ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮಗಳು ದುವಾ ಜನಿಸಿ ಒಂದು ವರ್ಷವಾಗಿದೆ. ಮೊದಲ ಹುಟ್ಟುಹಬ್ಬವನ್ನು ಯಾವುದೇ ಅದ್ಧೂರಿ ಆಚರಣೆಗಳಿಲ್ಲದೇ ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಬಹುಬೇಡಿಕೆ ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳೋ ಮೂಲಕ ಸೆಲೆಬ್ರೇಷನ್ನ ಒಂದು ನೋಟವನ್ನೊದಗಿಸಿದ್ದಾರೆ.
ಮನೆಯಲ್ಲೇ, ಸರಳ ಆದ್ರೆ ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸಲು ನಟಿ ಚಾಕೊಲೇಟ್ ಕೇಕ್ ತಯಾರಿಸಿದ್ದರು. ಇಂದು ಬೆಳಗ್ಗೆ, ದೀಪಿಕಾ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಜನ್ಮದಿನಾಚರಣೆಯ ಒಂದು ನೋಟ ಒದಗಿಸಿದ್ದಾರೆ. ಹೂವುಗಳು ಮತ್ತು ಮೇಣದಬತ್ತಿಗಳಿಂದ ಸುತ್ತುವರೆದಿರುವ ಕತ್ತರಿಸಿದ ಕೇಕ್‌ನ ಫೋಟೋವನ್ನು ಪೋಸ್ಟ್ ಮಾಡಿ, "ಮೈ ಲವ್ ಲ್ಯಾಂಗ್ವೇಜ್? ನನ್ನ ಮಗಳ ಮೊದಲ ಹುಟ್ಟುಹಬ್ಬಕ್ಕೆ ಕೇಕ್ ರೆಡಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ. ಜನಪ್ರಿಯ ತಾರೆಯ ಈ ಪೋಸ್ಟ್ಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಪ್ರತಿಕ್ರಿಯಿಸಿ, "ಹ್ಯಾಪಿ ಬರ್ತ್ಡೇ ದುವಾ ಮತ್ತು ಪೋಷಕರೇ" ಎಂದು ತಿಳಿಸಿದರೆ, ನಟಿ ಬಿಪಾಶಾ ಬಸು "ಹ್ಯಾಪಿ ಬರ್ತ್ಡೇ ದುವಾ ಮತ್ತು ಬೇಬಿ ಮಮ್ಮಾ ಅಂಡ್ ಪಾಪಾ" ಎಂದು ತಿಳಿಸಿದ್ದಾರೆ. ಅಭಿಪ್ರಾಯ ಹಂಚಿಕೊಂಡ ಅಭಿಮಾನಿಯೊಬ್ಬರು, "ನೀವು ಪ್ರಸಿದ್ಧ ಕಲಾವಿದರಾಗಿದ್ದರೂ, ಅತ್ಯಂತ ಐಷಾರಾಮಿ ಕೇಕ್‌ಗಳನ್ನು ಸುಲಭವಾಗಿ ಖರೀದಿಸಬಹುದಾದರೂ, ನಿಮ್ಮ ಮಗುವಿಗೆ ಪ್ರೀತಿ ಮತ್ತು ಕಾಳಜಿಯಿಂದ ಕೇಕ್ ತಯಾರಿಸಿದ್ರಿ. ಇದು ತಾಯ್ತನದ ಶುದ್ಧ ಸಾರವನ್ನು ಪ್ರತಿಬಿಂಬಿಸುತ್ತದೆ - ಯಾವುದೇ ಐಷಾರಾಮಿ ವಿಷಯಗಳು ಬದಲಾಯಿಸಲಾಗದ ಭಾವನಾತ್ಮಕ ಬಂಧ ಮತ್ತು ವೈಯಕ್ತಿಕ ಸ್ಪರ್ಶ. ನಿಜವಾಗಿಯೂ ಪ್ರಶಂಸನೀಯ! ಹ್ಯಾಟ್ಸ್ ಆಫ್ ಟು ಯು. ಇತರ ಪೋಷಕರಿಗೆ ನೀವು ಮಾದರಿಯಾಗಿದ್ದೀರಿ'' ಎಂದಿದ್ದಾರೆ.
ಬಾಲಿವುಡ್‌ನ ಪವರ್ಫುಲ್ ಕಪಲ್ ಸೆಪ್ಟೆಂಬರ್ 8, 2024 ರಂದು ಮಗಳು ದುವಾಳನ್ನು ಸ್ವಾಗತಿಸಿದರು. "ವೆಲ್ಕಮ್ ಬೇಬಿ ಗರ್ಲ್ 8.9.2024. ದೀಪಿಕಾ ಮತ್ತು ರಣ್ವೀರ್" ಎಂಬ ಜಂಟಿ ಪೋಸ್ಟ್ ಮೂಲಕ ಶುಭ ಸುದ್ದಿ ಹಂಚಿಕೊಂಡಿದ್ದರು. 2024ರ ನವೆಂಬರ್ನಲ್ಲಿ, ಮಗಳ ಹೆಸರನ್ನು ಬಹಿರಂಗಪಡಿಸಿದರು. "ದುವಾ" ಎಂದರೆ "ಪ್ರಾರ್ಥನೆ" ಎಂದು ವಿವರಿಸಿದರು. ಜೊತೆಗೆ, ಮಗಳನ್ನು "ನಮ್ಮ ಪ್ರಾರ್ಥನೆಗಳಿಗೆ ಉತ್ತರ" ಎಂದು ಉಲ್ಲೇಖಿಸಿದ್ದರು.
ಬಾಲಿವುಡ್‌ನ ಅತ್ಯಂತ ಜನಪ್ರಿಯ ತಾರೆಯರಲ್ಲಿ ಒಬ್ಬರಾಗಿದ್ದರೂ, ದೀಪಿಕಾ ಮಹಳ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿಲ್ಲ. ಇತ್ತೀಚೆಗೆ, ವಿಮಾನ ನಿಲ್ದಾಣದಲ್ಲಿ ಅಪರಿಚಿತರು ಮಗಳ ವಿಡಿಯೋ ಮಾಡುತ್ತಿದ್ದಂತೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಮಗುವಿನ ಗೌಪ್ಯತೆ ಗೌರವಿಸಬೇಕೆಂದು ವಿನಂತಿಸಿದ್ದರು.