ಬೆಂಗಳೂರು: ಆತಮೊದಲ ಮದುವೆ ಮುಚ್ಚಿಟ್ಟು ಮತ್ತೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಎರಡನೇ ಮದುವೆ ಬಯಲಾದ ನಂತರ ದಂಪತಿ ನಡುವೆ ಪ್ರಾರಂಭವಾದ ಜಗಳ ಹೆಂಡತಿ ಕೊಲೆಯಲ್ಲಿ ಅಂತ್ಯವಾಗಿದೆ. ಯಲಹಂಕದ ಕೆಂಚೇನಹಳ್ಳಿ ಗ್ರಾಮದಲ್ಲಿ ಸೆಪ್ಟಂಬರ್ 3ರ ಮುಂಜಾನೆ 3 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅಮೀನಾ (32) ಕೊಲೆಯಾದ ಪತ್ನಿ. ಕೊಲೆ ಆರೋಪಿಯಾಗಿರುವ ಪತಿ ಸೈದುಲುನನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊದಲ ಮದುವೆ ವಿಷಯ ಮುಚ್ಚಿಟ್ಟು ಅಮೀನಾಳನ್ನು ಪ್ರೀತಿಸಿ ಮದುವೆ: ಕೊಲೆಯಾದ ಮಹಿಳೆ ಅಮೀನಾ ಮತ್ತು ಆರೋಪಿ ಸೈದುಲು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯವರು. 2019ರಲ್ಲಿ ಸೈದುಲು ತನ್ನ ಮೊದಲ ಮದುವೆ ವಿಷಯ ಮುಚ್ಚಿಟ್ಟು ಅಮೀನಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಗಂಡನಿಗೆ ಈ ಮೊದಲೇ ಮದುವೆಯಾಗಿದ್ಧ ವಿಚಾರ ತಿಳಿದ ಅಮೀನಾ, ಸೈದುಲು ಜೊತೆ ಜಗಳ ಮಾಡಿದ್ದಳು. ಅಮೀನಾ ಕುಟುಂಬಸ್ಥರು ಇಬ್ಬರಿಗೂ ಬುದ್ಧಿ ಮಾತು ಹೇಳಿ ಇಬ್ಬರನ್ನು ಸಮಾಧಾನಪಡಿಸಿದ್ದರು. ಆದರೆ ಇದೇ ವಿಚಾರ ಮುಂದುವರೆದು ಅಮೀನಾಳ ಕೊಲೆಯಾಗಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲ ಮದುವೆ ಮುಚ್ಚಿಟ್ಟ ವಿಚಾರವಾಗಿ ದಂಪತಿ ನಡುವೆ ಜಗಳ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಸಂಜೀತ್. ವಿ. ಜೆ, ಕೂಲಿ ಕೆಲಸ ಮಾಡುವ ಸೈದುಲು ಒಂದೂವರೆ ತಿಂಗಳ ಹಿಂದೆ ಯಲಹಂಕದ ಕೆಂಚೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೈದುಲು ಮೊದಲ ಮದುವೆ ಮುಚ್ಚಿಟ್ಟ ವಿಚಾರ ಅಮೀನಾಳಿಗೆ ತಿಳಿದ ನಂತರ ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದರು.
ಗಂಭೀರವಾಗಿ ಹಲ್ಲೆಗೊಳಗಿದ್ದ ಅಮೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವು : ಸೆ. 2ರಂದು ಇದೇ ವಿಚಾರಕ್ಕೆ ಪತಿ - ಪತ್ನಿ ನಡುವೆ ಜಗಳವಾಗಿತ್ತು. ಸೆಪ್ಟಂಬರ್ 3ರ ಮುಂಜಾನೆ 3 ಗಂಟೆ ಸಮಯದಲ್ಲಿ ಮರದ ರಿಪೀಸ್ನಿಂದ ಪತ್ನಿ ಅಮೀನಾಳ ಮೇಲೆ ಸೈದುಲು ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರ ಸ್ವರೂಪದ ಹಲ್ಲೆಗೊಳಗಾದ ಅಮೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿ ಸೈದುಲುನನ್ನು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ದಸ್ತಗಿರಿ ಮಾಡಲಾಗಿದೆ, ವಿಚಾರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.