'Gen Z' ಆಕ್ರೋಶಕ್ಕೆ ನೇಪಾಳ ಧಗಧಗ: ಸಂಸತ್ತು, ಪ್ರಧಾನಿ, ಮಂತ್ರಿಗಳ ಮನೆಗಳಿಗೆ ಬೆಂಕಿ; ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನ

'Gen Z' ಆಕ್ರೋಶಕ್ಕೆ ನೇಪಾಳ ಧಗಧಗ: ಸಂಸತ್ತು, ಪ್ರಧಾನಿ, ಮಂತ್ರಿಗಳ ಮನೆಗಳಿಗೆ ಬೆಂಕಿ; ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನ
By Published : September 10, 2025 at 11:08 AM IST | Updated : September 10, 2025 at 11:17 AM IST

ಕಠ್ಮಂಡು: ನೇಪಾಳ ಜೆನ್‌ ಝಿ(Z) ಅಥವಾ ಯುವಜನರ ಕಿಚ್ಚಿಗೆ ಅಕ್ಷರಶ: ನಲುಗಿ ಹೋಗಿದೆ. ಪ್ರತಿಭಟನಾಕಾರರು ಮಂಗಳವಾರ ಸಂಸತ್ತು, ಪ್ರಧಾನಿ, ಮಾಜಿ ಪ್ರಧಾನಿ, ಮಂತ್ರಿಗಳು ಹಾಗು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ, ಮಾಜಿ ಪ್ರಧಾನಿ ಜಲನಾಥ್​ ಖನಾಲ್​ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಸಜೀವ ದಹನವಾಗಿದ್ದಾರೆ. ಪ್ರತಿಭಟನಾಕಾರರು ಬೆಂಕಿ ಹಚ್ಚಿದ ವೇಳೆ ಮನೆಯಲ್ಲಿದ್ದ ಚಿತ್ರಾಕರ್​ ಅವರು ಗಂಭೀರ ಸುಟ್ಟುಗಾಯಗಳಿಗೆ ಒಳಗಾಗಿ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಉದ್ರಿಕ್ತರ ಗುಂಪು ಮಾಜಿ ಪ್ರಧಾನಿಯ ನಿವಾಸಕ್ಕೆ ಆಗಮಿಸಿದಾಗ ರಾಜ್ಯಲಕ್ಷ್ಮಿ ಅವರು ಮನೆಯೊಳಗೆ ಇದ್ದರೂ ಲೆಕ್ಕಿಸದೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಕಿರ್ತಿಪುರ್​ ಬರ್ನ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಜೆನ್​ ಜೆಡ್‌ಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಇದರ ಪರಿಣಾಮ ಪ್ರಧಾನಿ ಕೆ.ಪಿ.ಓಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನಾಕಾರರ ಗುಂಪು ಸಂಸತ್​ ಭವನ, ಕಠ್ಮಂಡುವಿನಲ್ಲಿದ್ದ ಅಧ್ಯಕ್ಷರ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಇಟ್ಟಿದೆ.

ಈ ನಡುವೆ ಮಾತುಕತೆಯ ಮೂಲಕ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿಯುತ ನಿರ್ಣಯಕ್ಕೆ ಬರೋಣ ಎಂದು ನೇಪಾಳ ಅಧ್ಯಕ್ಷ ರಾಮ್​ ಚಂದ್ರ ಪೌಡೆಲ್​ ಪ್ರತಿಭಟನಕಾರರಿಗೆ ಕರೆ ನೀಡಿದ್ದಾರೆ.

ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದು, ಹಾನಿ ಮತ್ತು ರಕ್ತಪಾತದ ಹೊರತಾಗಿ ಈ ಬಿಕ್ಕಟ್ಟನ್ನು ಪರಿಹರಿಸಲು ಗಮನ ಹರಿಸೋಣ. ಎಲ್ಲರೂ ಶಾಂತಿಯುತವಾಗಿರಬೇಕು ಎಂದು ಮನವಿ ಮಾಡುತ್ತೇನೆ. ದೇಶ ಮತ್ತಷ್ಟು ಹಾನಿಗೊಳಗಾಗದಂತೆ ಮಾತುಕತೆಯಲ್ಲಿ ಈ ವಿಚಾರಗಳನ್ನು ಬಗೆಹರಿಸೋಣ. ಪ್ರಜಾಪ್ರಭುತ್ವದಲ್ಲಿ ನಾಗರಿಕರ ಬೇಡಿಕೆಗಳನ್ನು ಸಂವಾದ ಮತ್ತು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಅವರು ತಿಳಿಸಿದ್ದಾರೆ.

ನೇಪಾಳ ಸೇನೆ ಕೂಡ ನಾಗರಿಕರಿಗೆ ವಿಶೇಷವಾಗಿ ಯುವಜನತೆಗೆ ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ರಕ್ಷಣೆಗಾಗಿ ಸಂಯಮ ಕಾಪಾಡಿಕೊಳ್ಳುವಂತೆ ಕರೆ ನೀಡಿದೆ.

ಕಳೆದೆರಡು ದಿನಗಳಿಂದ ಕಠ್ಮಂಡುವಿನಲ್ಲಿರುವ ಸಂಸತ್​ ಮತ್ತು ಇತರೆಡೆ ಜೆನ್​ ಜೆಡ್‌ಗಳು ನಡೆಸಿರುವ ಈ ಪ್ರತಿಭಟನೆಯಿಂದಾಗಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

📚 Related News