ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಬಗ್ಗೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮಾತನಾಡಿದ್ದಾರೆ.
ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ನಿರಾಕರಿಸಿದ್ದು, ನಟ ಪರಪ್ಪನ ಅಗ್ರಹಾರದಲ್ಲಿದ್ದಾರೆ.ಜೈಲಿನ ಕೈಪಿಡಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಕಳೆದ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರಾದ ನಟ, ಬಿಸಿಲು ಕಾಣದೇ ಒಂದು ತಿಂಗಳಾಯಿತು. ನನ್ನ ಕೈಗೆ ಫಂಗಸ್ ಬಂದಿದೆ. ನನಗೊಬ್ಬನಿಗೆ ಮಾತ್ರ ವಿಷ ನೀಡುವಂತೆ ಆದೇಶಿಸಬೇಕೆಂದು ಕೇಳಿಕೊಂಡರು. ಈ ಬಗ್ಗೆ ಮಂಗಳವಾರದಂದು ಪ್ರತಿಕ್ರಿಯಿಸಿದ್ದ ಗೆಳೆಯ - ನಟ ರಾಜವರ್ಧನ್, 'ಅಣ್ಣನ ಪರಿಸ್ಥಿತಿ ಯಾವ ಶತ್ರುಗಳಿಗೂ ಬೇಡ' ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ, ಕಾಟೇರ ಸಿನಿಮಾ ಖ್ಯಾತಿಯ ನಿರ್ದೇಶಕ - ದರ್ಶನ್ ಗೆಳೆಯ ತರುಣ್ ಕಿಶೋರ್ ಸುಧೀರ್ ಪ್ರತಿಕ್ರಿಯಿಸಿದ್ದಾರೆ.
'ದರ್ಶನ್ ಸರ್ ಡೆವಿಲ್ ಸಿನಿಮಾ ಮಾಡ್ತಿದ್ರು. ಅದಾದ ಬಳಿಕ ನಮ್ಮ ಸಿನಿಮಾಗೆ ಬರುತ್ತೇನೆ ಎಂದು ತಿಳಿಸಿದ್ರು. ಅದೇ ನಂಬಿಕೆಯಲ್ಲಿ ನಾನಿದ್ದೇನೆ. ಆ ಸಿನಿಮಾ ಮುಗಿದ ಬಳಿಕ ನಮ್ಮನ್ನು ಕರೆದ್ರೆ ಪ್ರೀತಿಯಿಂದ ಹೋಗಿ ಸಿನಿಮಾ ಮಾಡ್ತೀನಿ' ಎಂದು ತಿಳಿಸಿದರು.
''ವಿಷ ಕೊಡಿ ಎಂದು ಹೇಳಿರೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ಅದರ ಬಗ್ಗೆ ನಾನು ಕಮೆಂಟ್ ಮಾಡಬಾರದು. ಆದ್ರೂ, ಅವರನ್ನು ಬಹಳ ಹತ್ತಿರದಿಂದ ನೋಡಿರೋದ್ರಿಂದ, ಅವರು ಬಹಳ ಸ್ಟ್ರಾಂಗ್ ಪರ್ಸನ್. ಏನೇ ನೋವಿದ್ರೂ ತೋರಿಸಿಕೊಳ್ಳಲ್ಲ. ಹಾಗೇನಾದರೂ ಅವರು ಹೇಳಿದ್ದಾರಂದ್ರೆ, ಅವರು ಎಂಥ ಸಿಚುವೇಷನ್ಗೆ ಹೋಗಿರಬೇಕೆಂಬುದನ್ನು ಇಮ್ಯಾಜಿನ್ ಮಾಡಿ. ಆ ವ್ಯಕ್ತಿ ಅದೆಷ್ಟು ನೊಂದಿರಬೇಡ'' ಎಂದು ತಿಳಿಸಿದರು.
''ದರ್ಶನ್ ಅವರು ಬಹಳ ಸ್ಟ್ರಾಂಗ್ ವ್ಯಕ್ತಿ. ಜೈಲಿನಲ್ಲಿ ಕಾನೂನು ಪ್ರಕಾರ ಎಲ್ಲಾ ಸೌಲಭ್ಯಗಳು ಇರುತ್ತವೆ. ಅದಾಗ್ಯೂ, ಅವರು ಹೀಗೆ ಮಾತನಾಡಿದ್ದಾರೆ ಅಂದ್ರೆ ಅವರು ಎಂಥಾ ಪರಿಸ್ಥಿತಿಯಲ್ಲಿ ಇರಬಹುದು. ಅವರಿಗೆ ಎಷ್ಟೇ ನೋವಿದ್ರೂ, ತೋರಿಸಿಕೊಳ್ಳದೇ ಸಿನಿಮಾ ಶೂಟಿಂಗ್ ಮಾಡಿದ್ದಾರೆ. ಅಷ್ಟು ಸ್ಟ್ರಾಂಗ್ ಅವರು. ಆದ್ರೆ ಸದ್ಯ ಹೇಗಿದ್ದಾರೋ'' ಎಂದು ಬೇಸರ ವ್ಯಕ್ತಪಡಿಸಿದರು.
''ದರ್ಶನ್ ಸರ್ ಹೊರಗಿದ್ದಾಗ ಸಿಂಧೂರ ಲಕ್ಷ್ಮಣ ಸಿನಿಮಾವನ್ನು ನಿರ್ಮಾಪಕ ಬಿ ಸುರೇಶ್ ಅನೌನ್ಸ್ ಮಾಡಿದ್ರು. ನಾನು ದರ್ಶನ್ ಅವರ 59ನೇ ಸಿನಿಮಾ ನಿರ್ದೇಶನ ಮಾಡೋ ಮಾತುಕತೆ ಆಗಿದೆ. ಅವರು ಹೊರ ಬಂದ ಮೇಲೆ ಸಿನಿಮಾದ ಮುಂದಿನ ಕೆಲಸ ಶುರುವಾಗಲಿದೆ'' ಎಂದು ತಿಳಿಸಿದರು.
ದರ್ಶನ್ ತೂಗುದೀಪ - ತರುಣ್ ಕಿಶೋರ್ ಸುಧೀರ್ ಸ್ನೇಹ: 60-70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಖಳನಟರಾಗಿ ಮಿಂಚಿದವರು ಸುಧೀರ್. ತರುಣ್, ಅವರ ಎರಡನೇ ಮಗ. ಸ್ಟಾರ್ ಖಳನಟನ ಮಗನಾಗಿದ್ರೂ ತರುಣ್ ಚಿತ್ರರಂಗದಲ್ಲಿ, ಸಹ ನಟನಾಗಿ, ಸಹ ನಿರ್ದೇಶಕನಾಗಿ ಗುರುತಿಸಿಕೊಂಡು, 2017ರಲ್ಲಿ ಬಿಡುಗಡೆಯಾದ ಚೌಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ತರುಣ್ ಒಟ್ಟಿಗೆ ಕೆಲಸ ಮಾಡಿದ್ರು. ಈ ಚಿತ್ರ ಸಕ್ಸಸ್ ಕಂಡು, ಇವರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು.
ನಂತರದ ದಿನಗಳಲ್ಲಿ ಇವರ ಬಾಂಧವ್ಯ ಮತ್ತಷ್ಟು ಬೆಳೆದು, ಕಾಟೇರ ಸಿನಿಮಾ ಮೂಡಿಬರುತ್ತದೆ. ತರುಣ್ ನಿರ್ದೇಶನದ ಕಾಟೇರ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಬ್ಯಾಕ್ ಟು ಬ್ಯಾಕ್ ದರ್ಶನ್ಗೆ ಸಿನಿಮಾ ಮಾಡಿದ ತರುಣ್, ದರ್ಶನ್ ಅವರಿಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಕಾಟೇರ ಸಕ್ಸಸ್ ಆದಾಗ ತರುಣ್ ಹೊಸ ಕಾರು ಖರೀದಿಸಿ, ದರ್ಶನ್ ಅವರ ಕೈಯಲ್ಲಿ ಮೊದಲು ಡ್ರೈವಿಂಗ್ ಮಾಡಿಸಿದ್ರು.