ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು ಬಾಂಗ್ಲಾ ಪ್ರಜೆಗಳಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದಲ್ಲಿ ಬಂಧಿಸಲಾಗಿದೆ.
ರಾಜ್ಯ ಜನ ಸದ್ಭಾವನಾ ಸಂಘಟನೆಯ ಸದಸ್ಯರು ನೀಡಿದ್ದ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ಕಾನ್ಸ್‌ಟೇಬಲ್ ಪ್ರಶಾಂತ್ ನಾವಿ ಹಾಗೂ ಮತ್ತೋರ್ವ ಖಾಸಗಿ ವ್ಯಕ್ತಿ ನಾಸೀರ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ನಾವಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ನಾಸೀರ್ ಖಾನ್ ಜೊತೆ ಪ್ರಶಾಂತ್ ನಾವಿ ಕೈಜೋಡಿಸಿದ್ದ. ಕಸ ಸಂಗ್ರಹಣೆ ಮಾಡುವ ಬಾಂಗ್ಲಾ ಪ್ರಜೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಅವರನ್ನು ಬಂಧಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಕೆಲವರನ್ನ ಬಂಧನದ ನೆಪದಲ್ಲಿ ಕರೆದೊಯ್ದು, ಹಣ ವಸೂಲಿ ಮಾಡಿರುವುದು ಸಹ ತನಿಖೆ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಸುದ್ದಿ- ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲರಿಗೆ ಕರೆ, ಪ್ರಕರಣ ದಾಖಲು: ಕೇಂದ್ರ ಸಚಿವರೊಬ್ಬರ ಸೋಗಿನಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಕಲಿ ವ್ಯಕ್ತಿಯೋರ್ವ ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ಸಚಿವರೊಬ್ಬರ ಸೋಗಿನಲ್ಲಿ 2 ಬಾರಿ ಕರೆ ಮಾಡಿರುವ ವ್ಯಕ್ತಿ ಮಾತನಾಡಲು ಯತ್ನಿಸಿದ್ದಾನೆ. ಅನುಮಾನಗೊಂಡು ಪರಿಶೀಲಿಸಿದಾಗ ಕರೆ ಮಾಡಿರುವ ನಂಬರ್ ಸಚಿವರದ್ದಲ್ಲ, ನಕಲಿ ಎಂದು ತಿಳಿದು ಬಂದಿದೆ. ತಕ್ಷಣ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ರಾಜಭವನದ ಅಧಿಕಾರಿಗಳು ದೂರು ನೀಡಿದ್ದಾರೆ. ಅದರ ಅನ್ವಯ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೀಲಿಂಗ್ ಮಾಡುತ್ತಿದ್ದ ಕಳ್ಳನ ಬಂಧನ: ಬೈಕ್, ಸ್ಕೂಟರ್‌ಗಳನ್ನು ಕಳ್ಳತನ ಮಾಡಿ ವೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಇತ್ತೀಚೆಗೆ ಬೆಂಗಳೂರಿನ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದರು. ವಿಲ್ಸನ್ ಗಾರ್ಡನ್ ನಿವಾಸಿ ಸಲೀಂ ಪಾಷಾ (24) ಬಂಧಿತ ಆರೋಪಿ. ಆತನಿಂದ 18 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳು ಹಾಗೂ 1 ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷಣ ಮಾತ್ರದಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದ ಆರೋಪಿ, ಅವುಗಳನ್ನ ಬಳಸಿ ವೀಲಿಂಗ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ. ನಂತರ ಆ ದ್ವಿಚಕ್ರ ವಾಹನಗಳನ್ನ ಅಜ್ಞಾತ ಸ್ಥಳಗಳಲ್ಲಿ ಪಾರ್ಕ್ ಮಾಡುತ್ತಿದ್ದ. ಇನ್ನು ಮನೆಗೆ ಹೋದರೆ ಪೊಲೀಸರು ಹುಡುಕಿಕೊಂಡು ಬರಬಹುದು ಎಂದು ಕದ್ದ ಆಟೋದಲ್ಲಿಯೇ ವಾಸ್ತವ್ಯ ಹೂಡಿದ್ದ. ಇತ್ತೀಚೆಗೆ ಜಯನಗರ 2ನೇ ಬ್ಲಾಕ್‌ನ ಆರ್.ವಿ.ಟೀಚರ್ಸ್ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಆರೋಪಿ ಎಗರಿಸಿಕೊಂಡು ಪರಾರಿಯಾಗಿದ್ದ. ದ್ವಿಚಕ್ರ ವಾಹನದ ಮಾಲೀಕ ನೀಡಿದ್ದ ದೂರಿನ ಅನ್ವಯ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಯ ಬಂಧನದಿಂದ ಈತನ ಮೇಲೆ ಕೆ.ಆರ್.ಪುರಂ, ವಿಲ್ಸನ್ ಗಾರ್ಡನ್, ಅಶೋಕನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.