ಬೆಳಗಾವಿ: ಶಾಮನೂರು ಶಿವಶಂಕರಪ್ಪ ಕುಟುಂಬ ಬಿಟ್ಟರೆ ಒಂದೇ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಮೂರು ಟಿಕೆಟ್ ಕೊಟ್ಟಿದ್ದು ನಮ್ಮ ಕುಟುಂಬಕ್ಕೆ ಮಾತ್ರ. ನಾನು ಮೊದಲ ಜನರೇಶನ್ ರಾಜಕಾರಣಿ, ಓರ್ವ ಸಾಮಾನ್ಯ ಕಾರ್ಯಕರ್ತೆ. ನನಗೆ ಇಂತಹ ಅವಕಾಶ ಸಿಕ್ಕಿರುವುದು ನನ್ನ ದೊಡ್ಡ ಸಾಧನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಖಾನಾಪುರದಿಂದ ಸ್ಪರ್ಧಿಸಲು ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಹಿಂದೆ ಸರಿದಿರುವ ವಿಚಾರಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಒಮ್ಮೆ ಸಕ್ಸಸ್ ಆಗಿ, ಮತ್ತೊಮ್ಮೆ ಫೇಲ್ ಆಗಬಹುದು. ಆದರೆ, ಪ್ರಯತ್ನಿಸದೇ ಇರಬಾರದು. ಹಾಗಾಗಿ, ನಾವು ಸುಮ್ಮನೆ ಕುಳಿತಿಲ್ಲ. ನಾವು ಪ್ರಯತ್ನಪಟ್ಟಿದ್ದೇವೆ. ಆದ್ದರಿಂದ ರಾಜಕಾರಣದಲ್ಲಿ ಶ್ರಮ ಮತ್ತು ದಿನಗಳು ಸೇರಿ ಇನ್ನಾವುದೇ ಇನ್ವೆಸ್ಟ್‌ಮೆಂಟ್ ಮಾಡಿದರೆ ಒಳ್ಳೆಯದು. ಅದು ದೀರ್ಘಕಾಲದ ಇನ್ವೆಸ್ಟ್‌ಮೆಂಟ್ ಆಗಿರುತ್ತದೆ. ಭವಿಷ್ಯದಲ್ಲಿ ಫಲ ಸಿಕ್ಕೇ ಸಿಗುತ್ತದೆ ಎಂದರು.
ಇದರಲ್ಲಿ ನನಗೆ ಸಂತೃಪ್ತಿ ಇದೆ. ಹಾಗಾಗಿ, ನಾಳೆ ಬೆಳಿಗ್ಗೆಯೇ ನಮಗೆ ಫಲ ಸಿಗಬೇಕು ಎಂಬುದು ಮೂರ್ಖತನದ ಪರಮಾವಧಿ ಆಗುತ್ತದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಓರ್ವ ಎಂಎಲ್ಸಿ. ತಮ್ಮ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು. ಇದರಲ್ಲಿ ಗೆದ್ದವರು, ಸೋತವರು ಯಾರು ಅಂತಾ ನನಗೆ ಗೊತ್ತಿಲ್ಲ. ಈ ಬಗ್ಗೆ ಸತೀಶ್ ಜಾರಕಿಹೊಳಿ ಮತ್ತು ಚನ್ನರಾಜ ಅವರೇ ಹೇಳಬೇಕು. ಬೆಳಗಾವಿ ಜಿಲ್ಲೆಯ ರೈತರ ಒಳಿತಿಗೋಸ್ಕರ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ ನನ್ನ ಸಹಮತವಿದೆ. ಅದನ್ನು ನಾನು ಸ್ವಾಗತಿಸುತ್ತೇನೆ ಎನ್ನುವುದಾದರೆ ಇದರಲ್ಲಿ ಗೆಲ್ಲಿಸುವ ಅರ್ಥವೂ ಇದೆ. ಒಮ್ಮೆ ನಾನು ಎಸ್ ಎಂದರೆ ಮುಗಿದು ಹೋಯಿತು. ಅವರ ವಿರುದ್ಧ ಯಾರು ನಿಲ್ಲುತ್ತಾರೆ ಎಂದು ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಮೈಸೂರು, ಉಡುಪಿ, ಬೆಳಗಾವಿಯಲ್ಲಿ 'ಅಕ್ಕಾ'ಪಡೆ: ಇಲಾಖೆ ಸುಧಾರಣೆ ಬಗ್ಗೆ ಇಂದಿನ ವಿಭಾಗೀಯ ಮಟ್ಟದ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು ಮುಂದಿನ ತಿಂಗಳಿಗೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹುಟ್ಟು ಹಬ್ಬದ ದಿನವೇ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅಂದೇ ಅಕ್ಕಾ ಪಡೆಗೆ ಚಾಲನೆ ನೀಡಲಾಗುವುದು. ಪ್ರಾಯೋಗಿಕವಾಗಿ ಮೈಸೂರು, ಉಡುಪಿ, ಬೆಳಗಾವಿಯಲ್ಲಿ ಅಕ್ಕಾಪಡೆ ಜಾರಿಗೆ ಬರಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಕ್ಕಾ ಪಡೆ ಕಾರ್ಯನಿರ್ವಹಿಸಲಿದೆ. ಎನ್‌ಸಿಸಿ ವಿದ್ಯಾರ್ಥಿಗಳು, ಮಹಿಳಾ ಪೇದೆಗಳು ಜನನಿಬೀಡ ಪ್ರದೇಶಗಳು ಹಾಗೂ ಮಹಿಳಾ ಕಾಲೇಜುಗಳ ಬಳಿ ಕಾರ್ಯನಿರ್ವಹಿಸಲಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಅಕ್ಕಾ ಪಡೆ ಆರಂಭಿಸಿದ್ದು, ಇದಕ್ಕಾಗಿ 1098 ಸಹಾಯವಾಣಿ ಬಳಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು.
ಸಕ್ಷಮ ಅಂಗನವಾಡಿ ಯೋಜನೆಯಡಿ 17 ಸಾವಿರ ಅಂಗನವಾಡಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ಇಡೀ ದೇಶದಲ್ಲಿ ಕರ್ನಾಟಕದಲ್ಲೆ ಹೆಚ್ಚು. ಎಲ್ ಕೆಜಿ, ಯುಕೆಜಿ ಅಂಗನವಾಡಿಯಲ್ಲಿ ಆರಂಭಿಸುವ ಬಗ್ಗೆ ಉದಯಪುರದಲ್ಲಿ ಹೋದ ವರ್ಷ ನಡೆದ ಸಭೆಯಲ್ಲಿ ನಾನು ಹೇಳಿದ್ದೆ. ಅಂಗನವಾಡಿಗಳಿಗೆ ಹೊಸ ಹೆಸರು ಕೊಡುವ ಬಗ್ಗೆ ತಿಳಿಸಿದ್ದೆ. ಸಾಂಕೇತಿಕವಾಗಿ ಬೆಂಗಳೂರಿನ 200 ಅಂಗನವಾಡಿಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಿದ್ದೇವೆ. ನಮ್ಮ ಅಂಗನವಾಡಿಗಳನ್ನು ಕೇಂದ್ರದ ಅಧಿಕಾರಿಗಳು ಬಂದು ಅಧ್ಯಯನ ಮಾಡಿಕೊಂಡು ಹೋಗಿ, ಶಿಕ್ಷಣ ಇಲಾಖೆ ಒಪ್ಪಿಸಿ, ದೇಶಾಧ್ಯಂತ 2.5 ಲಕ್ಷ ಅಂಗನವಾಡಿಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವ ಕರ್ನಾಟಕ ಸರ್ಕಾರದ ಮಾಡೆಲ್ (ಮಾದರಿ)ನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿದ್ದು, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳ ಕುರಿತು ಕೇಂದ್ರ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದರು.
ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ: 69 ಸಾವಿರಕ್ಕೂ ಅಧಿಕ ಅಂಗನವಾಡಿಗಳಲ್ಲಿ 35 ಲಕ್ಷ ಕಾರ್ಯಕರ್ತೆಯರು, 35 ಲಕ್ಷ ಸಹಾಯಕಿಯರ ಪೈಕಿ, 14 ಸಾವಿರ ಪದವೀಧರರು, 4 ಸಾವಿರ ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ. ಎಂಕಾಂ, ಡಿಪ್ಲೋಮಾ ಇಂಜಿನಿಯರಿಂಗ್ ಪಡೆದವರು ಇದ್ದಾರೆ. ಹಾಗಾಗಿ, ನಮ್ಮವರಿಗೆ ತರಬೇತಿ ಕೊಟ್ಟು ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಕಲಿಸಲು ಬಳಸಿಕೊಳ್ಳಲಾಗುತ್ತದೆ ಎಂದರು. 17 ಸಾವಿರ ಸಕ್ಷಮ ಅಂಗನವಾಡಿಗಳನ್ನು ಗುರುತಿಸಿದ್ದು, ಮೊದಲ ಹಂತದಲ್ಲಿ 5 ಸಾವಿರ ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, 18 ವರ್ಷದೊಳಗೆ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದರೆ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಹೀಗೆ 2,500 ಪ್ರಕರಣಗಳು ನಮ್ಮ ಇಲಾಖೆಯಲ್ಲಿ ವರದಿಯಾಗಿವೆ. ವಿವಾಹ ನಿಶ್ಚಯ ಮಾಡಿದ್ದು ಗೊತ್ತಾದರೂ ಕೂಡಲೇ ಪ್ರಕರಣ ದಾಖಲಿಸುತ್ತೇವೆ. ಪುರೋಹಿತರು, ಸಂಬಂಧಿಕರು ಸೇರಿ ಎಲ್ಲರ ಮೇಲೆ ಎಫ್ಐಆರ್ ದಾಖಲಿಸಿ, ಜಾಮೀನುರಹಿತ ವಾರಂಟ್ ಮಾಡುವ ಬಗ್ಗೆ ಹೊಸ ಕಾನೂನಿನಲ್ಲಿ ಸೇರಿಸಲಾಗಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟುವ ಕಾನೂನನ್ನು ಮತ್ತಷ್ಟು ಸದೃಢಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಎಷ್ಟೋ ಶಾಸಕರು, ಮಂತ್ರಿಗಳು ನಮ್ಮ ಜೊತೆಗೆ ಜಗಳ ಮಾಡುತ್ತಾರೆ. ನಮ್ಮ ರೈಟ್ ಹ್ಯಾಂಡ್, ಲೆಫ್ಟ್ ಹ್ಯಾಂಡ್ ಬಿಟ್ಟು ಬಿಡಿ ಅಂತಾರೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆ ಇಲ್ಲ. ಗ್ರಾ.ಪಂ. ಅಧ್ಯಕ್ಷ ಬಾಲ್ಯ ವಿವಾಹ ಆಗಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಕ್ರಮ ವಹಿಸಲಿದೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಸಾಕಷ್ಟು ಬಡ ಕುಟುಂಬಗಳನ್ನು ಮೇಲಕ್ಕೆ ಎತ್ತಲು ಕಳೆದ 13 ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಮನೆ ಮಗಳು ಅಂತಾ ಹೇಳಿಕೊಂಡು ಓಡಾಡುತ್ತೇನೆ. ಕ್ಷೇತ್ರದ 3 ಲಕ್ಷ ಮತದಾರರ ಶ್ರೇಯೋಭಿವೃದ್ಧಿ ನನ್ನ ಜವಾಬ್ದಾರಿ. ಸರ್ಕಾರ ಮತ್ತು ವೈಯಕ್ತಿಕವಾಗಿ ಮಾರ್ಕಂಡೇಯ ನಗರ ಪಂಚಾಯಿತಿ ವ್ಯಾಪ್ತಿಯ ಮಾವಿನಹೊಳಿ ಗ್ರಾಮದಲ್ಲಿ 9 ಮೊಮ್ಮಕ್ಕಳೊಂದಿಗೆ ಕಷ್ಟದ ಜೀವನ ನಡೆಸುತ್ತಿರುವ ಬಡ ಮಹಿಳೆಯ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕೋ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಗೃಹಲಕ್ಷ್ಮೀ ಹಣ ಶೀಘ್ರವೇ ಜಮೆ: ಗೃಹಲಕ್ಷ್ಮೀ 21 ಕಂತಿನ ಒಬ್ಬ ಮಹಿಳೆಗೆ 42 ಸಾವಿರ ರೂ. ಜಮೆ ಆಗಿದೆ. ಸುಮಾರು 1.24 ಕೋಟಿ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ 11 ಲಕ್ಷ ಫಲಾನುನಭವಿಗಳಿಗೆ 4,500 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ನಮ್ಮ ಸರ್ಕಾರ ಜಮೆ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯವರು ಲಾಡ್ಕಿ ಬೆಹನಾ ಅಂತಾ ಹೇಳಿ ಎರಡು ಕಂತು 2,500 ಸಾವಿರ ಹಾಕಿ, ಚುನಾವಣೆಯಲ್ಲಿ ಗೆದ್ದ ಬಳಿಕ ಆ ಹಣವನ್ನು 1500 ರೂಪಾಯಿಗೆ ಇಳಿಸಿದ್ದಾರೆ. ಆದರೆ, ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಕಂತಿನ ಹಣ ಶೀಘ್ರವೇ ಜಮೆ ಆಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.