ತಿರುಪತಿ, ಆಂಧ್ರಪ್ರದೇಶ: ಸಾಮಾನ್ಯವಾಗಿ ಮನುಷ್ಯರು ಅನಾರೋಗ್ಯಕೀಡಾದರೆ ವೈದ್ಯರನ್ನು ಸಂಪರ್ಕಿಸಿ ಯಾವ ಕಾಯಿಲೆ ಎಂದು ತಿಳಿದುಕೊಂಡು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಮೂಕ ಪ್ರಾಣಿಗಳ ಸ್ಥಿತಿ ಹಾಗಿಲ್ಲ. ಅವು ಅಸ್ವಸ್ಥಗೊಂಡು ಮೃತಪಟ್ಟರೂ ಯಾವ ಕಾಯಿಲೆಯಿಂದ ಸಾವು ಸಂಭವಿಸಿದೆ ಎಂಬುದು ಗೊತ್ತಾಗಲ್ಲ. ಆದ್ದರಿಂದ ಪ್ರಾಣಿಗಳ ಸಾವಿಗೆ ಕಾರಣ ಪತ್ತೆ ಹಚ್ಚಲು ತಿರುಪತಿಯ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪಶುವೈದ್ಯಕೀಯ ರೋಗಶಾಸ್ತ್ರ ವಿಭಾಗವು ವಿಶಿಷ್ಟ ಜವಾಬ್ದಾರಿ ಹೊತ್ತುಕೊಂಡಿದೆ. ಈ ಮೂಲಕ ಮರಣೋತ್ತರ ಪರೀಕ್ಷೆಗಳ ಮೂಲಕ ಪ್ರಾಣಿಗಳ ರೋಗಗಳನ್ನು ಅಧ್ಯಯನ ಮಾಡುವುದು ಮತ್ತು ಸಂಶೋಧನೆ ಹಾಗೂ ಶಿಕ್ಷಣಕ್ಕಾಗಿ ಅವುಗಳ ಅವಶೇಷಗಳನ್ನು ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ.
900ಕ್ಕೂ ಹೆಚ್ಚು ಮಾದರಿ ಸಂರಕ್ಷಣೆ: ಹೌದು, ತಿರುಪತಿಯ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯವು ಕೆಲ ವರ್ಷಗಳ ಹಿಂದೆ ಆರಂಭಿಸಿದ ಪಶುವೈದ್ಯಕೀಯ ರೋಗಶಾಸ್ತ್ರ ವಸ್ತು ಸಂಗ್ರಹಾಲಯವು ಇದೀಗ ಏಷ್ಯಾದ ಅತಿ ದೊಡ್ಡ ರೋಗಶಾಸ್ತ್ರ ಮ್ಯೂಜಿಯಂ ಆಗಿದೆ. ಸದ್ಯ ಇಲ್ಲಿ ಪ್ರಾಣಿಗಳ 900ಕ್ಕೂ ಹೆಚ್ಚು ಮಾದರಿಗಳನ್ನು ಸಂರಕ್ಷಿಸಲಾಗಿದೆ.

ಇನ್ನು ಈ ವಸ್ತು ಸಂಗ್ರಹಾಲಯದಲ್ಲಿ ಆನೆಗಳು, ಸಿಂಹಗಳು, ಹುಲಿಗಳು, ಜಿಂಕೆಗಳು ಸೇರಿ ವಿವಿಧ ಕಾಡು ಮತ್ತು ಸಾಕು ಪ್ರಾಣಿಗಳ ದೇಹದ ಅಂಗಗಳನ್ನು ಸಂರಕ್ಷಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಶೇಷಾಚಲಂ ಕಾಡು ಮತ್ತು ಶ್ರೀ ವೆಂಕಟೇಶ್ವರ ಪ್ರಾಣಿಶಾಸ್ತ್ರ ಉದ್ಯಾನ (SV ಮೃಗಾಲಯ) ದಿಂದ ಸಂಗ್ರಹಿಸಲಾಗಿದೆ. ಪ್ರಾಣಿಗಳ ಸಾವಿಗೆ ಕಾರಣವಾದ ರೋಗಗಳು ಮತ್ತು ಆರೋಗ್ಯ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಅವಶೇಷಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಲಾಗುತ್ತದೆ. ನಂತರ, ದೀರ್ಘ ಕಾಲದ ವರೆಗೆ ಸಂರಕ್ಷಿಸಲು ಮಾದರಿಗಳನ್ನು ಶೇ 10ರಷ್ಟು ಫಾರ್ಮಾಲಿನ್ ದ್ರಾವಣವನ್ನು ಹೊಂದಿರುವ ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಲಾಗುತ್ತದೆ.
ಈ ಸಂರಕ್ಷಣೆ ಕೇವಲ ಪ್ರದರ್ಶನಕ್ಕಲ್ಲ. ಇದು ಪಶುವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಮೂಲ್ಯವಾದ ಶೈಕ್ಷಣಿಕ ಸಂಪನ್ಮೂಲವಾಗಿದೆ. ಈ ಮಾದರಿಗಳು ವಿವಿಧ ರೋಗಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಪಠ್ಯಪುಸ್ತಕಗಳು ಮತ್ತು ತರಗತಿಯ ಉಪನ್ಯಾಸಗಳಿಂದ ಪಡೆಯುವ ಜ್ಞಾನಕ್ಕೆ ಪೂರಕವಾಗಿವೆ. ಅಧ್ಯಾಪಕರು ಸರಳ ಮತ್ತು ಅರ್ಥವಾಗುವ ರೀತಿಯಲ್ಲಿ ಪಾಠಗಳನ್ನು ಮಾಡಲು ಈ ಮಾದರಿಗಳನ್ನು ಬಳಸುತ್ತಾರೆ. ಇವು ಪಠ್ಯ ಮತ್ತು ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ.

ಪಶುವೈದ್ಯಕೀಯ ರೋಗಶಾಸ್ತ್ರ ವಸ್ತುಸಂಗ್ರಹಾಲಯವು ಕ್ರಮೇಣ ವೈಜ್ಞಾನಿಕ ಕಲಿಕೆ ಮತ್ತು ಜ್ಞಾನದ ಕೇಂದ್ರವಾಗಿ ಬೆಳೆದಿದೆ. ವೈವಿಧ್ಯಮಯ ಸಂಗ್ರಹವನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವ ಮೂಲಕ, ಪರಿಸರ ಸಮತೋಲನ ಕಾಪಾಡಿಕೊಳ್ಳುವಲ್ಲಿ ಪ್ರಾಣಿಗಳ ಆರೋಗ್ಯದ ಮಹತ್ವವನ್ನು ಇದು ಒತ್ತಿ ಹೇಳುತ್ತದೆ. ತನ್ನ ವಿಶಿಷ್ಟ ವಿಧಾನ ಮತ್ತು ಸಂಗ್ರಹದೊಂದಿಗೆ SVVU ನಲ್ಲಿರುವ ಪಶುವೈದ್ಯಕೀಯ ರೋಗಶಾಸ್ತ್ರ ವಸ್ತುಸಂಗ್ರಹಾಲಯವು ಏಷ್ಯಾದಾದ್ಯಂತ ಪಶುವೈದ್ಯಕೀಯ ವಿಜ್ಞಾನದಲ್ಲಿ ಒಂದು ಹೆಗ್ಗುರುತಾಗಿ ತನ್ನ ಸ್ಥಾನವನ್ನು ಗಳಿಸಿದೆ. ಇದು ಸಂಶೋಧನೆ, ಶಿಕ್ಷಣ ಮತ್ತು ಸಂರಕ್ಷಣೆಯನ್ನು ಒಂದೇ ಸೂರಿನಡಿ ಸಂಯೋಜಿಸುತ್ತಿದೆ.