡುವ ಮೂಲಕ ಮಕ್ಕಳ ಆಧುನಿಕ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಯಿತು. ಅಷ್ಟೇ ಅಲ್ಲ 30 ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್‌ಗಳನ್ನು ನೀಡಿ ಅವರ ಮುಂದಿನ ಪ್ರಗತಿಗೆ ಮುನ್ನುಡಿ ಬರೆದಿದೆ ಈ ಬಳಗ. ಮುಸ್ತಾಬಾದ್ ತಾಲೂಕಿನ ಆವಣೂರಿನ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗೆ ₹22,000 ನೀಡುವ ಮೂಲಕ ಆರೋಗ್ಯ ಭಾಗ್ಯವನ್ನ ನೀಡಲಾಗಿದೆ.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ 300 ಬಡ ಕುಟುಂಬಗಳಿಗೆ ₹1,000 ನಗದು, 10 ಕೆಜಿ ಅಕ್ಕಿ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಪ್ರತಿಷ್ಠಾನವು ಇಂತಹ ಅನೇಕ ನಿಸ್ವಾರ್ಥ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದು, ಬಲವಾದ ಸ್ನೇಹವು ಸಾಮಾಜಿಕ ಬದ್ಧತೆಯೊಂದಿಗೆ ಸೇರಿಕೊಂಡಾಗ ಜೀವನವನ್ನು ಪರಿವರ್ತಿಸುತ್ತದೆ ಮತ್ತು ಸಮುದಾಯಗಳಿಗೆ ಭರವಸೆಯನ್ನು ತರುತ್ತದೆ ಎಂಬುದನ್ನು ಸಾಬೀತು ಪಡಿಸುತ್ತದೆ.