ನವದೆಹಲಿ: ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಮಾತುಕತೆಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಪ್ರತಿಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ-ಅಮೆರಿಕ ಆಪ್ತ ಸ್ನೇಹಿತರಾಗಿದ್ದು, ಸಹಜ ಸಹಭಾಗಿಗಳು ಕೂಡಾ. ಎರಡೂ ದೇಶಗಳು ವ್ಯಾಪಾರ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ ಎಂದು ಮೋದಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆಯನ್ನು ಎದುರು ನೋಡುತ್ತಿದ್ದು, ಎರಡೂ ದೇಶಗಳ ಜನರ ಉಜ್ವಲ ಭವಿಷ್ಯ ಮತ್ತು ಸಮೃದ್ಧಿ ರಕ್ಷಣೆಗಾಗಿ ಒಟ್ಟಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಯಾವುದೇ ತೊಂದರೆ ಇಲ್ಲ. ಮೋದಿ ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದು, ಮುಂಬರುವ ವಾರದಲ್ಲಿ ಮಾತುಕತೆಯನ್ನು ಎದುರು ನೋಡುತ್ತಿರುವುದಾಗಿ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಬಳಿಕ ಮೋದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಭಾರತ ಬೆಂಬಲ ನೀಡುತ್ತಿದೆ. ಇದರಿಂದಾಗಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ದಂಡ ಸೇರಿದಂತೆ ಶೇ 50ರಷ್ಟು ಸುಂಕವನ್ನು ಟ್ರಂಪ್ ಹೇರಿದ್ದರು. ಅಲ್ಲದೆ, ಭಾರತ ನಮಗೆ ಉತ್ತಮ ವ್ಯಾಪಾರಿ ದೇಶ ಎಲ್ಲ ಎಂದು ಕೂಡ ಜರಿದಿದ್ದರು. ಅಮೆರಿಕದ ಈ ನೀತಿ ಅನ್ಯಾಯದಿಂದ ಕೂಡಿದೆ ಎಂದು ಭಾರತ ಟೀಕಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ದೇಶಗಳ ಎರಡು ದಶಕದ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಇದೀಗ ಭಾರತದ ವಿಚಾರದಲ್ಲಿ ಪಟ್ಟು ಸಡಿಲಿಸಲು ಮುಂದಾಗಿರುವ ಟ್ರಂಪ್, ವ್ಯಾಪಾರ ಸುಧಾರಣೆಗಳ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ಎರಡನೇ ಬಾರಿಗೆ ಎರಡು ದೇಶಗಳ ನಡುವಿನ ವ್ಯಾಪಾರ ಮಾತುಕತೆ ಕುರಿತು ಮಾತನಾಡಿದ್ದು, ಸಂಬಂಧ ಸುಧಾರಣೆಯ ಲಕ್ಷಣ ತೋರಿಸಿದೆ.
ಕಳೆದ ವಾರ ಮಾತನಾಡಿದ್ದ ಟ್ರಂಪ್, ಮೋದಿ ನನ್ನ ಉತ್ತಮ ಸ್ನೇಹಿತನಾಗಿದ್ದು, ಭಾರತದ ಸಂಬಂಧವನ್ನು ಕಳೆದುಕೊಳ್ಳುವುದಿಲ್ಲ ಎಂದಿದ್ದರು. ಎರಡು ದೇಶಗಳ ನಡುವೆ ಕುಸಿದಿರುವ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಟ್ರಂಪ್ ಹೇಳಿಕೆ ಪ್ರಕಟವಾಗುತ್ತಿದ್ದು, ಭಾರತವೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಭಾರತ ಮತ್ತು ಅಮೆರಿಕ ನಡುವೆ 'ವಿಶೇಷ ಸಂಬಂಧ'ವಿದೆ. ಎರಡೂ ದೇಶಗಳು ಸದ್ಯ ಸಂದರ್ಭೋಚಿತ ಕ್ಷಣಗಳನ್ನು ಎದುರಿಸುತ್ತಿದ್ದು, ಚಿಂತಿತರಾಗುವ ಅಗತ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಹೇಳಿದ್ದರು. ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಡುತ್ತಲೇ ಇದ್ದು, ಬಹುಶಃ ಎರಡು ದಶಕಗಳಲ್ಲಿ ಅತ್ಯಂತ ಕೆಟ್ಟ ಹಂತ ತಲುಪುತ್ತಿದೆ. ಭಾರತದೊಂದಿಗಿನ ಸಂಬಂಧಗಳನ್ನು ಪುನಃಸ್ಥಾಪಿಸಲು ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್ ಹೀಗೆ ಹೇಳಿದ್ದರು.