ದೀರ್ ಅಲ್-ಬಲಾಹ್: ಗಾಜಾ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಮುಂದುವರೆಸಿದೆ. ಸೋಮವಾರ ಇಲ್ಲಿನ ಬಹುಮಹಡಿ ಕಟ್ಟಡದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸೇನೆ, ಹಮಾಸ್ ವಶದಲ್ಲಿರುವ 12 ಅಂತಸ್ತಿನ ಕಟ್ಟಡದ ಮೇಲೆ ಬಾಂಬ್ ಹಾಕಿರುವುದಾಗಿ ಮಾಹಿತಿ ನೀಡಿದೆ.
ಕಳೆದ ಕೆಲವು ದಿನಗಳಿಂದ ಗಾಜಾದಲ್ಲಿನ ಬಹು ಅಂತಸ್ತಿನ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ದಾಳಿಗೂ ಮುನ್ನ ನಗರದ ಸುಮಾರು 10 ಲಕ್ಷ ನಿವಾಸಿಗಳಿಗೆ ಸ್ಥಳ ತೊರೆಯುವಂತೆ ಸೂಚಿಸಿತ್ತು. ಇನ್ನೊಂದೆಡೆ, ಗಾಜಾದಲ್ಲಿ ಭೀಕರ ಕ್ಷಾಮ ತಲೆದೋರಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಜೆರುಸೆಲಂನಲ್ಲಿ ಇಬ್ಬರು ಪ್ಯಾಲೆಸ್ತೇನಿಯನ್ ಬಂದೂಕುಧಾರಿಗಳು ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿದ್ದು, ಆರು ಜನ ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಳೆದೊಂದು ವರ್ಷದಲ್ಲಿ ಇಸ್ರೇಲ್ನಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಈ ಘಟನೆಯ ಬೆನ್ನಲ್ಲೇ ಇಸ್ರೇಲ್ನಾದ್ಯಂತ ಮತ್ತು ವಶಕ್ಕೆ ಪಡೆದಿರುವ ವೆಸ್ಟ್ ಬ್ಯಾಂಕ್ನಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 65 ಜನರು ಸಾವನ್ನಪ್ಪಿದ್ದು, 320 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸೋಮವಾರ ಗಾಜಾ ನಗರದಲ್ಲಿ ಉಗ್ರರ ಗುಂಪೊಂದು ಟ್ಯಾಂಕ್‌ಗೆ ಸ್ಫೋಟಕ ಸಾಧನ ಎಸೆದ ಪರಿಣಾಮ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾನೆೆ. ಇಬ್ಬರು ಉಗ್ರರು ಗುಂಡು ಹಾರಿಸಿದ್ದಾರೆ ಎಂದು ಮಾಹಿತಿ ನೀಡಿದೆ.
ಇಸ್ರೇಲ್ ಈಗಾಗಲೇ ಹಮಾಸ್‌ನ ಬಹುತೇಕ ಪ್ರಮುಖ ನಾಯಕರನ್ನು ಹತ್ಯೆಗೈದಿದ್ದು, ಸೇನಾ ಸಾಮರ್ಥ್ಯವನ್ನು ನಾಶಪಡಿಸಿದೆ. ಆದಾಗ್ಯೂ ಗುಂಪುಗಳು ಅಲ್ಲಲ್ಲಿ ಗೆರಿಲ್ಲಾ ರೀತಿಯ ದಾಳಿಗಳನ್ನು ನಡೆಸುತ್ತಿವೆ. 450ಕ್ಕೂ ಹೆಚ್ಚಿನ ಇಸ್ರೇಲಿ ಪಡೆಗಳು ಇಲ್ಲಿಯವರೆಗೆ ಕೊಲ್ಲಲ್ಪಟ್ಟಿವೆ.
ಅಮೆರಿಕ ಅಂತಿಮ ಎಚ್ಚರಿಕೆ: ಟ್ರಂಪ್ ಅವರ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್‌ಕಾಫ್ಕೊ ಕೊನೆಯ ಎಚ್ಚರಿಕೆ ಪ್ರಸ್ತಾವನೆ ಮಂಡಿಸಿದ್ದು, ಮಾತುಕತೆಯ ಮೂಲಕ ಯುದ್ಧ ಕೊನೆಗೊಳಿಸಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಕದನ ವಿರಾಮದ ಕುರಿತು ತಿಳಿಸಿದ್ದಾರೆ. ಬಳಿಕ ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.
ಅಮೆರಿಕ ಪ್ರಸ್ತಾಪ ತಿರಸ್ಕರಿಸಿದ ಹಮಾಸ್: ಈ ಪ್ರಸ್ತಾಪದ ಕುರಿತು ಮಾತನಾಡಿರುವ ಹಮಾಸ್‌ನ ಹಿರಿಯ ಅಧಿಕಾರಿ ಬಾಸ್ಸೆಮ್ ನಯೀಮ್, ಮೊದಲ ದಿನವೇ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಹಮಾಸ್ ನಿಶ್ಯಸ್ತ್ರಗೊಳಿಸಲು ಕರೆ ನೀಡಲಾಗಿದೆ. ಗಾಜಾದಲ್ಲಿ ಇಸ್ರೇಲ್ಗೆ ಒಪ್ಪಿತವಾದ ಸರ್ಕಾರವನ್ನು ಸ್ಥಾಪಿಸಲು ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಷರತ್ತುಗಳನ್ನು ವಿಧಿಸುವುದರಿಂದ ಇದನ್ನು ತಿರಸ್ಕರಿಸಲಾಗುವುದು ಎಂದಿದ್ದಾರೆ.