High court Notice to BCCI: ಉತ್ತರಾಖಂಡ ಹೈಕೋರ್ಟ್ ಮಂಗಳವಾರ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿದೆ. ಉತ್ತರಾಖಂಡ ಕ್ರಿಕೆಟ್ ಸಂಸ್ಥೆ (ಸಿಎಯು) ರಾಜ್ಯ ಸರ್ಕಾರದ ನಿಧಿಯ 12 ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್, ಬಿಸಿಸಿಐ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಉತ್ತರಾಖಂಡ ಲೆಕ್ಕ ಪರಿಶೋಧನಾ ವರದಿಯ ಆಧಾರದ ಮೇಲೆ ಆಟಗಾರರಿಗೆ ಬಾಳೆ ಹಣ್ಣುಗಳಿಗಾಗಿ 35 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಘಟನೆಯ ವಿವರ: ಡೆಹ್ರಾಡೂನ್‌ನ ಸಂಜಯ್ ರಾವತ್ ಮತ್ತು ಸಹಚರರು 2024-25ರ ಹಣಕಾಸು ವರ್ಷದ ಆಧಾರದ ಮೇಲೆ ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಬ್ಯಾಂಕ್ ಖಾತೆಯ ಕುರಿತು ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಲೆಕ್ಕಪತ್ರ ವರದಿಯನ್ನು ಹೈಲೈಟ್ ಮಾಡಿ, ಆಡಿಟ್ನಲ್ಲಿನ ಖರ್ಚುಗಳಿಂದ ತಾವು ಆಘಾತಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾರೆ. ಆಟಗಾರರಿಗೆ ಬಾಳೆ ಹಣ್ಣುಗಳನ್ನು ಒದಗಿಸಲು 35 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ರಿಪೋರ್ಟ್ನಲ್ಲಿದೆ. ಆದ್ದರಿಂದ, ರಾಜ್ಯ ಕ್ರಿಕೆಟ್ ಮಂಡಳಿಯ ಲೆಕ್ಕಪತ್ರ ವರದಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕ್ರಿಕೆಟ್ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೆಲವರು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಆಹಾರ ವೆಚ್ಚದ ನೆಪದಲ್ಲಿ ಸಂಘವು ಕೋಟಿಗಟ್ಟಲೇ ಹಣ ದುರುಪಯೋಗ ಮಾಡಿದೆ. ಮತ್ತು ರಾಜ್ಯದ ಆಟಗಾರರಿಗೆ ಅದಕ್ಕೆ ತಕ್ಕ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಮಧ್ಯೆ, ನ್ಯಾಯಮೂರ್ತಿ ಮನೋಜ್ ತಿವಾರಿ ಅವರ ಏಕಸದಸ್ಯ ಪೀಠವು ಈ ಅರ್ಜಿಗಳ ಮೇಲಿನ ವಾದಗಳನ್ನು ಆಲಿಸಿ ಈ ಆರೋಪಗಳನ್ನು ಪರಿಗಣನೆಗೆ ತೆಗೆದುಕೊಂಡ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಕಾರ್ಯಕ್ರಮಗಳಿಗೂ ಭಾರಿ ಖರ್ಚು: ರಾಜ್ಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಗಳಿಗೂ ಮಂಡಳಿಯು ಅವಶ್ಯಕತೆಗೆ ಮೀರಿ ಭಾರಿ ಮೊತ್ತವನ್ನು ಖರ್ಚು ಮಾಡಿದೆ ಎಂಬ ಆರೋಪವೂ ಇದೆ. ಆಡಿಟ್ ರಿಪೋರ್ಟ್ ಆಧಾರದ ಮೇಲೆ, ಕಾರ್ಯಕ್ರಮ ನಿರ್ವಹಣಾ ಶುಲ್ಕಕ್ಕಾಗಿ 6.4 ಕೋಟಿ ರೂ., ಪಂದ್ಯಾವಳಿ ನಿರ್ವಹಣೆ, ಪ್ರಾಯೋಗಿಕ ಪಂದ್ಯಗಳು ಮತ್ತು ಇತರ ಅಗತ್ಯಗಳಿಗಾಗಿ 26.3 ಕೋಟಿ ರೂ. ಖರ್ಚು ಮಾಡಲಾಗಿದೆ. ಆದಾಗ್ಯೂ, ಕಳೆದ ವರ್ಷ ಈ ವೆಚ್ಚ 22.30 ಕೋಟಿ ರೂ. ಆಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಟೆಂಡರ್ನಲ್ಲೂ ಅವ್ಯವಹಾರ: ಇದರ ನಡುವೆಯೇ ಇದೇ ತಿಂಗಳು 5 ರಂದು ಇದೇ ಕ್ರಿಕೆಟ್ ಮಂಡಳಿಗೆ ಸಂಬಂಧಿಸಿದ ಮತ್ತೊಂದು ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತು. 2025ರ ಋತುವಿನ ಉತ್ತರಾಖಂಡ ಪ್ರೀಮಿಯರ್ ಲೀಗ್‌ನಲ್ಲಿನ ಟೆಂಡರ್‌ಗಳ ಬಗ್ಗೆಯೂ ನ್ಯಾಯಾಲಯದಲ್ಲಿ ವಾದಗಳು ನಡೆದವು. ಸಂಸ್ಥೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಸಹ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಒಂದೇ ಕಂಪನಿಗೆ ಟೆಂಡರ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಸುರೇಂದ್ರ ಭಂಡಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್, ನ್ಯಾಯಮೂರ್ತಿ ನರೇಂದ್ರ ಮತ್ತು ಸುಭಾಷ್ ಅವರಿದ್ದ ದ್ವಿಸದಸ್ಯ ಪೀಠವೂ, ಬಿಸಿಸಿಐ ಮತ್ತು ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ ಮಂಡಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಇದಕ್ಕೆ ಉತ್ತರ ಕೊಡುವಂತೆ ಸೂಚಿಸಿದೆ. ಸುರೇಂದ್ರ ಭಂಡಾರಿ ಅವರು ತಮ್ಮ ಅರ್ಜಿಯಲ್ಲಿ, ಉತ್ತರಾಖಂಡ ಕ್ರಿಕೆಟ್ ಸಂಸ್ಥೆ 2019ರಲ್ಲಿ ಬಿಸಿಸಿಐ ಅಡಿ ತೆಗೆದುಕೊಳ್ಳಲಾಯ್ತು. ಮತ್ತು ಅಂದಿನಿಂದ ಮಂಡಳಿ ಬಿಸಿಸಿಐನಿಂದ 22 ಕೋಟಿ ರೂ.ಗಳಿಗೂ ಹೆಚ್ಚು ಹಣ ಪಡೆದುಕೊಂಡಿದೆ.
ಆದರೆ, ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಅವರು ಆರೋಪಿಸಿದರು. ಅಧಿಕಾರಿಗಳು ಮಂಡಳಿಗೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಮತ್ತು ಆಟಗಾರರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಭಂಡಾರಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.