ರತ್ಲಂ(ಮಧ್ಯಪ್ರದೇಶ): ಮೂರು ವರ್ಷದ ಪುಟ್ಟ ಬಾಲಕಿಯೊಬ್ಬಳು ಕೇವಲ 2 ನಿಮಿಷ 40 ಸೆಕೆಂಡುಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾಳೆ. ಮಧ್ಯಪ್ರದೇಶದ ರತ್ಲಂನ ಜಾನ್ವಿ ಸೋನಿ ಇಂತಹದ್ದೊಂದು ದಾಖಲೆ ಬರೆದ ಪುಟಾಣಿ.
ಜಾನ್ವಿ ಹನುಮಾನ್ ಚಾಲೀಸಾ ಜೊತೆಗೆ ಹಲವು ಕಠಿಣವಾದಂತಹ ಸಂಸ್ಕೃತ ಶ್ಲೋಕಗಳನ್ನು ಸಲೀಸಾಗಿ ಹೇಳಬಲ್ಲಳು. ಇಂತಹ ಅದ್ಭುತ ಸ್ಮರಣಶಕ್ತಿ ಹೊಂದಿರುವ ಈ ಪುಟಾಣಿ ವಿಶ್ವ ದಾಖಲೆ ಬರೆದಿದ್ದು, ಇವರ ಈ ಸಾಧನೆಯು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ವೆಬ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಜಾನ್ವಿಯ ಈ ವಿಶೇಷ ಸಾಧನೆಗೆ ರತ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶ್ವ ದಾಖಲೆ ಬರೆದಿರುವ ಜಾನ್ವಿ, ಈಗ ರಾಮಚರಿತ ಮಾನಸದ ದ್ವಿಪದಿ ಮತ್ತು ಚತುರ್ಥಾಂಶಗಳನ್ನು ಕಂಠಪಾಠ ಮಾಡುವಲ್ಲಿ ನಿರತರಾಗಿದ್ದಾಳೆ.

ಜಾನ್ವಿಗೆ ಕೇವಲ ಮೂರು ವರ್ಷ ಮೂರು ತಿಂಗಳು ಮಾತ್ರ. ಅವಳು ತನ್ನ ತೊದಲು ನಾಲಿಗೆಯಿಂದಲೇ ಹನುಮಾನ್ ಚಾಲೀಸಾ ಪದ್ಯಗಳನ್ನು ಪಠಿಸುತ್ತಾಳೆ. ಜನಿಸಿದ 8-9 ತಿಂಗಳಲ್ಲೇ ಮಾತನಾಡಲು ಕಲಿತಿದ್ದಾಳೆ. ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಪುನಃ ಹೇಳುತ್ತಿದ್ದಳು. ಆಗಲೇ ಅವಳ ಸ್ಮರಣಶಕ್ತಿ ಬಗ್ಗೆ ನಮಗೆ ಗೊತ್ತಾಗಿತ್ತು. ಆರಂಭದಲ್ಲಿ ಆಕೆಯ ಅಜ್ಜಿ ಗಾಯತ್ರಿ ಮಂತ್ರ ಮತ್ತು ಗಣೇಶ ವಂದನಾ ಪಠಣಗಳನ್ನು ಹೇಳತೊಡಗಿದಳು.

ಹೇಳಿದಂತೆ ಪುನಃ ಹೇಳುತ್ತಿದ್ದಳು. ಬಳಿಕ ಅವಳ ಈ ಸ್ಮರಣ ಶಕ್ತಿ ಹಾಗೂ ಆಸಕ್ತಿಯನ್ನು ಕಂಡು ಆಕೆಯ ಮುಂದೆ ನಾವೆಲ್ಲರೂ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದೆವು. ಕೆಲವೇ ದಿನಗಳಲ್ಲಿ, ಜಾನ್ವಿ ಹನುಮಾನ್ ಚಾಲೀಸಾವನ್ನು ಕಂಠಪಾಠ ಮಾಡಿದಳು. ಒಮ್ಮೆ ಓದಿದರೆ ಸಾಕು ಅದನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತಾಳೆ. ಈಗ ಅವಳನ್ನು ನರ್ಸರಿಗೆ ಸೇರಿಸಿದ್ದೇವೆ ಎನ್ನುತ್ತಾರೆ ಜಾನ್ವಿ ಪೋಷಕರು.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಹನುಮಾನ್ ಚಾಲೀಸಾವನ್ನು ಅರಳು ಹುರಿದಂತೆ ಹೇಳುವ ತನ್ನ ಮಗಳ ಸ್ಮರಣ ಶಕ್ತಿ ಕಂಡ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರರ ಸದಸ್ಯರಾದ ಶೈಲೇಂದ್ರ ಸಿಂಗ್, ತಮ್ಮನ್ನು ಸಂಪರ್ಕಿಸಿದ್ದರು. ಅಲ್ಲದೇ ಈ ವಯಸ್ಸಿನಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಯಾವುದೇ ದಾಖಲೆಗಳಿಲ್ಲ ಎಂಬುದರ ಬಗ್ಗೆಯೂ ನಮಗೆ ಮಾಹಿತಿ ನೀಡಿದ್ದರು. ಜೊತೆಗೆ ತಮ್ಮ ತಂಡದ ಮುಂದೆ ಹನುಮಾನ್ ಚಾಲೀಸಾ ಪಠಿಸಲು ಸಹ ಅವರು ಕೇಳಿಕೊಂಡಿದ್ದರು. ಅದರಂತೆ ಜಾನ್ವಿ ಅವರ ಮುಂದೆ 2 ನಿಮಿಷ 40 ಸೆಕೆಂಡುಗಳಲ್ಲಿ ಹನುಮಾನ್ ಚಾಲೀಸಾವನ್ನು ನಿಲ್ಲಿಸದೇ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದಾಳೆ . ಈಗ ರಾಮ ಚರಿತಮಾನಸ ದ್ವಿಪದಿ ಮತ್ತು ಶ್ಲೋಕಗಳನ್ನು ಕಂಠಪಾಠ ಮಾಡುತ್ತಿದ್ದಾಳೆ. ಈ ವಿಶೇಷ ಸಾಧನೆ ಕಂಡು ರತ್ಲಂನ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ ಸನ್ಮಾನಿಸಿದ್ದಾರೆ. - ನರೇಂದ್ರ, ಜಾನ್ವಿಯ ತಂದೆ.
"ಶಾಲೆ ಪ್ರಾರಂಭಿಸುವ ಮೊದಲು, 1 ರಿಂದ 5 ವರ್ಷದ ಮಕ್ಕಳು ವೀಕ್ಷಣೆಯ ಮೂಲಕ ಕಲಿಯುತ್ತಾರೆ. ಅವರು ಕುಟುಂಬದಲ್ಲಿ ತಮ್ಮ ಸುತ್ತಲೂ ನೋಡುವ ಮತ್ತು ಕೇಳುವ ಮೂಲಕ ಕಲಿಯಲು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಅವರ ಸ್ಮರಣ ಶಕ್ತಿಯೂ ಹೆಚ್ಚಾಗುತ್ತದೆ. ಕೆಲವು ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಕ್ಲಿಷ್ಟಕರವಾದ ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡುವ ಜಾನ್ವಿ ಅವರ ಪ್ರತಿಭೆಯೂ ಇದಕ್ಕೆ ಉದಾಹರಣೆಯಾಗಿದೆ" ಎನ್ನುತ್ತಾರೆ ಮಕ್ಕಳ ಸಲಹೆಗಾರ್ತಿ ಅದಿತಿ ಮಿಶ್ರಾ.