ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರೋ ಬಹುನಿರೀಕ್ಷಿತ 'ಕಾಂತಾರ ಚಾಪ್ಟರ್ 1' ಬಿಡುಗಡೆ ಹೊಸ್ತಿಲಿನಲ್ಲಿದೆ. ಈ ಸಿನಿಮಾ ದೇಶ ಮಾತ್ರವಲ್ಲದೇ ಪ್ರಪಂಚದ ಹಲವು ಪ್ರಮುಖ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರತಂಡ ಈ ಬಗ್ಗೆ ಒಂದಾದ ಬಳಿಕ ಒಂದರಂತೆ ಮಾಹಿತಿ ಒದಗಿಸುತ್ತಿದೆ.
ಬ್ಲಾಕ್‌ಬಸ್ಟರ್ 'ಕಾಂತಾರ'ದ ಮತ್ತೊಂದು ಭಾಗ, ಪ್ರೀಕ್ವೆಲ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಪ್ರಿಯರು ಮಾತ್ರವಲ್ಲದೇ ಸಿನಿಗಣ್ಯರೂ ಕೂಡಾ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಚಿತ್ರದ ಉತ್ತರ ಭಾರತದಾದ್ಯಂತದ ವಿತರಣೆಯನ್ನು ಎಎ ಫಿಲ್ಮ್ಸ್ ವಹಿಸಿಕೊಂಡಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಈ ಚಿತ್ರ ಪ್ರದರ್ಶನಗೊಳ್ಳಲಿದೆ.
ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಹುನಿರೀಕ್ಷಿತ ಚಿತ್ರ ಬಿಡುಗಡೆ ಆಗಲಿದ್ದು, ಪ್ರಾದೇಶಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕಾರ್ಯ ನಿರ್ವಹಿಸುತ್ತಿದೆ.
ಚಿತ್ರತಂಡ ಪೂರೈಸಿರುವ ಹೊಸ ಮಾಹಿತಿ ಪ್ರಕಾರ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದೆ. ಈ ಮೂಲಕ ಅಲ್ಲಿನ ಸಿನಿಪ್ರಿಯರು ಈ ದೈವಿಕ ಕಥೆಯನ್ನು ದೊಡ್ಡ ಪರದೆ ಮೂಲಕ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಉಳಿದಂತೆ, ಉತ್ತರ ಅಮೆರಿಕದಾದ್ಯಂತ ಪ್ರತ್ಯಂಗಿರಾ ಸಿನೆಮಾಸ್, ಯುಕೆ ಸೇರಿ ಹಲವೆಡೆ ಫಾರ್ಸ್ ಫಿಲ್ಮ್ಸ್ ಈ ಸಿನಿಮಾವನ್ನು ಬಿಡುಗಡೆಗೊಳಿಸಲಿದೆ.
ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಕಾಂತಾರ (2022) ಚಿತ್ರದ ಪ್ರೀಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ. ಭಾರತದ ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತ ಮಾತ್ರವಲ್ಲದೇ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡುವ ಭರವಸೆ ನೀಡಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್‌ನ ದೂರದೃಷ್ಟಿಯ ಭಾಗವಾಗಿರುವ ಕಾಂತಾರ ಚಾಪ್ಟರ್ 1, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ತನ್ನ ಅದ್ಭುತ ಕಥೆ, ದೃಶ್ಯ ವೈಭವ ಮತ್ತು ಮನಮುಟ್ಟುವ ಸಂಗೀತದೊಂದಿಗೆ, 'ಕಾಂತಾರ ಚಾಪ್ಟರ್ 1' 2025ರ ಅಕ್ಟೋಬರ್ 2ರಂದು ಚಿತ್ರಮಂದಿರ ಪ್ರವೇಶಿಸಲಿದೆ.