ಬೆಳಗಾವಿ: ಗುಜರಿ ವಸ್ತುಗಳ ಖರೀದಿಗೆ ಬೆಳಗಾವಿಯ ಓರ್ವ ಎಂಜಿನಿಯರಿಂಗ್ ಡ್ರಾಪ್ ಔಟ್ ವಿದ್ಯಾರ್ಥಿ ಹಾಗೂ ಮತ್ತೋರ್ವ ಈಗಷ್ಟೇ ಪದವಿ ಮುಗಿಸಿದ ಯುವಕ ಸೇರಿ 'ಕಬಾಡಿ ಮ್ಯಾನ್' ಎಂಬ ಹೆಸರಿನಲ್ಲಿ ಆನ್ಲೈನ್ ಸೇವೆ ಆರಂಭಿಸಿದ್ದಾರೆ. ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್ ಮಾರಾಟಕ್ಕೂ ಈಗ ಡಿಜಿಟಲ್ ವೇದಿಕೆ ಸಿಕ್ಕಿದ್ದು, ಹೊಸ ಸ್ಟಾರ್ಟ್ ಅಪ್ ಶುರು ಮಾಡಿದ್ದಾರೆ. ಹೀಗೆ ವಿನೂತನ ಪ್ರಯೋಗಕ್ಕೆ ಕೈ ಹಾಕಿರುವ ಬೆಳಗಾವಿಯ ಇಬ್ಬರು ಯುವಕರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಇದು ಡಿಜಿಟಲ್ ಯುಗ. ತಿನ್ನುವ ಆಹಾರದಿಂದ ಹಿಡಿದು, ತೊಡುವ ಬಟ್ಟೆ, ಕುಡಿಯುವ ನೀರು, ಅಗತ್ಯ ವಸ್ತುಗಳು ಸೇರಿ ಎಲ್ಲವನ್ನೂ ಆನ್ ಲೈನ್ನಲ್ಲೇ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಬರುತ್ತದೆ. ಆದರೆ, ಬಳಸಿದ ವಸ್ತುಗಳನ್ನು ನಮಗೆ ಬೇಕಾದಾಗ ಮಾರಾಟ ಮಾಡುವ ಅವಕಾಶ ಇರಲಿಲ್ಲ. ಗುಜರಿ ವ್ಯಾಪಾರಿಗಳು ಬರೋವರೆಗೂ ಕಾಯಬೇಕಿತ್ತು. ಇನ್ನು ಯಾರ ಮನೆಯಲ್ಲಿ ಹಳೆ ಸಾಮಾನು ಇವೆ ಅಂತಾ ಗೊತ್ತಾಗದೇ ಗುಜರಿಯವರು ಎಲ್ಲರ ಮನೆಗಳಲ್ಲೂ ವಿಚಾರಿಸಬೇಕಿತ್ತು. ಆದರೆ, ಇದೆಲ್ಲದಕ್ಕೂ ಬೆಳಗಾವಿಯ ಸಿದ್ದಾರ್ಥ ಮುತಗೇಕರ್ ಮತ್ತು ಚಿನ್ಮಯ ಮದ್ದಿನಮಠ ಎಂಬ ಇಬ್ಬರು ಯುವಕರು ಮುಕ್ತಿ ಹಾಡಿದ್ದಾರೆ.

ಪ್ರಸಕ್ತ ವರ್ಷ 4 ಕೋಟಿ ಗುರಿ: "ಕಬಾಡಿ ಮ್ಯಾನ್" ಎಂಬ ವೆಬ್ಸೈಟ್ ಅಭಿವೃದ್ಧಿ ಪಡಿಸಿದ್ದು, ಈ ವೆಬ್ಸೈಟ್ನಲ್ಲಿ ಬುಕ್ ಮಾಡಿದರೆ ಸಾಕು ಕಬಾಡಿ ಮ್ಯಾನ್ ತಂಡ ತಮ್ಮ ಮನೆಗೆ ಬಂದು ಮಾರುಕಟ್ಟೆ ಬೆಲೆಯಂತೆ ದುಡ್ಡು ಕೊಟ್ಟು ಹಳೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. 2025ರ ಜನವರಿ ತಿಂಗಳಲ್ಲಿ ಈ ಸ್ಟಾರ್ಟ್ ಅಪ್ ಸ್ಥಾಪನೆ ಆಗಿದ್ದು, ಇಲ್ಲಿಯವರೆಗೆ 3 ಸಾವಿರ ಆರ್ಡರ್ ಬಂದಿವೆ. ಇದರಿಂದ 49 ಲಕ್ಷ ರೂ. ವಹಿವಾಟು ಮಾಡಿದ್ದು, 2025-2026ರ ಆರ್ಥಿಕ ವರ್ಷದಲ್ಲಿ 4 ಕೋಟಿ ವಹಿವಾಟಿನ ಗುರಿಯನ್ನು ಸಿದ್ದಾರ್ಥ ಮತ್ತು ಚಿನ್ಮಯಿ ಜೋಡಿ ಹೊಂದಿದೆ.
50 ಕಬಾಡಿಗಳಿಗೆ ಕೆಲಸ: ಪೇಪರ್, ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ಸ್, ಕಬ್ಬಿಣ ಸೇರಿ 40ಕ್ಕೂ ಅಧಿಕ ವಸ್ತುಗಳನ್ನು "ಕಬಾಡಿ ಮ್ಯಾನ್" ತಂಡ ಖರೀದಿಸುತ್ತದೆ. ನಿರುಪಯುಕ್ತ ವಸ್ತುಗಳನ್ನು ಮರು ಬಳಕೆ ಮಾಡುವುದು ಮತ್ತು ಸ್ಥಳೀಯ ಕಬಾಡಿಗಳಿಗೆ ಶಕ್ತಿ ತುಂಬುವುದು ಇವರ ಉದ್ದೇಶವಾಗಿದೆ. ಸದ್ಯ 50 ಕಬಾಡಿಗಳು ಇವರ ತಂಡದಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬೊಬ್ಬರಿಗೆ ಒಂದೊಂದು ಏರಿಯಾ ಅಂತಾ ನಿಗದಿ ಮಾಡಲಾಗಿದೆ.

ಹೀಗೆ ಖರೀದಿಸಿದ ಹಳೆ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಬೆಳಗಾವಿಯ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಮಾರಾಟ ಮಾಡಿ ಅಧಿಕ ಲಾಭ ಗಳಿಸುತ್ತಿದ್ದಾರೆ. ಇದರಲ್ಲಿ ಒಂದು ಭಾಗ ಲಾಭವನ್ನು ಸಿದ್ದಾರ್ಥ ಮತ್ತು ಚಿನ್ಮಯ ತಂಡ ಪಡೆಯುತ್ತಿದೆ. ಇವರ ಜೊತೆಗೆ ಸಾಯೀಷಾ ಮತ್ತು ದಿಯಾ ಮಾರ್ಕೆಟಿಂಗ್ ಮತ್ತು ಕಬಾಡಿಗಳಿಗೆ ಆರ್ಡರ್ ಕೊಡುವ ಕೆಲಸ ನೋಡಿಕೊಳ್ಳುತ್ತಿದ್ದಾರೆ.
ಐಡಿಯಾ ಬಂದಿದ್ದು ಹೇಗೆ?: ಕೋವಿಡ್ ಸಮಯದಲ್ಲಿ ಸಿದ್ದಾರ್ಥ ಮುತಗೇಕರ್ ತಮ್ಮ ಮನೆಯಲ್ಲಿನ ಹಳೆ ವಸ್ತುಗಳನ್ನು ಮಾರಾಟ ಮಾಡಲು ಪರದಾಡಿದ್ದರು. ಈ ವೇಳೆ ಗುಜರಿ ವಸ್ತುಗಳ ಅಂಗಡಿಗೆ ಹೋಗಿ ಕೇಳಿದಾಗ ನೀವೇ ತಂದು ಕೊಡಿ ಅಂತಾ ಹೇಳಿದ್ದರು. ಹಾಗಾಗಿ, ಸಿದ್ದಾರ್ಥ ತಮ್ಮ ಕಾರಿನಲ್ಲಿ ತೆಗೆದುಕೊಂಡು ಬಂದಿದ್ದರು. ಆದರೆ, ಆ ವೇಳೆ ಹಿಂದಿನ ದಿನ ಹೇಳಿದ್ದ ದರಕ್ಕಿಂತ ಕಡಿಮೆ ಹಣ ಕೊಟ್ಟರು. ಇದರಿಂದ ಸಿದ್ದಾರ್ಥಗೆ ಒಂದು ಐಡಿಯಾ ಬಂತು. ನಾವೇ ಯಾಕೆ ಈ ಗುಜರಿ ಉದ್ಯಮ ಆರಂಭಿಸಬಾರದು ಅಂತಾ. ಅಲ್ಲಿಂದ ಆರಂಭವಾದದ್ದು, ಈಗ ಹೊಸ ಉದ್ಯಮಕ್ಕೆ ಮುನ್ನುಡಿ ಬರೆದಿದೆ.

ಸ್ಥಳೀಯ ಕಬಾಡಿ ಮ್ಯಾನ್ ಗಳಿಗೆ ಶಕ್ತಿ: ಈ ಮೊದಲು ಸಿದ್ದಾರ್ಥ ಮತ್ತು ಅವರ ತಂಡ Scrap easy ಆ್ಯಪ್ ಮೂಲಕ 2021-2024ರವರೆಗೆ ಬೀದಿ ಬೀದಿ ತಿರುಗಿ ಹಳೆ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಮಾಡಿದ್ದರು. ಈ ವೇಳೆ, ತಮಗೆ ಎದುರಾಗುತ್ತಿದ್ದ ಗುಜರಿ ವ್ಯಾಪಾರಿಗಳನ್ನು ನೋಡಿದಾಗ ಅವರ ಬದುಕನ್ನು ನಾವು ಕಸಿದುಕೊಳ್ಳುತ್ತಿದ್ದೇವೆ ಎಂಬ ಕೊರಗು ಅವರನ್ನು ಕಾಡಲು ಶುರುವಾಯಿತು. ಆಗ ಇವರಿಗೆ ಹೊಳೆದಿದ್ದೇ ಈ "ಕಬಾಡಿ ಮ್ಯಾನ್" ವೆಬ್ ಸೈಟ್. ಇದರಲ್ಲಿ ಸ್ಥಳೀಯ ಕಬಾಡಿಗಳನ್ನೇ ಬಳಕೆ ಮಾಡಿಕೊಂಡು, ಅವರನ್ನು ತಮ್ಮ ಉದ್ಯಮದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ.
ಗ್ರಾಹಕರು ವೆಬ್ಸೈಟ್ನಲ್ಲಿ ಬುಕ್ ಮಾಡಿದಾಗ ಸ್ಥಳೀಯ ಕಬಾಡಿಗಳಿಗೆ ಫೋನ್ ಮಾಡಿ ಮಾಹಿತಿ ನೀಡುತ್ತಾರೆ. ಅವರು ಬುಕ್ ಮಾಡಿದವರ ಮನೆಗೆ ತೆರಳಿ ಗುಜರಿ ವಸ್ತುಗಳನ್ನು ಖರೀದಿಸಿಕೊಂಡು ಬರುತ್ತಾರೆ. ಹೀಗೆ ಗ್ರಾಹಕರು ಮತ್ತು ಕಬಾಡಿಗಳ ನಡುವಿನ ಕೊಂಡಿಯಾಗಿ ಸಿದ್ದಾರ್ಥ ಮತ್ತು ಚಿನ್ಮಯ ಜೋಡಿ ಕೆಲಸ ಮಾಡುತ್ತಿದೆ. ಅಲ್ಲದೇ ಪ್ರತಿಯೊಬ್ಬರಿಗೂ "ಕಬಾಡಿ ಮ್ಯಾನ್" ಟೀಶರ್ಟ್ ಕೊಟ್ಟಿದ್ದು, ಅದನ್ನು ಧರಿಸಿ ಕಾಯಕ ಮಾಡುತ್ತಿದ್ದಾರೆ.

5 ವರ್ಷದಲ್ಲಿ ದೇಶಾಧ್ಯಂತ ವಿಸ್ತರಿಸುವ ಗುರಿ: ಈಟಿವಿ ಭಾರತ ಜೊತೆಗೆ ಮಾತನಾಡಿದ ಚಿನ್ಮಯ ಮದ್ದಿನಮಠ, "ಕಬಾಡಿ ಮ್ಯಾನ್" ಇದೊಂದು ಹೊಸ ಸ್ಟಾರ್ಟ್ ಅಪ್. ನಮ್ಮಲ್ಲಿ 50 ಕಬಾಡಿ ಮ್ಯಾನ್ ಗಳು ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಸುಲಭವಾಗಿ ಹಳೆ ವಸ್ತು ಮಾರಾಟ ಮಾಡಲು ಮತ್ತು ಕಬಾಡಿ ಮ್ಯಾನ್ಗಳ ಆದಾಯ ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಸದ್ಯಕ್ಕೆ ಬೆಳಗಾವಿ ನಗರದಲ್ಲಿ ಆರಂಭಿಸಿದ್ದೇವೆ. ಅದೇರೀತಿ ಬೆಂಗಳೂರಿನಲ್ಲಿ ಸಣ್ಣ ಸಣ್ಣ ಮಾಲ್, ಹೋಟೆಲ್, ಗಿಗ್ ವೇದಿಕೆಗಳಿಂದ ಮಾತ್ರ ಆರ್ಡರ್ ತೆಗೆದುಕೊಳ್ಳುತ್ತಿದ್ದೇವೆ. ಮುಂದಿನ ವರ್ಷ ಹುಬ್ಬಳ್ಳಿ - ಧಾರವಾಡ, ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಆರಂಭಿಸುವ ಯೋಜನೆ ಹಾಕಿದ್ದು, ಬರುವ 5 ವರ್ಷದಲ್ಲಿ ಇಡೀ ದೇಶಾಧ್ಯಂತ ನಮ್ಮ ಉದ್ಯಮ ಆರಂಭಿಸುವ ಗುರಿ ಹೊಂದಿದ್ದೇವೆ ಎಂದರು.
ಈ ಮೊದಲು ಗುಜರಿ ವ್ಯಾಪಾರಿಗಳಿಗೆ 2-3 ಆರ್ಡರ್ ಸಿಗುತ್ತಿತ್ತು. ಈಗ ನಾವು ಅವರಿಗೆ 10-15 ಆರ್ಡರ್ ಕೊಡುತ್ತಿದ್ದೇವೆ. ಅಲ್ಲದೇ ದೊಡ್ಡ ದೊಡ್ಡ ಫ್ಯಾಕ್ಟರಿಗಳ ಜೊತೆಗೆ ಸಂಪರ್ಕ ಮಾಡಿಕೊಟ್ಟಿದ್ದೇವೆ. ಇದರಿಂದಾಗಿ ಹೆಚ್ಚಿನ ಆದಾಯವನ್ನು ಅವರು ಗಳಿಸುತ್ತಿದ್ದಾರೆ. ಮೂರು ರೂಪಾಯಿ ಲಾಭದಲ್ಲಿ ಅವರಿಗೆ 2 ರೂ. ಸಿಕ್ಕರೆ, ನಮಗೆ 1 ರೂ. ಬರುತ್ತದೆ ಎನ್ನುತ್ತಾರೆ ಚಿನ್ಮಯ ಮದ್ದಿನಮಠ.
ಆದಾಯದ ಜೊತೆಗೆ ಗೌರವ ಸಿಕ್ಕಿದೆ: ಕಬಾಡಿ ಮ್ಯಾನ್ ಸುರೇಶ ಶಿಂಧೆ ಮಾತನಾಡಿ, ಈ ಮೊದಲು 100 ಮನೆಗೆ ಹೋದಾಗ ಅದರಲ್ಲಿ ಎರಡು ಮನೆಗಳಲ್ಲಿ ಗುಜರಿ ವಸ್ತುಗಳು ಸಿಗುತ್ತಿದ್ದವು. ಯಾವಾಗ "ಕಬಾಡಿ ಮ್ಯಾನ್" ಕಂಪನಿಗೆ ಸೇರಿದೇವೋ ದಿನಕ್ಕೆ 10 ಆರ್ಡರ್ ಸಿಗುತ್ತಿದ್ದು, ಇದರಿಂದ 1200 ರೂ. ಆದಾಯ ನನಗೆ ಸಿಗುತ್ತಿದೆ. ಮೊದಲು 500 ರೂ. ಅಷ್ಟೇ ಕೈಗೆ ಬಂದು ಸೇರುತ್ತಿತ್ತು. ಎಲ್ಲಕ್ಕಿಂತ ಹೆಚ್ಚು ನಮಗೆ ಜನ ಗೌರವ ಕೊಡುತ್ತಿರಲಿಲ್ಲ. ಈಗ ನಮ್ಮನ್ನು ಗೌರವದಿಂದ ಕಾಣುತ್ತಿದ್ದಾರೆ. ಒಳ್ಳೆಯ ರೀತಿ ಮಾತನಾಡಿಸಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.