ಕಠ್ಮಂಡು(ನೇಪಾಳ): ಕೆ.ಪಿ. ಶರ್ಮಾ ಓಲಿ ಮಂಗಳವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅವರ ಕಚೇರಿಗೆ ಪ್ರವೇಶಿಸಿದ ಸ್ವಲ್ಪ ಸಮಯದ ನಂತರ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ರಾಜೀನಾಮೆಗೂ ಕೆಲವು ಗಂಟೆಗಳ ಮೊದಲು, ಸೋಮವಾರ ನಡೆದ ಸಾವುನೋವುಗಳಿಗೆ ಹೊಣೆ ಹೊತ್ತುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಬಾಲ್ಕೋಟ್‌ನಲ್ಲಿರುವ ಓಲಿ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದರು.
ಇದಕ್ಕೂ ಮೊದಲು, ವಿದ್ಯಾರ್ಥಿಗಳ ನೇತೃತ್ವದಲ್ಲಿ ದೇಶಾದ್ಯಂತ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಿ ಕೆ ಪಿ ಶರ್ಮಾ ಓಲಿ ಇಂದು ಸರ್ವಪಕ್ಷ ಸಭೆ ಕರೆದಿದ್ದರು. ಸಭೆಯ ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಸಂಜೆ 6 ಗಂಟೆಗೆ ಸಭೆ ನಡೆಸುವುದಾಗಿ ಓಲಿ ಹೇಳಿದ್ದರು. ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆಯೇ ಮಾರ್ಗ, ಹಿಂಸೆ ದಾರಿಯಲ್ಲ. ನಾವು ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಓಲಿ ಹೇಳಿದ್ದರು.
ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧವನ್ನು ವಿರೋಧಿಸಿ ಯುವ ಜನರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದರಿಂದ 19 ಜನರು ಸಾವನ್ನಪ್ಪಿದ್ದರೆ 300ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಗೃಹ ಸಚಿವ ರಮೇಶ್ ಲೇಖಕ್ ಸೋಮವಾರ ರಾಜೀನಾಮೆ ನೀಡಿದ್ದರು. ಗೃಹ ಸಚಿವರ ರಾಜೀನಾಮೆ ಸಾಕಾಗುವುದಿಲ್ಲ, ಪ್ರಧಾನಿಯೇ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರು ಒತ್ತಾಯಿಸಿದ್ದರು.
ಜನಪ್ರಿಯ ಸುದ್ದಿ ಪೋರ್ಟಲ್ Ukeraa.com ಸೆಪ್ಟಂಬರ್ 8 ರ ಘಟನೆಯನ್ನು "ಕಪ್ಪು ದಿನ" ಎಂದು ಬಣ್ಣಿಸಿದೆ. "ನೇಪಾಳದ ಇತಿಹಾಸದಲ್ಲಿ ಒಂದೇ ದಿನ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದರು" ಎಂದು ಮಾಧ್ಯಮ ಸಂಸ್ಥೆ ಓಲಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಮತ್ತೊಂದು ಸುದ್ದಿ ಪೋರ್ಟಲ್ ರಾಟೋಪತಿ, ಸರ್ಕಾರವು ಪ್ರತಿಭಟನಾ ನಿರತ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ವಿವೇಚನೆಯಿಲ್ಲದೆ ಗುಂಡು ಹಾರಿಸಿದೆ. ಇದು ಹೇಡಿತನದ ಕ್ರಮ, ಅತ್ಯಂತ ಶೋಚನೀಯ ಎಂದು ಬಣ್ಣಿಸಿದೆ. ಯುವ ಜನರ ನೇತೃತ್ವದ ಆಂದೋಲನವು ರಾಜಕೀಯ ಪ್ರೇರಿತವಲ್ಲ, ಬದಲಾಗಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರುದ್ಯೋಗ ಮತ್ತು ಸಾಮಾಜಿಕ ಅವ್ಯವಸ್ಥೆಯ ಬಗೆಗಿನ ಹತಾಶೆಯಿಂದ ಪ್ರೇರಣೆಗೊಂಡಿದೆ ಎಂದು ಪೋರ್ಟಲ್ ವಿವರಿಸಿದೆ.
ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರದ ನಿಷೇಧ ಹೇರಿದ್ದನ್ನು ವಿರೋಧಿಸಿ ಸೋಮವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳ ನಂತರ, ಸೋಮವಾರ ರಾತ್ರಿ ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿತು.