ಕಠ್ಮಂಡು ಹಿಂಸಾಚಾರ: ಯುವ ಜನತೆಯ ಮುಂದಾಳತ್ವದ ಪ್ರತಿಭಟನೆಗಳು ದಕ್ಷಿಣ ಏಷ್ಯಾದಲ್ಲಿ ವೈರಲ್​ ಆಗುತ್ತಿವೆಯೇ?

ಕಠ್ಮಂಡು ಹಿಂಸಾಚಾರ: ಯುವ ಜನತೆಯ ಮುಂದಾಳತ್ವದ ಪ್ರತಿಭಟನೆಗಳು ದಕ್ಷಿಣ ಏಷ್ಯಾದಲ್ಲಿ ವೈರಲ್​ ಆಗುತ್ತಿವೆಯೇ?
By Published : September 10, 2025 at 5:06 PM IST

ಹಿಮಾಲಯದ ತಪ್ಪಲಿನ ದೇಶ ನೇಪಾಳದಲ್ಲಿ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಯುವ ಜನತೆ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು, ಪರಿಣಾಮವಾಗಿ ಪ್ರಧಾನಿ ಕೆಪಿ ಶರ್ಮಾ ಒಲಿ ಸೇರಿದಂತೆ ಅನೇಕ ಸಚಿವರು ರಾಜೀನಾಮೆ ನೀಡಿದ್ದಾರೆ. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಸುಪ್ರೀಂಕೋರ್ಟ್​, ಸಂಸತ್​ ಭವನ ಸೇರಿದಂತೆ ಅನೇಕ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.

2025ರ ಸೆಪ್ಟೆಂಬರ್​ 4ರಂದು ಪ್ರಮುಖ ಸಾಮಾಜಿಕ ಜಾಲತಾಣವನ್ನು ಬಂದ್​ ಮಾಡಿದ ಸರ್ಕಾರದ ವಿವಾದಾತ್ಮಕ ನಿರ್ಧಾರ ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದ್ದು, ದಶಕದಲ್ಲಿ ಕಂಡ ಅತಿದೊಡ್ಡ ಭೀಕರ ಗಲಭೆಗೆ ದೇಶ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳು ಅಗತ್ಯ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ತಿಳಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ಮಾಡಲಾಗಿರುವ ದಾಳಿ ಎಂದು ಯುವ ಸಮೂಹ ಭಾವಿಸಿದೆ.

ನೇಪಾಳದ ಯುವ ಜನತೆಯಲ್ಲಿ ಬಹುತೇಕರು ಸಂವಹನ, ಕಾರ್ಯಚಲನೆ ಮತ್ತು ಜೀವನೋಪಾಯಕ್ಕೆ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದ್ದು, ಇವುಗಳನ್ನು ಬ್ಯಾನ್​ ಮಾಡುವುದು ಪ್ರತಿಭಟನೆಗೆ ಕಾರಣವಾಗಿದೆ. ಆದರೆ, ಇದು ಪ್ರತ್ಯೇಕ ಪ್ರಕರಣವಲ್ಲ ಎಂಬುದು ಗಮನಿಸುವುದು ಮುಖ್ಯ. ದಕ್ಷಿಣ ಏಷ್ಯಾದಲ್ಲಿ ಯುವಜನತೆ ನೇತೃತ್ವದ ಪ್ರತಿಭಟನೆಗಳು ರಾಜಕೀಯ ಆದೇಶಗಳಿಗೆ ಸವಾಲಾಗಿ ನಡೆಯುತ್ತಿರುವ ಹೋರಾಟಗಳಾಗಿದೆ. ಶ್ರೀಲಂಕಾದಲ್ಲೂ ಕೂಡ ರಾಜಪಕ್ಸ ಆಡಳಿತದಲ್ಲಿ ಆರ್ಥಿಕ ಕುಸಿತದ ವಿರುದ್ಧ ಯುವ ಜನತೆ ಪ್ರತಿಭಟನೆ ನಡೆಸಿದೆ. ಬಾಂಗ್ಲಾದೇಶದಲ್ಲಿ ಶಿಕ್ಷಣದ ಸುಧಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿ ನೇತೃತ್ವದಲ್ಲಿ ಪ್ರತಿಭಟನೆಗಳಾದವು. ಈ ಪ್ರತಿಭಟನೆಗಳು ಜನಾಂಗೀಯ - ಧಾರ್ಮಿಕ ಉದ್ವಿಗ್ನತೆಗಳೊಂದಿಗೆ ಹೆಚ್ಚು ಸಿಲುಕಿತು. ಇದೀಗ ನೇಪಾಳ ಈ ಪಟ್ಟಿಗೆ ಸೇರಿದೆ. ಈ ಪ್ರತಿಭಟನೆಗಳು ಮೂಡಿಸುತ್ತಿರುವ ಪ್ರಶ್ನೆಗಳು, ದಕ್ಷಿಣ ಏಷ್ಯಾದಲ್ಲಿನ ಯುವ ಜನತೆ ಆಡಳಿತ ಬದಲಾವಣೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಿವೆಯಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಸಾಮಾನ್ಯ ಎಳೆ - ವಿಭಿನ್ನ ಪರಿಸ್ಥಿತಿ: ಈ ಪ್ರತಿಯೊಂದು ಹೋರಾಟಗಳು ವಿಭಿನ್ನ ರಾಷ್ಟ್ರೀಯ ಸಂದರ್ಭಗಳಿಂದ ಹುಟ್ಟಿಕೊಂಡಿವೆಯಾದರೂ, ಅವುಗಳ ಪ್ರಚೋದನೆಗಳು, ಸಂಯೋಜನೆ ಮತ್ತು ವಿಕಾಸದಲ್ಲಿ ಗಮನಾರ್ಹ ಹೋಲಿಕೆಗಳಿವೆ. ಶ್ರೀಲಂಕಾದಲ್ಲಿ ಅಸುಸ್ಥಿರ ಸಾಲ, ಭ್ರಷ್ಟಾಚಾರ, ಇಂಧನ ಕೊರತೆಗಳ ಆರ್ಥಿಕ ಕುಸಿತವೂ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದು, ಪರಿಣಾಮ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೆ ಕಾರಣವಾಯಿತು. ಇನ್ನು ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಕೋಟಾ ವ್ಯವಸ್ಥೆ ಮತ್ತು ತಾರತಮ್ಯಗಳು ವಿರುದ್ಧ ಹೋರಾಟಕ್ಕೆ ಡಿಜಿಟಲ್​ ಕ್ರಿಯಾಶೀಲತೆಗಳು ಪ್ರತಿಭಟನೆಗಳು ವ್ಯಾಪಕವಾಗುವಂತೆ ಮಾಡಿತು. ಇದುವೇ ಮುಂದೆ ಹಿಂಸಾಚಾರಕ್ಕೆ ತಿರುಗುವಂತೆ ಮಾಡಿತು. ಎರಡು ದೇಶದಲ್ಲಿ ಹೊರಗಿನ ಪಾತ್ರಗಳು ಇದ್ದವು. ಬಾಂಗ್ಲಾದೇಶದಲ್ಲಿ ಅಮೆರಿಕ ಹಾಗೂ ಶ್ರೀಲಂಕಾದಲ್ಲಿ ಚೀನಾ ಮತ್ತು ಅಮೆರಿಕದ ಪಾತ್ರದ ಕುರಿತು ಶಂಕೆ ವ್ಯಕ್ತವಾಗಿತ್ತು. ನೇಪಾಳ ಪ್ರತಿಭಟನೆಯಲ್ಲಿ ವಿದೇಶ ಪ್ರಭಾವದ ಕುರಿತು ಸಾಕ್ಷ್ಯದ ಸಾಕಷ್ಟು ಪುರಾವೆಗಳು ಇನ್ನೂ ಸಿಕ್ಕಿಲ್ಲ. ಅಥವಾ ಇದು ಕಣ್ಣಿಗೆ ಕಾಣಿಸುತ್ತಿಲ್ಲ . ಸಾಮಾಜಿಕ ಜಾಲತಾಣದ ಬ್ಯಾನ್​ ಎಂಬ ಒಂದು ಕಿಡಿಯು 10 ಸಾವಿರ ಯುವ ಜನತೆಯನ್ನು ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದ್ದು, ದೊಡ್ಡ ಪ್ರಮಾಣದಲ್ಲಿ ಜನರು ಗುಂಪುಗೂಡಿದ್ದು, ಈ ಕಿಚ್ಚಿನ ಹಿಂದಿನ ಜ್ವಾಲೆ ಎನ್ನಲಾಗಿದೆ. ಇದನ್ನು ಜನರು ಸ್ವಯಂ ಪ್ರೇರಣೆಯಿಂದ ಮಾಡಿದರು ಎಂಬ ದೃಷ್ಟಿಯಿಂದ ನೋಡುವುದು ಸಾಧ್ಯವಿಲ್ಲ. ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ವಿದೇಶಿ ಶಕ್ತಿಗಳ ಬೆಂಬಲವೂ ಸ್ಪಷ್ಟವಾಗಿತ್ತು. ಆದರೆ ನೇಪಾಳದಲ್ಲಿ ಆಂತರಿಕವಾಗಿ ಈ ದೊಡ್ಡ ಮಟ್ಟದಲ್ಲಿ ಬಿಗುವಿನ ವಾತವಾರಣ ಮೂಡುವಂತೆ ಮಾಡಿದೆ. ಆದಾಗ್ಯೂ ನೇಪಾಳ ಕಾರ್ಯತಂತ್ರದ ಸ್ಥಳವಾಗಿದ್ದು, ಭಾರತ ಮತ್ತು ಚೀನಾ ನಡುವಿನ ಭೌಗೋಳಿಕ ರಾಜಕೀಯ ಬಫರ್ ಆಗಿರುವ ಇತಿಹಾಸವನ್ನು ಗಮನಿಸಿದರೆ, ವಿದೇಶಿ ಹಿತಾಸಕ್ತಿಗಳು ತೆರೆಮರೆಯಲ್ಲಿ ಬೆಳವಣಿಗೆಗಳನ್ನು ಸದ್ದಿಲ್ಲದೇ ರೂಪಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ.

ನೇಪಾಳದ ಯುವ ಜನತೆಯ ಆಕ್ರೋಶಕ್ಕೆ ತುಪ್ಪ ಸುರಿದ ಅಂಶ: ನೇಪಾಳದ ರಾಜಕೀಯದ ಬಗ್ಗೆ ಯುವ ಜನತೆಗೆ ಇದ್ದ ಆಳವಾದ ಬೇಸರ ಇದಕ್ಕೆ ಕಾರಣವಾಗಿದೆ. 2015 ರಲ್ಲಿ ಹೊಸ ಸಂವಿಧಾನ ಘೋಷಣೆಯಾದಾಗಿನಿಂದ ಪ್ರಜಾಪ್ರಭುತ್ವ ಬಲವರ್ಧನೆ ಮತ್ತು ಉತ್ತಮ ಆಡಳಿತದ ಭರವಸೆಗಳು ನಿರಂತರವಾಗಿ ದುರ್ಬಲಗೊಂಡಿವೆ. ರಾಜಕೀಯ ಲಾಭಕ್ಕಾಗಿ ಪದೇ ಪದೆ ಮೈತ್ರಿಗಳನ್ನು ರೂಪಿಸಿ ನಾಯಕರು ಮುರಿದಿದ್ದಾರೆ. ವಿಶೇಷವಾಗಿ ಕೆ. ಪಿ. ಶರ್ಮಾ ಓಲಿ, ಶೇರ್ ಬಹದ್ದೂರ್ ದೇವುಬಾ ಮತ್ತು ಪ್ರಚಂಡ ನಡುವೆ ಅಧಿಕಾರ ಹಂಚಿಕೆಯಾಗುತ್ತಿದೆ. ರಾಜಕೀಯ ಅಸ್ಥಿರತೆಯು ಆಡಳಿತದಲ್ಲಿ ವ್ಯಾಪಕ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಯಿತು. ಸಂವಿಧಾನದ ನಂತರ ಆಡಳಿತದಲ್ಲಿ ಬಹುತೇಕ ನೇಪಾಳಿ ಯುವ ಜನತೆ ಬೆಳೆದಿದ್ದು, ಅವರಲ್ಲಿ ಈ ಕುರಿತು ಸಾಕಷ್ಟು ಭ್ರಮನಿರಸನವಿದೆ. ನಿರುದ್ಯೋಗ ಏರಿಕೆ, ಆರ್ಥಿಕ ಪಗ್ರತಿಯ ಭರವಸೆಗಳ ಈಡೇರದಿರುವಿಕೆ, ಒತ್ತಡಗಳು ಈ ಆಕ್ರೋಶಕ್ಕೆ ಕಾರಣವಾಗಿದೆ. 2024ರ ಒಂದೇ ವರ್ಷದಲ್ಲಿ 30 ಮಿಲಿಯನ್​ ಜನಸಂಖ್ಯೆ ಇರುವ ನೇಪಾಳದಲ್ಲಿ 7,41,000 ಜನರು ವಿದೇಶಿಗಳಲ್ಲಿನ ಅವಕಾಶಗಳಿಗಾಗಿ ದೇಶ ತೊರೆದಿದ್ದಾರೆ. ವಿದೇಶದಲ್ಲಿರುವ ನೇಪಾಳಿಗಳು ರಾಷ್ಟ್ರೀಯ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿದ್ದರೂ, ಸರ್ಕಾರವು ದೇಶದಲ್ಲಿ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚಿನದನ್ನು ಮಾಡಿಲ್ಲ.

ಸಾಮಾಜಿಕ ಮಾಧ್ಯಮಗಳ ಬ್ಯಾನ್​ ಎಂಬುದು ಕೇವಲ ಅಭಿವೃಕ್ತಿ ಸ್ವಾತಂತ್ರ್ಯದ ಕುರಿತು ಅಲ್ಲ. ಇದು ವಲಸಿಗ ಕಾರ್ಮಿಕನೊಬ್ಬ ತಮ್ಮ ಕುಟುಂಬವನ್ನು ಸಂಪರ್ಕಿಸಲು ಇರುವ ಅನೇಕ ಪ್ರಯತ್ನಗಳಲ್ಲಿ ಒಂದಾಗಿದೆ. ಇದನ್ನು ನಿಷೇಧಿಸುವ ಮೂಲಕ ಸರ್ಕಾರವು ದೈನಂದಿನ ವಾಸ್ತವಗಳಿಂದ ದೂರವಿದೆ ಎಂಬ ಗ್ರಹಿಕೆಯು ಪ್ರತಿಭಟನೆಗಳನ್ನು ಮತ್ತಷ್ಟು ಕಾವು ಪಡೆಯಲು ಸಹಾಯ ಮಾಡಿತು. ಇದರ ಜೊತೆಗೆ ಅತಿರೇಕದ ಮತ್ತು ಶಿಕ್ಷೆಗೆ ಒಳಗಾದ ಭ್ರಷ್ಟಾಚಾರವೂ ಸೇರಿಕೊಂಡಿದೆ. ರಾಜಕಾರಣಿಗಳು, ಆಡಳಿತಕಾರರು ಮತ್ತು ಉದ್ಯಮಿಗಳ ಹಿತಾಸಕ್ತಿಗಳು ಬಗ್ಗೆಗಿನ ಅಸಮಾಧಾನವೂ ಕಾರಣ ಎಂಬುದನ್ನು ವರದಿಯಲ್ಲಿ ತಿಳಿಸಿದೆ. ಇತ್ತೀಚಿಗಿನ ತನಿಖೆಯಲ್ಲಿ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ನೇಪಾಳ ರೂಪಾಯಿಯ ಲಕ್ಷಾಂತರ ದುರ್ಬಳಕೆ ನಡೆದಿದೆ ಎಂಬುದು ಬಯಲಾಗಿತ್ತು. ವಿಪಕ್ಷಗಳು ಓಲಿ ಸರ್ಕಾರವು ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿತ್ತು. ಇವುಗಳೆಲ್ಲಾ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಪ್ರತಿಭಟನಾಕಾರರು ವಂಶವಾಳಿಗಳನ್ನು ಅಂದರೆ ರಾಜಕೀಯ ನಾಯಕರ ಮಕ್ಕಳು ಮಾತ್ರ ಸವಲತ್ತು ಅನುಭವಿಸುತ್ತಿರುವುದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದೇಶದಲ್ಲಿ ಲಕ್ಷಾಂತರ ಜನರು ಉದ್ಯೋಗಕ್ಕೆ ಕಷ್ಟ ಪಡುವಾಗ ರಾಜಕೀಯ ಕುಟುಂಬಸ್ಥರ ಪ್ರಭಾವಗಳು ಕಂಡು ಬಂದಿವೆ. ಈ ಪ್ರತಿಭಟನೆ ಕೇವಲ ಸರ್ಕಾರದ ವಿರುದ್ಧವಾಗಿ ಮಾತ್ರವಲ್ಲದೇ ಸ್ಥಾಪನೆಗಳ ವಿರುದ್ಧವಾಗಿ ವ್ಯಕ್ತವಾಗಿದೆ.

ಪ್ರತಿಭಟನೆಗೆ ವೇದಿಕೆಯಾಗುತ್ತಿರುವ ಯುವ ಜನತೆ; ಹೊಸ ಹೋರಾಟದ ರೂಪವೇ?: ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಪ್ರತಿಭಟನೆಯಲ್ಲಿ ಯುವ ಜನತೆ ಪ್ರಮುಖ ಪಾತ್ರವಹಿಸಿದ್ದು, ಸಾಂಪ್ರದಾಯಿಕ ಪಕ್ಷಗಳ ವಿರುದ್ಧದ ಅಸಮಾಧಾನಕ್ಕೆ ಅವರಿಗೆ ವೇದಿಕೆ ಒದಗಿಸಿದ್ದು, ಡಿಜಿಟಲ್​ ಫ್ಲಾಟ್​ಫಾರ್ಮ್​ಗಳು ಜನರು ಒಟ್ಟುಗೂಡುವಲ್ಲಿನ ಮೂಲ ಕಾರಣ ಮತ್ತು ಜಾಗತಿಕವಾಗಿ ಅವುಗಳ ಕಾರಣ ಹೆಚ್ಚಿಸುವಲ್ಲಿ ಪ್ರಮುಖವಾಯಿತು. ಈ ಹಿಂದೆ ಪ್ರತಿಭಟನೆಗಳು ಒಂದು ಪ್ರದೇಶದಲ್ಲಿ ಆರಂಭವಾಗಿದ್ದು, ಸಂಘಟನೆಗಳು, ಪಕ್ಷದ ನಾಯಕರು ಅಥವಾ ಧಾರ್ಮಿಕ ಸಂಘಟನೆಗಳು ಅದರ ಮುಂದಾಳತ್ವ ವಹಿಸುತ್ತಿದ್ದವು. ಈ ಚಳವಳಿಗಳು ವ್ಯಾಪ್ತಿ ಸೀಮಿತವಾಗಿದ್ದು, ನಾಯಕತ್ವದ ಕೊರತೆ ಇತ್ತು. ಹಾಗೇ ಅನ್ಯಾಯದ ವಿರುದ್ಧ ಹೆಚ್ಚು ಸ್ಪಂದಿಸಿದ್ದವು. ಶಾಶ್ವತ ರಾಜಕೀಯ ಬದಲಾವಣೆಯನ್ನು ಸೃಷ್ಟಿಸುವಲ್ಲಿ ಇಂತಹ ವಿಕೇಂದ್ರೀಕೃತ ಚಳವಳಿಗಳ ಪರಿಣಾಮಕಾರಿತ್ವವು ಚರ್ಚಾಸ್ಪದವಾಗಿದ್ದರೂ, ಯಥಾಸ್ಥಿತಿಯನ್ನು ಅಡ್ಡಿಪಡಿಸುವ ಅವುಗಳ ಸಾಮರ್ಥ್ಯವು ನಿರಾಕರಿಸಲಾಗದು.

ಆದಾಗ್ಯೂ ಸಾಂಸ್ಥಿಕ ಕಾರ್ಯವಿಧಾನಗಳಿಗಿಂತ ಹಿಂಸಾತ್ಮಕ ಬೀದಿ ಪ್ರತಿಭಟನೆಗಳ ಮೂಲಕ ಸರ್ಕಾರಗಳನ್ನು ಉರುಳಿಸುವ ಗುಂಪು ಮನಸ್ಥಿತಿಯ ಏರಿಕೆ, ಪ್ರಜಾಪ್ರಭುತ್ವದ ಸ್ಥಿತಿಸ್ಥಾಪಕತ್ವದ ಬಗ್ಗೆ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾಗರಿಕ ಅಸಹಕಾರ ಮತ್ತು ಅವ್ಯವಸ್ಥೆಯ ನಡುವೆ ಒಂದು ಸೂಕ್ಷ್ಮ ಗೆರೆ ಇದೆ. ಪ್ರತಿಭಟನೆಯು ಪ್ರಜಾಸತ್ತಾತ್ಮಕ ಹಕ್ಕಾಗಿದ್ದರೂ, ಸಾರ್ವಜನಿಕ ಆಸ್ತಿಯ ನಾಶ ಮತ್ತು ಹಿಂಸಾಚಾರದ ಉಲ್ಬಣವು ಪ್ರತಿಭಟನಾಕಾರರು ರಕ್ಷಿಸಲು ಬಯಸುವ ಸ್ವಾತಂತ್ರ್ಯಗಳನ್ನೇ ದುರ್ಬಲಗೊಳಿಸುವ ಅಪಾಯವನ್ನುಂಟು ಮಾಡುತ್ತದೆ.

ನೇಪಾಳದ ದುರ್ಬಲ ಪ್ರಜಾಪ್ರಭುತ್ವದ ಭವಿಷ್ಯ: ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಜೊತೆಗೆ ನೇಪಾಳದಲ್ಲಿನ ಯುವ ಜನತೆ ಮುಂದಾಳತ್ವದ ಪ್ರತಿಭಟನೆಗಳನ್ನು ಗಮನಿಸಿದಾಗ ದಕ್ಷಿಣ ಏಷ್ಯಾದಾದ್ಯಂತ ರಾಜಕೀಯವ ವ್ಯವಸ್ಥೆಗಳ ಜೊತೆಗೆ ವ್ಯಾಪಕ ಅಸಮಾಧಾನದ ಪ್ರವೃತ್ತಿ ಕಾಣಬಹುದು. ಪ್ರತಿ ಪ್ರಕರಣವೂ ಅದರದೇ ಆದ ಸಂಕೀರ್ಣತೆ, ಆರ್ಥಿಕ ಕಠಿಣ ಸಮಯದ ಸಾಮಾನ್ಯ ಧ್ಯೇಯ, ಗಣ್ಯರ ನಿರ್ಭಯ ಮತ್ತು ಸಾಂಸ್ಥಿಕ ನಿರುತ್ಸಾಹವೂ ಸ್ಪಷ್ಟವಾಗಿ ಕಂಡಿದೆ. ನೇಪಾಳದಂತಹ ದೇಶವು ಈಗಾಗಲೇ ಭಾರತ, ಚೀನಾ ಮತ್ತು ಅಮೆರಿಕದಂತೆ ಭೌಗೋಳಿಕ ರಾಜಕೀಯಕ್ಕೆ ಸಿಲುಕಿದ್ದು, ಇಲ್ಲಿನ ದೀರ್ಘಕಾಲದ ಬಿಕ್ಕಟ್ಟಿಗೆ ಕಾರಣವಾಗಬಹುದು. ಕೊನೆಯಲ್ಲಿ, ರಾಜಕೀಯ ಗಣ್ಯರು ಮತ್ತು ಯುವ ಪ್ರತಿಭಟನಾಕಾರರಲ್ಲಿ ಬಿಕ್ಕಟ್ಟಿನಲ್ಲಿ ನಿಜವಾದ ಬಲಿಪಶು ಪ್ರಜಾಪ್ರಭುತ್ವವೇ ಆಗಿರಬಹುದು ಎಂಬುದನ್ನು ಗಮನಿಸಬೇಕಿದೆ.

📚 Related News