ಗಣೇಶೋತ್ಸವದಲ್ಲಿ ಗಲಾಟೆ ನಡೆದಿದ್ದು ದುರ್ದೈವ: ಸಚಿವ ಶಿವಾನಂದ್​ ಪಾಟೀಲ್​

ಗಣೇಶೋತ್ಸವದಲ್ಲಿ ಗಲಾಟೆ ನಡೆದಿದ್ದು ದುರ್ದೈವ: ಸಚಿವ ಶಿವಾನಂದ್​ ಪಾಟೀಲ್​
By Published : September 9, 2025 at 1:30 PM IST

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕರು ಗಣೇಶ ಚತುರ್ಥಿಯನ್ನು ಜನರಲ್ಲಿ ಒಗ್ಗಟ್ಟು ಬರಲಿ ಎಂದು ಸಾರ್ವಜನಿಕಗೊಳಿಸಿದರು. ಆದರೆ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದ ಘಟನೆ ದುರ್ದೈವದ ಸಂಗತಿ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್​ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ವೇಳೆ ಈ ರೀತಿಯ ಭಿನ್ನಾಭಿಪ್ರಾಯ ಆಗಬಾರದು. ಮದ್ದೂರು ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ನನ್ನ ಆಗ್ರಹ ಎಂದು ಸಚಿವರು ಹೇಳಿದರು.

ಸರ್ಕಾರ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುತ್ತೆ: ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೇಲೆ ಕಲ್ಲು ತೂರಾಟ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಕಲ್ಲು ತೂರಿದ್ದಾರೆ ಎಂದು ನಾನೂ ನೋಡಿಲ್ಲ. ನೀವೂ ನೋಡಿಲ್ಲ. ಈ ವಿಚಾರ ಸಿಎಂ ಗಮನಕ್ಕೂ ತಂದಿದ್ದೇವೆ. ಕಾನೂನುರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು‌.

ಪಾಕ್​ ಪರ ಘೋಷಣೆ ವಿರುದ್ಧವೂ ಕ್ರಮ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ವಿಡಿಯೋ ವೈರಲ್ ವಿಚಾರ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಸಚಿವರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಮಾಹಿತಿ ತರಿಸಿಕೊಂಡು ಕ್ರಮ ಎಂದ ಸಚಿವರು: ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಪ್ಯಾಲೆಸ್ತೀನ್​ ಧ್ವಜದ ಫೋಟೊ ಅಳವಡಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಈ ಕುರಿತಂತೆ ಮಾಹಿತಿ ತರಿಸಿಕೊಂಡು ಕ್ರಮ ತಗೊಳ್ಳುತ್ತೇನೆ. ಪ್ಯಾಲೆಸ್ತೀನ್​ ಧ್ವಜ ಹಾಕಿದ್ದು ತಪ್ಪು. ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ: ಹಾವೇರಿ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ನಿಷೇಧ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ (ವಿಜಯಪುರ) ಡಿಜೆ ಇಟ್ಟುಕೊಂಡು ವಿಸರ್ಜನೆ ಮಾಡಲಾಗಿದೆ. ಡಿಜೆ ಬಳಕೆ ಮೇಲೆ ಕೋರ್ಟ್ ಆದೇಶ ಇದೆ. ಕೆಲವು ಜಿಲ್ಲೆಗಳಲ್ಲಿ ಅನುಮತಿ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಗಣೇಶೋತ್ಸವ ಮುಗಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಇಂತಿಷ್ಟೇ ಡೆಸಿಬಲ್ ಅಂತ ಇದೆ. ಆ ಪ್ರಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ಕೊಡಬಹುದು ಎಂದು ಸಚಿವ ಶಿವಾನಂದ್​ ಪಾಟೀಲ್ ತಿಳಿಸಿದರು.

📚 Related News