ಅಪ್ರಾಪ್ತೆಯ ಮೇಲೆ ವಿವಾಹಿತ ಪುರುಷನಿಂದ ಲೈಂಗಿಕ ದೌರ್ಜನ್ಯ ಅಕ್ಷ್ಯಮ್ಯ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್​

ಅಪ್ರಾಪ್ತೆಯ ಮೇಲೆ ವಿವಾಹಿತ ಪುರುಷನಿಂದ ಲೈಂಗಿಕ ದೌರ್ಜನ್ಯ ಅಕ್ಷ್ಯಮ್ಯ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್​
By Published : September 9, 2025 at 6:26 PM IST

ಬೆಂಗಳೂರು: ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವಿವಾಹಿತ ಪುರುಷನು ಲೈಂಗಿಕ ದೌರ್ಜನ್ಯ ಎಸಗುವುದು ಕ್ಷಮಾರ್ಹ ಕೃತ್ಯವಲ್ಲ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಲ್ಲದೇ, ಮಹಿಳೆಯರು ಮತ್ತು ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕಾಗಿದೆ. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಸಂದೇಶ ರವಾನೆಯಾಗಬೇಕಾಗಿದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆ ಮೇಲ್ಮನವಿದಾರರಂತಹ ಪ್ರಬಲ ವ್ಯಕ್ತಿಗಳಿಂದ ಸುಲಭವಾಗಿ ಶೋಷಣೆಗೊಳಗಾಗುತ್ತಾರೆ. ಹೀಗಾಗಿ, ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರನ್ನಾಗಿಸಲು ಸಮಾಜಕ್ಕೆ ಬಲವಾದ ಸಂದೇಶ ನೀಡಲು ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿರುವ ನ್ಯಾಯಪೀಠ, ಅಪ್ರಾಪ್ತೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.

ತನ್ನದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆಯನ್ನು ಅಪಹರಣ ಮಾಡಿ ಲೈಂಗಿಕ ದೌರ್ನ್ಯವೆಸಗಿದ್ದಲ್ಲದೇ, ಹಣಕ್ಕಾಗಿ ಢಾಬಾವೊಂದರಲ್ಲಿ ಕೆಲಸಕ್ಕೆ ನಿಯೋಜಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಶಿಢ್ಲಘಟ್ಟ ತಾಲೂಕಿನ ಚಂದ್ರಪ್ಪ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ರಾಚಯ್ಯ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿ ಅರ್ಜಿದಾರ 37 ವರ್ಷ ವಯಸ್ಸಿನ ವಿವಾಹಿತನಾಗಿದ್ದಾನೆ. ಅಪ್ರಾಪ್ತೆಯನ್ನು ಮಾವಿನ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ಅಪ್ರಾಪ್ತೆ ಆಗಿರುವ ಅಂಶ ತಿಳಿದಿದ್ದರೂ ಢಾಬಾದಲ್ಲಿ ಕೆಲಸಕ್ಕೆ ನಿಯೋಜಿಸಿ, ಹಣವನ್ನೂ ಪಡೆದುಕೊಂಡಿದ್ದಾನೆ. ಆರೋಪಿಯ ಈ ನಡೆ ಕ್ಷಮಿಸಲಾರ್ಹವಲ್ಲದ ಕೃತ್ಯವಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಇದು 2022 ರಲ್ಲಿ ನಡೆದ ಪ್ರಕರಣವಾಗಿದೆ. ಜುಲೈ 7 ರಂದು ಸಂತ್ರಸ್ತೆ ಬಾಲಕಿಯು ಶಾಲೆಗೆ ತೆರಳಲು ಸಿದ್ದವಾಗುವಂತೆ ಆಕೆಯ ತಾಯಿ ತಿಳಿಸಿ, ಮನೆ ಕೆಲಸಕ್ಕೆಂದು ಹೊರಟು ಹೋಗಿದ್ದಳು. ಶಾಲೆಗೆ ತೆರಳಿದ್ದ ಬಾಲಕಿಯನ್ನು ಆರೋಪಿ ಚಂದ್ರಪ್ಪ ತನ್ನ ಬೈಕ್​​ನಲ್ಲಿ ಬಲವಂತವಾಗಿ ಕುಳ್ಳಿರಿಸಿಕೊಂಡು ಮಾವಿನ ತೋಟಕ್ಕೆ ಕರೆತಂದು ಲೈಂಗಿಕ ದೌರ್ಜನ್ಯ ಎಸಗಿದ್ದ.

ಇತ್ತ, ಸಂಜೆಯಾದರೂ ಮಗಳು ಪತ್ತೆಯಾಗದ ಕಾರಣ, ತಾಯಿಯು ಶಿಡ್ಲಘಟ್ಟ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿಯು ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ನಡೆಸಿದ ಬಳಿಕ ಢಾಬಾವೊಂದರಲ್ಲಿ ಕೆಲಸಕ್ಕೆ ನಿಯೋಜಿಸಿದ್ದ. ಒಂದು ವಾರದ ಬಳಿಕ ಮತ್ತೆ ಢಾಬಾಗೆ ಬಂದ ಆರೋಪಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪವಿದೆ. ಜತೆಗೆ, ಸಂತ್ರಸ್ತೆಯನ್ನು ಕೆಲಸಕ್ಕೆ ನಿಯೋಜಿಸಿದ್ದರಿಂದ ಢಾಬಾ ಮಾಲೀಕನಿಂದ ಹಣವನ್ನೂ ಪಡೆದುಕೊಂಡಿದ್ದ. ಈ ನಡುವೆ ಢಾಬಾದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದಿದ್ದ ಗ್ರಾಹಕರೊಬ್ಬರ ಮೊಬೈಲ್​ ಫೋನ್​ ಪಡೆದು, ಸಂಬಂಧಿಕರೊಬ್ಬರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಳು.

ತಕ್ಷಣ ಸಂಬಂಧಿಕರು, ಪೊಲೀಸರ ನೆರವಿನಿಂದ ಸಂತ್ರಸ್ತೆಯನ್ನು ಪತ್ತೆಹಚ್ಚಿದ್ದರು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದರು. ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಯ ವಿರುದ್ಧ ಐಪಿಸಿ, ಪೋಕ್ಸೋ ಮತ್ತು ಎಸ್ಸಿ, ಎಸ್ಟಿ ಕಾಯಿದೆಯಡಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಆರೋಪಿ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

📚 Related News