ವಿಶೇಷ ವರದಿ: ವಿನೋದ್ ಪುದು
ಮಂಗಳೂರು(ದಕ್ಷಿಣ ಕನ್ನಡ): ವಯಸ್ಸಾದಂತೆ ಬಹುತೇಕ ಜನರಿಗೆ ಕಾಡುವ ಸಮಸ್ಯೆ ಮಂಡಿ ನೋವು. ಇದಕ್ಕೆ ಚಿಕಿತ್ಸೆಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇತ್ತೀಚೆಗೆ ರೊಬೊಟಿಕ್ ಮೂಲಕ ಮಂಡಿನೋವಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಾದರೂ ಇದೂ ಕೂಡ ವಿಶೇಷ ಪರಿಣಾಮ ಬೀರುತ್ತಿಲ್ಲ.
ಆದರೆ ಅಮೆರಿಕದಲ್ಲಿ ಯಶಸ್ವಿಯಾಗಿರುವ ಸ್ಕೈವಾಕರ್ ರೊಬೋಟಿಕ್ ಮೂಲಕ ನಡೆಸಲಾಗುವ ಮಂಡಿ ನೋವು ಶಸ್ತ್ರಚಿಕಿತ್ಸೆ, ಮಂಡಿ ನೋವು ಗುಣಪಡಿಸುವುದರೊಂದಿಗೆ ನೈಜ ಅನುಭವವನ್ನೂ ನೀಡುತ್ತದೆ. ಇಂತಹ ಒಂದು ಕ್ರಾಂತಿಕಾರಕ ಶಸ್ತ್ರಚಿಕಿತ್ಸಾ ಯೋಜನೆಯನ್ನು ದಕ್ಷಿಣ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಯೆನೆಪೋಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.
ಏನಿದು ಸ್ಕೈವಾಕರ್?: ಇದುಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನ 'ಸ್ಕೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್'. ಇವೆರಡೂ ಸೇರಿಕೊಂಡು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಸಬ್-ಮಿಲಿಮೀಟರ್ ಮಟ್ಟದ ನಿಖರತೆ ನೀಡುತ್ತವೆ.

ಈ ತಂತ್ರಜ್ಞಾನವು ರೋಗಿಯ ನಿರ್ದಿಷ್ಟ ಅನಾಟಮಿಯನ್ನು ಆಧರಿಸಿ, ಪ್ರತಿಯೊಬ್ಬರಿಗೂ ಅವರಿಗೆ ಅಗತ್ಯವಿರುವ ರೀತಿಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಪೂರೈಸುತ್ತದೆ. ಅದರಿಂದಾಗಿ ಮಂಡಿ ಬದಲಾವಣೆಯ ಬಳಿಕ ರೋಗಿಗಳು ಬಹಳ ಬೇಗ ಚೇತರಿಸಿಕೊಂಡು, ಸುದೀರ್ಘ ಅವಧಿಯವರೆಗೆ ಯಾವುದೇ ನೋವಿಲ್ಲದೆ ಮೊದಲಿನಂತೆ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ.

ದೀರ್ಘ ನಡಿಗೆ, ಮೆಟ್ಟಿಲು ಹತ್ತಿ ಇಳಿಯುವುದು, ಕುಳಿತು-ಮೇಲೇಳುವುದು ಹೀಗೆ ಪ್ರತಿಯೊಂದು ಕೆಲಸವನ್ನೂ ಮೊದಲಿನಂತೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಈ ಶಸ್ತ್ರಚಿಕಿತ್ಸೆ ನೀಡುತ್ತದೆ. ಸಾಧಾರಣವಾಗಿ ಮಂಡಿ ನೋವು ಶಸ್ತ್ರಚಿಕಿತ್ಸೆ ವೇಳೆ ಮಂಡಿ ಚಿಪ್ಪು ಅಳವಡಿಸಿದರೆ, ಅದು ಮನುಷ್ಯನ ನೈಜ ಮಂಡಿಚಿಪ್ಪುವಿನಂತೆ ಕಾರ್ಯನಿರ್ವಹಿಸಲು ಅಸಾಧ್ಯ. ಆದರೆ ಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಅನ್ನು ಅಳವಡಿಸಿದರೆ ಅದು ಮನುಷ್ಯನಿಗೆ ನೈಜ ಮಂಡಿಚಿಪ್ಪುವಿನ ನಿಖರತೆಯನ್ನು ನೀಡುತ್ತದೆ. ಇದನ್ನು ಸ್ಕೈವಾಕರ್ ರೊಬೊಟಿಕ್ ಸಿಸ್ಟಮ್ ಮೂಲಕ ಅಳವಡಿಸಲಾಗುತ್ತದೆ.
ಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಜೊತೆಗೆ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಂಡಿರುವ ಜಗತ್ತಿನ ಏಕೈಕ ರೊಬೊಟಿಕ್ ವ್ಯವಸ್ಥೆ ಸ್ಕೈವಾಕರ್ ರೊಬೊಟಿಕ್ ಸಿಸ್ಟಮ್. ಮಂಡಿ ಜೋಡಣೆಯಲ್ಲಿ ಸರ್ಜನ್ಗಳಿಗೆ ಇದು ಸಬ್-ಮಿಲಿಮೀಟರ್ನಷ್ಟು ನಿಖರತೆಯನ್ನು ಒದಗಿಸುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ವೇಳೆ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ರಿಯಲ್ ಟೈಮ್ ದತ್ತಾಂಶಗಳನ್ನು ನೀಡುತ್ತದೆ. ಹೀಗಾಗಿ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ಮತ್ತು ಕರಾರುವಾಕ್ಕಾಗಿ ನಡೆಸಲು ಅನುಕೂಲವಾಗುತ್ತದೆ. ಪರಿಣಾಮ, ರೋಗಿಗಳಿಗೆ ಅತ್ಯುತ್ತಮ ಫಲಿತಾಂಶ ಲಭಿಸುತ್ತದೆ.
ಜಾಗತಿಕವಾಗಿ ಇಂದು ಆರ್ಥೋಪೆಡಿಕ್ಸ್ನಲ್ಲಿ ರೊಬೊಟಿಕ್ ತಂತ್ರಜ್ಞಾನಗಳನ್ನು ಹೆಚ್ಚೆಚ್ಚು ಬಳಸಲಾಗುತ್ತಿದೆ. ಅಮೆರಿಕದಲ್ಲಿ ಶೇ.40ಕ್ಕೂ ಹೆಚ್ಚು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ರೊಬೊಟಿಕ್ ಮಾದರಿಯಲ್ಲಿ ನಡೆಯುತ್ತವೆ. ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ರೋಗಿಗಳಿಗೆ ಹಾಗೂ ಸರ್ಜನ್ಗಳಿಗೆ ರೊಬೊಟಿಕ್ ವ್ಯವಸ್ಥೆಯಲ್ಲಿ ಹೆಚ್ಚಿನ ನಿಖರತೆ, ಅತಿ ಕಡಿಮೆ ವೈಫಲ್ಯದ ಪ್ರಮಾಣ, ವೇಗವಾಗಿ ಗುಣಮುಖರಾಗುವುದು ಮುಂತಾದ ಅನುಕೂಲಗಳು ಲಭಿಸುತ್ತಿವೆ. ಯೆನೆಪೋಯದಲ್ಲಿ ಭಾರತದಲ್ಲೇ ಮೊದಲ ಬಾರಿ ಮಂಡಿನೋವಿನ ರೋಗಿಗಳು ಈ ಅನುಭವವನ್ನು ಪಡೆಯಲಿದ್ದಾರೆ.
ಉತ್ತಮ ಇಂಪ್ಲಾಂಟ್ ಆಯ್ಕೆ ಕೂಡ ರೊಬೊಟಿಕ್ ಸರ್ಜರಿಯಷ್ಟೇ ಮುಖ್ಯ: ಈ ಬಗ್ಗೆ ಮಾತನಾಡಿದ ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ಡಾ.ಮುಕೇಶ್ ಪಾರ್ಮರ್ ಅವರು, "ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು ಉತ್ತಮ ಇಂಪ್ಲಾಂಟ್ ಆಯ್ಕೆ ಮಾಡಿಕೊಳ್ಳುವುದು ಕೂಡ ರೊಬೊಟಿಕ್ ಸರ್ಜರಿಯಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೃತಕ ಮಂಡಿಯು ರೋಗಿಯ ದೇಹದಲ್ಲಿ ಜೀವನಪೂರ್ತಿ ಇರುತ್ತದೆ" ಎಂದರು.
"ಎವೊಲ್ಯೂಷನ್ ಮೀಡಿಯಲ್ ಪೈವೊಟ್ ಮಂಡಿಯು ಶೇ.95ರಷ್ಟು ರೋಗಿಗಳಿಗೆ ತೃಪ್ತಿ ತಂದಿದೆ. ಶೇ.98.8ರಷ್ಟು ರೋಗಿಗಳಲ್ಲಿ 17 ವರ್ಷಕ್ಕೂ ಹೆಚ್ಚು ಅವಧಿಯವರೆಗೆ ಬಾಳಿಕೆ ಬಂದಿದೆ. ಜಾಗತಿಕವಾಗಿ ಇದನ್ನು ಅಳವಡಿಸಿಕೊಂಡ ಶೇ.80ರಷ್ಟು ರೋಗಿಗಳು ತಮಗೆ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ಆಗಿದೆ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಸ್ಕೈವಾಕರ್ ಜೊತೆಗೆ ಸೇರಿದರೆ ಇದು ಇನ್ನೂ ಉತ್ತಮ ಫಲಿತಾಂಶ ನೀಡುತ್ತದೆ. ಶಸ್ತ್ರಚಿಕಿತ್ಸೆ ನಡೆಸುವ ಸರ್ಜನ್ಗಳಿಗೆ ಹೆಚ್ಚು ನಿಖರ ಸರ್ಜರಿ ನಡೆಸಲು ಹಾಗೂ ರೋಗಿಗಳಿಗೆ ಅತ್ಯುತ್ತಮ ಫಲಿತಾಂಶ ಪಡೆಯಲು ಇದು ಸಹಕಾರಿಯಾಗುತ್ತದೆ. ಯೆನೆಪೋಯದಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಇದನ್ನು ಆರಂಭಿಸುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ. ಏಷ್ಯಾದಲ್ಲಿ ಚೀನಾದಲ್ಲಿ ಈ ವ್ಯವಸ್ಥೆ ಇದ್ದು, ದಕ್ಷಿಣ ಏಷ್ಯಾದಲ್ಲಿ ಇದು ಪ್ರಥಮ ಅಳವಡಿಕೆಯಾಗಿದೆ" ಎಂದು ವಿವರಿಸಿದರು.
ಯೆನೆಪೋಯ ಆಸ್ಪತ್ರೆಯ ಮುಖ್ಯ ಆರ್ಥೋಪೆಡಿಕ್ ಹಾಗೂ ಮಂಡಿ ಬದಲಾವಣೆ ಸರ್ಜನ್ ಡಾ.ದೀಪಕ್ ರೈ ಅವರು ಭಾರತದ ಮೊದಲ ಸ್ಕೈವಾಕರ್ ಸರ್ಜರಿಯನ್ನು ಯೆನೆಪೋಯದಲ್ಲಿ ಈಗಾಗಲೇ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಸ್ಕೈವಾಕರ್ ರೊಬೊಟಿಕ್ ವ್ಯವಸ್ಥೆಯು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ವೇಳೆ ಮಂಡಿಯ ಮರುನಿರ್ಮಾಣಕ್ಕೆ ಸಂಬಂಧಿಸಿದ ಹಾಗೂ ಲಿಗಮೆಂಟ್ ಬ್ಯಾಲೆನ್ಸಿಂಗ್ಗೆ ಸಂಬಂಧಿಸಿದ ರಿಯಲ್ ಟೈಮ್ ದತ್ತಾಂಶಗಳನ್ನು ನೀಡುತ್ತದೆ. ಎವೊಲ್ಯೂಷನ್ ಸಂಸ್ಥೆಯ ಮೀಡಿಯಲ್ ಪೈವೊಟ್ ವಿನ್ಯಾಸವು ಈ ವ್ಯವಸ್ಥೆಗೆ ಸಂಬಂಧಿಸಿದ ಪೇಟೆಂಟ್ ಹೊಂದಿದ್ದು, ಅದು ಮಂಡಿಯ ಸಹಜ ಚಲನೆಗೆ ಬೇಕಾದ ನಿಖರತೆಯನ್ನು ಒದಗಿಸುತ್ತದೆ. ಆರಂಭಿಕ ಕೆಲ ಮಂಡಿ ಬದಲಾವಣೆ ಸರ್ಜರಿಗಳಲ್ಲೇ ನಾವು ಉತ್ತಮ ಫಲಿತಾಂಶವನ್ನು ಕಾಣುತ್ತಿದ್ದೇವೆ" ಎಂದು ಹೇಳಿದರು.
ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ ಇಂಕ್ ಸಂಸ್ಥೆಯು ಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನ ಸ್ಕೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್ನ ಪೇಟೆಂಟ್ ಪಡೆದುಕೊಂಡಿದೆ.