ಅಪ್ಪನ ₹30,000 ಕೋಟಿ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್​ ಮೆಟ್ಟಿಲೇರಿದ ಕರಿಷ್ಮಾ ಕಪೂರ್​ ಮಕ್ಕಳು

ಅಪ್ಪನ ₹30,000 ಕೋಟಿ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್​ ಮೆಟ್ಟಿಲೇರಿದ ಕರಿಷ್ಮಾ ಕಪೂರ್​ ಮಕ್ಕಳು
By Published : September 10, 2025 at 10:38 AM IST

ಬಾಲಿವುಡ್​ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಜೂನ್​ನಲ್ಲಿ ನಿಧನರಾಗಿದ್ದರು. ಇದೀಗ, ಅವರ ಮಕ್ಕಳು ಆಸ್ತಿಯ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕರಿಷ್ಮಾ ಕಪೂರ್ ಅವರು ಕೈಗಾರಿಕೋದ್ಯಮಿ ಸಂಜಯ್ ಕಪೂರ್​​ ಅವರ ಎರಡನೇ ಪತ್ನಿ. ಸಂಜಯ್ 3 ಮದುವೆಯಾಗಿದ್ದರು. ಇದೀಗ ಕರಿಷ್ಮಾ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ಕಪೂರ್, ತಂದೆಯ ಆಸ್ತಿಯಲ್ಲಿ ತಮಗೆ ಪಾಲು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.

ಕರಿಷ್ಮಾ ಅವರೊಂದಿಗೆ ವಾಸಿಸುವ ಇಬ್ಬರು ಮಕ್ಕಳು, ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಸಂಪೂರ್ಣ ಸಂಪತ್ತನ್ನು ಪಡೆಯಲು ವಿಲ್​ ಬದಲಾಯಿಸಿದ್ದಾರೆ ಅಥವಾ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕರಿಷ್ಮಾ ಮಕ್ಕಳು ತಮ್ಮ ಅರ್ಜಿಯಲ್ಲಿ, ಆಸ್ತಿಯ ಐದನೇ ಒಂದು ಭಾಗವನ್ನು ತಮಗೆ ಹಂಚಬೇಕು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ತಮ್ಮ ಸ್ಥಾನಮಾನವನ್ನು ಪ್ರತಿಪಾದಿಸಬೇಕೆಂದು ಮನವಿ ಮಾಡಿದ್ದಾರೆ. ಇವರ ವಕೀಲರು, ಸಮೈರಾ ಮತ್ತು ಕಿಯಾನ್, ತಮ್ಮ ತಂದೆಯ ಮರಣದವರೆಗೂ ಅವರೊಂದಿಗೆ ನಿರಂತರ ಆತ್ಮೀಯ ಬಾಂಧವ್ಯ ಹೊಂದಿದ್ದರೆಂದು ತಿಳಿಸಿದ್ದಾರೆ.

"ನಿರಂತರ ಭೇಟಿ, ರಜಾದಿನಗಳನ್ನು ಕಳೆಯುವುದು, ಆಗಾಗ್ಗೆ ಒಟ್ಟಿಗೆ ಇರುವುದು, ವಿಡಿಯೋ ಮತ್ತು ನಾರ್ಮಲ್​ ಕಾಲ್​​, ಮೆಸೇಜ್​​​ಗಳ ಮೂಲಕ ಸಂಜಯ್ ಕಪೂರ್ ಅವರೊಂದಿಗೆ ಸಂಪರ್ಕದಲ್ಲಿದ್ದರು'' ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. "ಸಂಜಯ್​ ಮತ್ತು ಅವರ ಮಕ್ಕಳ ನಡುವೆ ಹಲವು ವಾಟ್ಸಾಪ್ ಗ್ರೂಪ್​ಗಳಿದ್ದವು" ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ದಾಖಲೆಗಳು, ಮಕ್ಕಳು ತಮ್ಮ ತಂದೆಯನ್ನು ದೆಹಲಿಯಲ್ಲಿರುವ ಅವರ ರಾಜೋಕ್ರಿ ನಿವಾಸದಲ್ಲಿ ಆಗಾಗ್ಗೆ ಭೇಟಿ ಮಾಡುತ್ತಿದ್ದರು ಎಂಬುದನ್ನು ಉಲ್ಲೇಖಿಸಿವೆ. ಅಲ್ಲಿ ಅವರಿಗೆ ಪ್ರತ್ಯೇಕ ನಿಗದಿಪಡಿಸಿದ ರೂಮ್​ಗಳಿದ್ದವು. "ವರ್ಷಗಳಲ್ಲಿ, ದೀಪಾವಳಿ ಸೇರಿದಂತೆ ವಾರಾಂತ್ಯ ಮತ್ತು ಇತರೆ ರಜಾದಿನಗಳಲ್ಲಿ ರಾಜೋಕ್ರಿ ನಿವಾಸಕ್ಕೆ ಮಕ್ಕಳು ಭೇಟಿ ನೀಡಿದ್ದಾರೆ. ತಂದೆ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೂ ಬಂದಿದ್ದರು'' ಎಂದು ವಾದಿಗಳು ಕೋರ್ಟ್ ದಾಖಲೆಯಲ್ಲಿ ತಿಳಿಸಿದ್ದಾರೆ.

ಯು.ಕೆ.ಯಲ್ಲಿ ಪೋಲೊ ಆಡುವಾಗ ಹೃದಯಾಘಾತದಿಂದ ಜೂನ್​​ನಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಸಂಜಯ್ ಕಪೂರ್ ಕೊನೆಯುಸಿರೆಳೆದರು. ಕರಿಷ್ಮಾ ಕಪೂರ್ ಅವರೊಂದಿಗೆ 13 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ್ದು, 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದರು.

ಸಂಜಯ್​​ ಮೊದಲು ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ, ನಂತರ ಕರಿಷ್ಮಾ ಕಪೂರ್ (2003–2016) ಬಳಿಕ 2017ರಲ್ಲಿ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾಗಿದ್ದರು.

📚 Related News