ಫುಟ್ಬಾಲ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ ಹಂಗೇರಿ ವಿರುದ್ಧ 3-2 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಮುಂದಿನ ವರ್ಷ ಮೆಕ್ಸಿಕೋ, ಅಮೆರಿಕ ಮತ್ತು ಕೆನಡಾದಲ್ಲಿ ನಡೆಯಲಿರುವ ವಿಶ್ವಕಪ್ ಸರಣಿಯಲ್ಲಿ ಒಟ್ಟು 48 ದೇಶಗಳು ಭಾಗವಹಿಸಲಿವೆ. ಈ ಹಿಂದೆ 2022ರ ಫುಟ್ಬಾಲ್ ವಿಶ್ವಕಪ್ ಸರಣಿಯಲ್ಲಿ ಕೇವಲ 32 ತಂಡಗಳು ಮಾತ್ರ ಭಾಗವಹಿಸಿದ್ದವು, ಈಗ ಇನ್ನೂ 16 ತಂಡಗಳು ಸೇರ್ಪಡೆಗೊಂಡಿವೆ. ಈ ಹಿನ್ನೆಲೆ ಫುಟ್ಬಾಲ್ ವಿಶ್ವಕಪ್ನ ಅರ್ಹತಾ ಪಂದ್ಯಗಳು ನಡೆಯುತ್ತಿವೆ.
ಇದರ ಭಾಗವಾಗಿ ಇಂದು ಪೋರ್ಚುಗಲ್ ಮತ್ತು ಹಂಗೇರಿ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳು ಉತ್ತಮ ಆರಂಭ ಪಡೆದುಕೊಂಡಿದ್ದವು. ಹಂಗೇರಿ ಪರ ಬರ್ನಾಬಸ್ ವರ್ಗಾ 21ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂಡದುಕೊಟ್ಟರು. ಇದಕ್ಕೆ ಪ್ರತಿಯಾಗಿ, ಪೋರ್ಚುಗಲ್‌ನ ಬರ್ನಾರ್ಡೊ ಸಿಲ್ವಾ 36ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರಿಂದಾಗಿ ಮೊದಲಾರ್ಧದ ಅಂತ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿ 1-1 ಅಂಕಗಳಿಂದ ಪಂದ್ಯ ಸಮಬಲಗೊಳಿಸಿದವು.
ದ್ವಿತೀಯಾರ್ಧದ ಆರಂಭದಲ್ಲಿ ಪೋರ್ಚುಗಲ್ ಪ್ರಬಲ ಪೈಪೋಟಿ ನೀಡಿತು. ಈ ವೇಳೆ ತಂಡಕ್ಕೆ 58ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶ ಸಿಕ್ಕಿತು. ಇದನ್ನು ಸದುಪಯೋಗ ಪಡಿಸಿಕೊಂಡ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ಗೋಲ್ ಗಳಿಸಿ ತಂಡವನ್ನು ಮುನ್ನಡೆಸಿದರು.
84ನೇ ನಿಮಿಷದಲ್ಲಿ ಜೋವೊ ಕ್ಯಾನ್ಸೆಲೊ ಮತ್ತೊಂದು ಗೋಲು ಗಳಿಸಿ ಪೋರ್ಚುಗಲ್‌ಗೆ 3-1 ಮುನ್ನಡೆ ಒದಗಿಸಿದರು. ಮತ್ತೊಂದೆಡೆ, ಸೋಲನ್ನು ತಪ್ಪಿಸಲು ಹೆಣಗಾಡುತ್ತಿದ್ದ ಹಂಗೇರಿ ಪರ ಕೊನೆಯದಾಗಿ 86ನೇ ನಿಮಿಷದಲ್ಲಿ ಬರ್ನಾಬಸ್ ವರ್ಗಾ ಮತ್ತೊಂದು ಗೋಲು ಕಲೆಹಾಕಿದರು. ಆದರೆ, ಆ ನಂತರ ಹಂಗೇರಿ ತಂಡದ ಎಲ್ಲಾ ಗೋಲು ಪ್ರಯತ್ನಗಳನ್ನು ಪೋರ್ಚುಗಲ್ ತಂಡ ವಿಫಲಗೊಳಿಸಿತು.
ಪರಿಣಾಮವಾಗಿ, ಪೋರ್ಚುಗಲ್ ತಂಡ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ತಂಡವು ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಡ್ರಾ ಸಾಧಿಸಿ ಲೀಗ್ ಎ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮತ್ತೊಂದೆಡೆ, ಹಂಗೇರಿ ತಂಡವು ಇದುವರೆಗೆ 6 ಪಂದ್ಯಗಳನ್ನು ಆಡಿ ಒಂದು ಗೆಲುವು, ಎರಡು ಸೋಲು ಮತ್ತು ಮೂರು ಡ್ರಾ ಸಾಧಿಸಿ ಕೇವಲ 6 ಅಂಕಗಳನ್ನು ಪಡೆದುಕೊಂಡಿದೆ.
ದಾಖಲೆ ಬರೆದ ರೊನಾಲ್ಡೊ: ಈ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಏಕೈಕ ಗೋಲು ಗಳಿಸಿ ಗ್ವಾಟೆಮಾಲಾದ ಮಾಜಿ ಸ್ಟ್ರೈಕರ್ ಕಾರ್ಲೋಸ್ ರುಯಿಜ್ ಅವರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಸರಿಗಟ್ಟಿದರು. ರೊನಾಲ್ಡೊ ಈಗ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ 39 ಗೋಲುಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 36 ಗೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಪೋರ್ಚುಗಲ್ ಪರ ಇದುವರೆಗೆ 223 ಪಂದ್ಯಗಳನ್ನು ಆಡಿರುವ ಕ್ರಿಸ್ಟಿಯಾನೊ ರೊನಾಲ್ಡೊ 141 ಗೋಲುಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಲಿಯೋನೆಲ್ ಮೆಸ್ಸಿ 194 ಪಂದ್ಯಗಳಲ್ಲಿ 114 ಗೋಲುಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.