ಹಸುವಿನ ಹೊಟ್ಟೆಯಲ್ಲಿತ್ತು 40 ಕೆ.ಜಿ ಪ್ಲಾಸ್ಟಿಕ್​!

ಹಸುವಿನ ಹೊಟ್ಟೆಯಲ್ಲಿತ್ತು 40 ಕೆ.ಜಿ ಪ್ಲಾಸ್ಟಿಕ್​!
By Published : September 9, 2025 at 1:00 PM IST

ಬರ್ಹಾಂಪುರ(ಒಡಿಶಾ): ಬಿಡಾಡಿ ಹಸುವಿನ ಹೊಟ್ಟೆಯಲ್ಲಿದ್ದ 40 ಕೆ.ಜಿ ಪಾಲಿಥಿನ್​ ಬ್ಯಾಗ್​ಗಳನ್ನು ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಪಶು ವೈದ್ಯಾಧಿಕಾರಿಗಳು ಹೊರತೆಗೆದಿದ್ದಾರೆ.

ಸೋಮವಾರ ಐದು ವರ್ಷದ ಹಸುವಿಗೆ ಸತತ ಮೂರು ಗಂಟೆ ಶಸ್ತ್ರಚಿಕಿತ್ಸೆ ನಡೆಸಿದ ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಅಂಜನ್​ ಕುಮಾರ್​ ದಾಸ್ ಅವರು ಹೊಟ್ಟೆಯಲ್ಲಿದ್ದ ಪಾಲಿಥಿನ್​ ಬ್ಯಾಗ್‌ಗಳ ಜೊತೆಗೆ ಜೀರ್ಣವಾಗದೇ ಉಳಿದ ವಸ್ತುಗಳನ್ನೂ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಹಸುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯ ಹಿನ್ನೆಲೆಯಲ್ಲಿ ಒಂದು ವಾರ ಹಸು ಆಸ್ಪತ್ರೆಯಲ್ಲಿರಲಿದೆ ಎಂದು ತಿಳಿಸಿದರು.

ಬೀದಿ ಬದಿಯ ಹಸುಗಳು ಪ್ಲಾಸ್ಟಿಕ್​ ಕವರ್​ನಲ್ಲಿ ಹಾಕಿರುವ ಅಳಿದುಳಿದ ಆಹಾರ ಸೇವನೆ ಮಾಡುವಾಗ ಪ್ಲಾಸ್ಟಿಕ್‌ ಸೇರಿಸಿ ತಿನ್ನುತ್ತವೆ. ಇದರಿಂದಾಗಿ ಅವುಗಳ ಕರುಳು ಬ್ಲಾಕ್​ ಆಗುತ್ತದೆ. ಇದು ದೀರ್ಘಕಾಲ ಹಾಗೆಯೇ ಇದ್ದರೆ, ಅಸುನೀಗುತ್ತವೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ತಂಡದ ಮುಂದಾಳು ಸತ್ಯ ನಾರಾಯಣ್​ ಕರ್​ ಹೇಳಿದರು.

ಪ್ಲಾಸ್ಟಿಕ್ ತಿಂದ ಹಸುವಿನ ಆರೋಗ್ಯ ತೀರಾ ಹದಗೆಟ್ಟಿದ್ದು, ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಸುಧಾರಣೆ ಕಂಡಿರಲಿಲ್ಲ. ಹೀಗಾಗಿ, ಹಸುವನ್ನು ಭಾನುವಾರ ಹಿಲ್ಪಟ್ನಾ ಪ್ರದೇಶದಿಂದ ಪ್ರಾಣಿಗಳ ಆಂಬ್ಯುಲೆನ್ಸ್‌ನಲ್ಲಿ ಪಶುವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಹಸು ಸಗಣಿ ಹಾಕಲು ಮತ್ತು ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದು, ನೋವಿನಿಂದಾಗಿ ಆಗಾಗ್ಗೆ ಸಂಕಟ ಪಡುತ್ತಿತ್ತು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್​ ಇರುವುದು ಪತ್ತೆಯಾಗಿದೆ. ಇದನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಯಿತು ಎಂದು ಅವರು ಮಾಹಿತಿ ನೀಡಿದರು.

2023ರಲ್ಲೂ ಕೂಡ ಇದೇ ಆಸ್ಪತ್ರೆಯ ಪಶು ವೈದ್ಯಕೀಯ ಸರ್ಜನ್​, ಹಸುವಿನ ಹೊಟ್ಟೆಯಿಂದ ಸುಮಾರು 30 ಕೆ.ಜಿ ಪ್ಲಾಸ್ಟಿಕ್​ ವಸ್ತುಗಳನ್ನು ತೆಗೆದಿದ್ದರು. ಈ ಘಟನೆ ಪ್ಲಾಸ್ಟಿಕ್​ ನಿಷೇಧದ ನಡುವೆಯೂ ನಗರದಲ್ಲಿ ಪ್ಲಾಸ್ಟಿಕ್​ ಮತ್ತು ಪಾಲಿಥಿನ್​ಗಳ ಬಳಕೆಯ ಕುರಿತು ತಿಳಿಸಿತ್ತು ಎಂದು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅಭಿಯಾನ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸುಧೀರ್ ರೌತ್ ಹೇಳಿದರು.

ಇದೇ ವೇಳೆ, ಪಾಲಿಥಿನ್ ಬಳಕೆಯ ವಿರುದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಅವರು ಬೆರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ: ಜಗತ್ತಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ದೊಡ್ಡ ಅಪಾಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡುವುದು ಸದ್ಯದ ತಲೆನೋವು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲಾಸ್ಟಿಕ್ ಬಳಸಿ ಕರ್ನಾಟಕದ ಕರಾವಳಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಮೂಲಕ ವಿನೂತನ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಈ ಪ್ರಯತ್ನ ಪ್ಲಾಸ್ಟಿಕ್ ತ್ಯಾಜ್ಯ ಸದ್ಬಳಕೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸುವ ಮೂಲಕ ಹೊಸ ಪ್ರಯತ್ನ ಮಾಡಲಾಗಿದೆ. ಮಂಗಳೂರಿನ ನಂತೂರಿನಿಂದ ತಲಪಾಡಿಯವರೆಗೆ ಮತ್ತು ಮಂಗಳೂರಿನ ಮುಕ್ಕದಿಂದ ಉಡುಪಿ ಜಿಲ್ಲೆಯ ಸಾಸ್ತಾನದವರೆಗೆ ನಿರ್ಮಿಸಲಾದ ಸರ್ವೀಸ್ ರಸ್ತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಡಾಮರೀಕರಣ ಮಾಡಲಾಗಿದ್ದು, ಈ ರಸ್ತೆಗಳ ಕಾರಣದಿಂದ ನೂರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯಗಳು ಸದ್ಬಳಕೆ ಮಾಡಲಾಗಿದೆ.

📚 Related News