'ವಿಷ ಕೊಡಿ' ಎಂದ ದರ್ಶನ್: 'ಅಣ್ಣನ ಪರಿಸ್ಥಿತಿ ಯಾವ ಶತ್ರುಗಳಿಗೂ ಬೇಡ' ಎಂದ ನಟ ರಾಜವರ್ಧನ್

'ವಿಷ ಕೊಡಿ' ಎಂದ ದರ್ಶನ್: 'ಅಣ್ಣನ ಪರಿಸ್ಥಿತಿ ಯಾವ ಶತ್ರುಗಳಿಗೂ ಬೇಡ' ಎಂದ ನಟ ರಾಜವರ್ಧನ್
By Published : September 9, 2025 at 5:35 PM IST

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಲುಕಿ, ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್​ ಅವರಿಂದು ನ್ಯಾಯಾಧೀಶರೆದುರು ಮಾತನಾಡಿರುವ ಮಾತು ಅವರ ಕುಟುಂಬ, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ನೋವುಂಟುಮಾಡಿದೆ.

ಹೌದು, ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವಿಚಾರವಾಗಿ ಬೆಂಗಳೂರಿನ ಸೆಷನ್ಸ್ ಕೋರ್ಟ್​​ನಲ್ಲಿ ವಾದ ಮಂಡಿಸಲಾಗಿತ್ತು. ಆದ್ರೆ ಈ ವಿಚಾರದಲ್ಲಿ ದರ್ಶನ್​ಗೆ ಸ್ವಲ್ಪ ರಿಲೀಫ್​​ ಸಿಕ್ಕಿದೆ. ಮತ್ತೊಂದೆಡೆ, ಜೈಲು ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸುವ ಅನಿವಾರ್ಯತೆ ಎದುರಾದ ಕಾರಣ ದರ್ಶನ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ. ನಾನು ಬಿಸಿಲು ನೋಡಿ 30 ದಿನಗಳಾಗಿವೆ. ನನ್ನ ಕೈಗೆ ಫಂಗಸ್ ಬಂದಿದೆ. ನನಗೊಬ್ಬನಿಗೆ ಮಾತ್ರ ವಿಷ ನೀಡುವಂತೆ ಆದೇಶಿಸಬೇಕು ಅಂತಾ ದರ್ಶನ್ ಕೇಳಿಕೊಂಡಿದ್ದಾರೆ. ಇದು ದರ್ಶನ್ ಕುಟುಂಬದವರಿಗೆ ನೋವುಂಟು ಮಾಡಿದೆ.

ದರ್ಶನ್ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್ ದರ್ಶನ್ ಅವರದ್ದು ಎಂಥ ವ್ಯಕ್ತಿತ್ವ ಎಂಬುದನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

''ದರ್ಶನ್ ಅಣ್ಣ ನೋಡಲು ಹಾಗೂ ಅವರ ಮಾತುಗಳು ಒರಟು ಇರಬಹುದು. ಆದ್ರೆ, ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಣ್ಣ ಬಹಳ ಮೃದು ಸ್ವಭಾವದವರು. ಅವರು ಮೃದು ಸ್ವಭಾವದವರು ಆಗಿರೋ ಕಾರಣದಿಂದಲೇ ಪ್ರಾಣಿಗಳು ಸಹ ಅವರನ್ನು ಇಷ್ಟಪಡುತ್ತವೆ. ಅವರು ಒರಟ ಮನುಷ್ಯ ಆಗಿದ್ದರೆ ಯಾವ ಪ್ರಾಣಿಗಳೂ ಅವರ ಹತ್ತಿರ ಬರುತ್ತಿರಲಿಲ್ಲ'' - ರಾಜವರ್ಧನ್.

''ಮಾತು ಮುಂದುವರಿಸಿದ ನಟ, ಇಂದು ಅಣ್ಣ ಹೇಳಿರುವ ಮಾತುಗಳಿಂದ ನನಗೆ ತುಂಬಾ ನೋವಾಗುತ್ತಿದೆ. ಅವರ ಕುಟುಂಬಕ್ಕೆ ಎಷ್ಟು ಬೇಸರ ಉಂಟು ಮಾಡಿರುತ್ತದೆ. ಸಮಸ್ಯೆ ಆಗಿದೆ. ಹಾಗಂತ ಅಣ್ಣ ಇಂತಹ ಮಾತುಗಳನ್ನು ಆಡಬಾರದು. ಸದ್ಯದಲ್ಲೇ ನಾವೆಲ್ಲ ಚಾಲೆಂಜಿಂಗ್​ ಸ್ಟಾರ್​ನನ್ನು ಸೆಲೆಬ್ರೆಟ್ ಮಾಡುವ ದಿನಗಳು ಬರುತ್ತವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೇ, ''ಯಾವ ಶತ್ರುಗಳಿಗೂ ಜೈಲುವಾಸ ಬೇಡ. ಅದೊಂದು ಕೆಟ್ಟ ಅನುಭವ. ಅಣ್ಣ ಮೊದಲ ಬಾರಿಗೆ ಜೈಲಿಗೆ ಹೋಗಿ ಬಂದಾಗ ನಾನು ಕೇಳಿದ್ದೆ. ನಟ ಸಂಜಯ್ ದತ್ ಒಂದು ಸಂದರ್ಶನದಲ್ಲಿ ಜೈಲಿನಲ್ಲಿದ್ದಾಗ ನನಗೆ ನಿದ್ದೆ ಮಾಡೋದಕ್ಕೆ ಆಗುತ್ತಿರಲಿಲ್ಲವೆಂದು ತಿಳಿಸಿದ್ದರು. ಆ ಕಾರಣಕ್ಕೆ ನಾನು ದರ್ಶನ್ ಅಣ್ಣನಲ್ಲಿ ಈ ಬಗ್ಗೆ ಕೇಳಿದ್ದೆ. ಅವರು ಕೂಡಾ ಸಾಕಷ್ಟು ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದರು. ಜೈಲು ಅನ್ನೋದು ಒಂದು ನರಕ. ಅಲ್ಲಿ ಸದಾ ಕೆಟ್ಟವರು ಕೆಟ್ಟದ ಬಗ್ಗೆ ಮಾತನಾಡುತ್ತಿರುತ್ತಾರೆ. ಅದ್ರಿಂದ ಯಾರು ಹೊರಗಡೆ ಬಂದು ಹೊಸ ಜೀವನ ರೂಪಿಸಿಕೊಳ್ಳುತ್ತಾರೋ, ಅವರ ಹೊಸ ಬದುಕು ಶುರುವಾಗುತ್ತದೆ. ಇಲ್ಲ ಅಂದ್ರೆ ಮತ್ತೆ ಕ್ರೈಮ್ ಮಾಡಿ ಮತ್ತೆ ಅದೇ ಜಾಗಕ್ಕೆ ಹೋಗಬೇಕಾಗುತ್ತದೆ ಅಂತಾ ಅಣ್ಣ ಹಲವು ವಿಚಾರಗಳನ್ನು ಹೇಳಿದ್ರು. ಈಗ ಅವರ ಪರಿಸ್ಥಿತಿ ನೋಡಿ ನಮಗೆ ತುಂಬಾ ನೋವಾಗುತ್ತದೆ. ಅದಷ್ಟೂ ಬೇಗ ಅಣ್ಣ ಹೊರಗಡೆ ಬರಲಿ'' ಎಂದು ತಿಳಿಸಿದರು.

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಫ್ಲೈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಬಿಚ್ಚುಗತ್ತಿ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಈ ಸಿನಿಮಾ ಬಿಡುಗಡೆ ಸಂದರ್ಭ, ರಾಜವರ್ಧನ್ ಅವರಿಗೆ ನಟ ದರ್ಶನ್ ಅವರು ಆಡಿಯೋ ಬಿಡುಗಡೆ ಹಾಗೂ ಟ್ರೇಲರ್ ಬಿಡುಗಡೆ ಅಂತಾ ಸಾಕಷ್ಟು ಸಪೋರ್ಟ್ ಮಾಡಿದ್ದಾರೆ. ರಾಜವರ್ಧನ್ ಸಿನಿಮಾಗೆ ಬರುವುದಕ್ಕಿಂತ ಮುಂಚೆ ಹಾಸ್ಯ ನಟ ಡಿಂಗ್ರಿ ನಾಗರಾಜ್ ಮಗ ಅಂತಾ ದರ್ಶನ್​ಗೆ ಪರಿಚಯವಿತ್ತು. ಬಿಚ್ಚುಗತ್ತಿ ಸಿನಿಮಾ ಸಂದರ್ಭ, ರಾಜವರ್ಧನ್ ದರ್ಶನ್ ಆತ್ಮೀಯ ಗೆಳೆಯರಾದರು.

ಈ ಗೆಳತನದಿಂದ ದರ್ಶನ್ ಅವರ ಸಿನಿಮಾ ಅಥವಾ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ರಾಜವರ್ಧನ್ ಸಹ ಇರುತ್ತಿದ್ರು. ಹಲವು ಬಾರಿ ದರ್ಶನ್ ಜೊತೆ ಮೈಸೂರಿನಲ್ಲಿರುವ ಅವರ ಫಾರ್ಮ್ ಹೌಸ್​ನಲ್ಲಿ ರಾಜವರ್ಧನ್ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಆದ್ರೀಗ ದರ್ಶನ್​ ಜೈಲು ಸೇರಿದ್ದು, ಅಣ್ಣನಿಗೆ ಈ ಪರಿಸ್ಥಿತಿ ಬರಬಾರದಿತ್ತು ಅಂತಾ ಬೇಸರ ವ್ಯಕ್ತಪಡಿಸಿದರು.

📚 Related News